ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ: ಅಪರ್ಣಾ ಕೊಳ್ಳಾ ಕಳವಳ

ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ: ಅಪರ್ಣಾ ಕೊಳ್ಳಾ ಕಳವಳ
Published : 23 ಆಗಸ್ಟ್ 2024, 6:54 IST
Last Updated : 23 ಆಗಸ್ಟ್ 2024, 6:54 IST
ಫಾಲೋ ಮಾಡಿ
Comments

ಕಲಬುರಗಿ: ‘ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಪೋಕ್ಸೊ ಪ್ರಕರಣವನ್ನು ತಪ್ಪದೆ ದಾಖಲಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳಾ ಅವರು ಪೊಲೀಸರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಂಡುಬಂದ ತಕ್ಷಣವೇ ಸಂಬಂಧಪಟ್ಟವರ ಮೇಲೆ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಳ್ಳಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮಕ್ಕಳು ಹಾಗೂ ಪೋಷಕರಿಗೆ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ಪೋಕ್ಸೊ, ಬಾಲ್ಯವಿವಾಹ ಹಾಗೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಿದರೆ ಸಾಲದು. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿಯೂ ಕೊಡಬೇಕು’ ಎಂದರು.

‘ಜೇವರ್ಗಿಯ ಶಾಲೆಗಳಿಗೆ ಭೇಟಿ ನೀಡಿದಾಗ, ತರಗತಿ ಕೋಣೆಗಳಲ್ಲಿ ಅವ್ಯವಸ್ಥೆ ಕಂಡುಬಂತು. ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಪ್ರತಿಯೊಬ್ಬ ಮುಖ್ಯಶಿಕ್ಷಕ ಬಾಲ್ಯವಿವಾಹ ನಿಷೇಧ ಅಧಿಕಾರಿಯಾಗಿದ್ದು, ಬಾಲ್ಯವಿವಾಹ ತಡೆಯುವುದು ಅವರ ಜವಾಬ್ದಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು ಸೇರಿದಂತೆ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು’ ಎಂದರು.

‘ಶಾಲೆಗೆ ಹೋಗುವ ಮಕ್ಕಳಿಗೆ ಬಸ್‌ಗಳ ಕೊರತೆಯಾದರೆ, ಸಾರಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಹೆಚ್ಚುವರಿ ಜಿಲ್ಲಾಧಿಕಾರಿಗಳ ಗಮನಕ್ಕೆ, ತಂದು ಬಸ್‌ಗಳ ವ್ಯವಸ್ಥೆ ಮಾಡಬೇಕು. ಕೃಷಿ ಹೊಂಡಗಳ ಸುತ್ತ ಬೇಲಿ ಹಾಕಿ ಎಚ್ಚರ ವಹಿಸಬೇಕು. ವಿದ್ಯುತ್ ತಂತಿಗಳು ಜೋತು ಬಿದ್ದು, ಮಕ್ಕಳ ಕೈಗೆ ಎಟಕುವಂತೆ ಕಂಡು ಬಂದಲ್ಲಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್‌ಪಿ ಎನ್. ಶ್ರೀನಿಧಿ, ಎಎಸ್‌ಪಿಗಳಾದ ಬಿಂದುಮಣಿ, ಜಿ. ಚಂದ್ರಶೇಖರ, ಡಿಡಿಪಿಐ ಸೂರ್ಯಕಾಂತ ಮದಾನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ, ಅಧಿಕಾರಿ ಶಿವಶರಣಪ್ಪ, ಕಾರ್ಯಕ್ರಮ ನಿರೂಪಣೆಗಾರ ಮುರಗೇಶ ಗುಣಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಉಪಸ್ಥಿತರಿದ್ದರು.

ಶಿಸ್ತು ಕ್ರಮದ ಎಚ್ಚರಿಕೆ

‘ಒಂದು ಸಲ ವ್ಯಕ್ತಿಯೊಬ್ಬ ಪೋಕ್ಸೊ ಪ್ರಕರಣದಲ್ಲಿ ಬಂಧನವಾದರೆ ಆ ಪ್ರಕರಣದಿಂದ ಹೊರಬರುವುದು ಸುಲಭವಲ್ಲ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು. ‘ಕೇಂದ್ರ ಕಾರಾಗೃಹದಲ್ಲಿ ಬಂಧಿತರಾದವರಲ್ಲಿ ಅತಿ ಹೆಚ್ಚಿನವರು 18 ವರ್ಷದೊಳಗಿನವರು ಇದ್ದಾರೆ. ಇಂತಹ ಪ್ರಕರಣದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಬೇರೆಯವರಿಗೆ ಪಾಠವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT