ಬುಧವಾರ, ಜನವರಿ 19, 2022
23 °C
500 ಹೆಕ್ಟೇರ್‌ಗೂ ಅಧಿಕ ಪ್ರದೇಶದ ದ್ರಾಕ್ಷಿ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ

ಮಂಜು ಮುಸುಕಿ ಮಣ್ಣುಪಾಲಾದ ದ್ರಾಕ್ಷಿ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನಲ್ಲಿ ಬೆಳೆದಿದ್ದ 500 ಹೆಕ್ಟೇರ್‌ಗೂ ಹೆಚ್ಚಿನ ಪ್ರಮಾಣದ ದ್ರಾಕ್ಷಿ ಬೆಳೆಯು ಈಚೆಗೆ ಸುರಿದ ಮಳೆ ಹಾಗೂ ಪ್ರತಿ ದಿನ ಕವಿಯುತ್ತಿರುವ ಮಂಜಿನಿಂದ ಬಹುಪಾಲು ನಷ್ಟವಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದ್ರಾಕ್ಷಿ ಬೆಳೆಯಲು ರೈತರು ವರ್ಷಗಟ್ಟಲೆ ನಿರ್ವಹಣೆ ಮಾಡುತ್ತಾರೆ. ದಿನಾಲು ಅದಕ್ಕೆ ಔಷಧವನ್ನು ಸಿಂಪಡಣೆ ಮಾಡುತ್ತಾರೆ. ಸಣ್ಣ ರೋಗ ಬಂದರೂ ಈ ಬೆಳೆ ಹಾಳಾಗುತ್ತದೆ. ಹಾಗಾಗಿ, ರೈತರು ಕಣ್ಣಲ್ಲಿ ಕಣ್ಣಿಟ್ಟು ದ್ರಾಕ್ಷಿ ಬೆಳೆಯನ್ನು ನಿರ್ವಹಣೆ ಮಾಡುತ್ತಾರೆ. ಒಂದು ವರ್ಷದವರೆಗೆ ನಿರಂತರವಾಗಿ ಔಷಧ, ಗೊಬ್ಬರ, ನೀರಿನ ವ್ಯವಸ್ಥೆ ಮಾಡಿ ಪೋಷಣೆ ಮಾಡಿದ್ದ ದ್ರಾಕ್ಷಿ ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಮಂಜಿನ ಹನಿಗಳಿಂದ ಹಾಳಾಗಿದೆ.

ದ್ರಾಕ್ಷಿ ಬೆಳೆ ಹಾಳಾಗಿದ್ದರಿಂದ ರೈತರು ಕಂಗೆಟ್ಟು ತಹಸೀಲ್ದಾರ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಕೊಡಲು ಆರಂಭಿಸಿದ್ದಾರೆ. ಪ್ರತಿವರ್ಷ ದ್ರಾಕ್ಷಿ ಬೆಳೆಗಾರರಿಗೆ ಒಂದಲ್ಲ ಒಂದು ಕಂಟಕ ಬಂದೇ ಬರುತ್ತದೆ. ಈ ವರ್ಷ ಬೆಳೆ ಚೆನ್ನಾಗಿತ್ತು. ನವೆಂಬರ್ ತಿಂಗಳಲ್ಲಿ ಹೊಗೆ ಮಂಜು ಕಾಣಿಸಿಕೊಂಡಿದ್ದರಿಂದ ದ್ರಾಕ್ಷಿ ಗಿಡದಲ್ಲಿ ಬೆಳೆದಿರುವ ಎಲ್ಲಾ ಹಣ್ಣುಗಳು ಉದುರಿ ಹೋಗಿವೆ. ಇದರಿಂದ ಒಂದು ವರ್ಷದವರೆಗೆ ಮಾಡಿರುವ ಶ್ರಮ ಹಾಗೂ ಹಣ ಎಲ್ಲವೂ ಹಾಳಾಗಿ ಹೋಗಿದೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು. ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ದ್ರಾಕ್ಷಿ ಬೆಳೆಗಾರರಾದ ಮಾಶಾಳದ ದೇವರಾಜ್ ಕುಂಬಾರ್, ಬಳೂರ್ಗಿ ಸುಭಾಷ್ ಗುತ್ತೇದಾರ, ರಹೀಂ ಸಾಬ್, ಸದಾಶಿವ ಉಡಚಣ ಹೇಳುತ್ತಾರೆ.

’ರೈತರು ಒಮ್ಮೆ ದ್ರಾಕ್ಷಿ ಬೆಳೆ ನಾಟಿ ಮಾಡಿದರೆ ಸುಮಾರು 30 ವರ್ಷಗಳವರೆಗೆ ಫಸಲು ಪಡೆಯಬಹುದು. ಅಕಸ್ಮಾತಾಗಿ ಬೆಳೆ ಹಾಳಾದರೆ ಬೇರೆ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಮತ್ತೆ ದ್ರಾಕ್ಷಿ ಬೆಳೆಯಲು ಒಂದು ವರ್ಷ ಕಾಯಬೇಕು. ಅದಕ್ಕಾಗಿ ಮತ್ತೆ ಹಣ ಖರ್ಚು ಮಾಡಬೇಕು. ಹಿಂದೆ ದ್ರಾಕ್ಷಿ ಬೆಳೆಯಲು ಮಾಡಿರುವ ಸಾಲ ತೀರಿಸದೆ ಕಷ್ಟ ಪಡುತ್ತಿರುವಾಗಲೇ ಮತ್ತೆ ಖರ್ಚು ಮಾಡುವ ಅನಿವಾರ್ಯತೆ ಬಂದಿದೆ‘ ಎಂದು ಬಳೂರ್ಗಿ ಗ್ರಾಮದ ದ್ರಾಕ್ಷಿ ಬೆಳೆಗಾರರ ಅಶೋಕ್ ವೆಂಕಯ್ಯ ಗುತ್ತೇದಾರ ಹೇಳುತ್ತಾರೆ.

’ರೈತರು ಪರಿಹಾರಕ್ಕಾಗಿ ಅರ್ಜಿ ನೀಡಿದ್ದಾರೆ. ಪರಿಶೀಲನೆ ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು‘ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರ ಹೊನ್ನಪ್ಪಗೋಳ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.