ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ | ಕುಸಿದ ಅಂತರ್ಜಲ: ಹೆಚ್ಚಿದ ನೀರಿನ ಬವಣೆ

Published 29 ಫೆಬ್ರುವರಿ 2024, 5:02 IST
Last Updated 29 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಮೋಘಾ ಕೆ. ಗ್ರಾಮದಲ್ಲಿ ಬಿಸಿಲು ಅಧಿಕಗೊಂಡಂತೆ ಕುಡಿಯುವ ನೀರಿನ ಮೂಲಗಳು ಬತ್ತಿ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಿದೆ, ದಿನವಿಡೀ ಮಹಿಳೆಯರು ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾದ ಮೋಘಾ ಕೆ. ಗ್ರಾಮದಲ್ಲಿ 270 ಮನೆಗಳಿವೆ. ಗ್ರಾಮದಲ್ಲಿ ಮೂರು ಕೊಳವೆ ಬಾವಿ, ಒಂದು ತೆರೆದ ಬಾವಿ ನೀರಿನ ಮೂಲಗಳಾಗಿದ್ದವು. ಈಗ ಗ್ರಾಮದ ಪರಮೇಶ್ವರ ದೇವಸ್ಥಾನ ಸಮೀಪದಲ್ಲಿನ ಕೊಳವೆಬಾವಿಗೆ ಮಾತ್ರ ನೀರು ಇದೆ. ಉಳಿದಂತೆ ಗ್ರಾಮದ ಮಧ್ಯಭಾಗದಲ್ಲಿನ ಬಾವಿ ಹಾಗೂ ಎರಡು ಕೊಳವೆಬಾವಿಗಳ ಅಂತರ್ಜಲ ಕುಸಿತ ಕಂಡಿದೆ. ಹೀಗಾಗಿ ಗ್ರಾಮಸ್ಥರು ಒಂದು ಕೊಡಪ ನೀರಿಗಾಗಿಯೂ ದಿನವಿಡೀ ತಡಕಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಭೀಮ ನಗರದಲ್ಲಿನ ಕೊಳವೆಬಾವಿಗೆ ಅಲ್ಪಸ್ವಲ್ಪ ನೀರು ಬರುತ್ತಿರುವದರಿಂದ ಗ್ರಾಮದ ನಿವಾಸಿಗಳು ಹಗಲು, ರಾತ್ರಿ ಎನ್ನದೇ ನೀರಿಗಾಗಿ ಕಾಯುವುದು ಸಾಮಾನ್ಯವಾಗಿದೆ. ಕಾದು ಕುಳಿತರೂ 5 ನಿಮಿಷಕ್ಕೆ ಒಂದು ಕೊಡಪ ನೀರು ತುಂಬುವ ಸ್ಥಿತಿ ಇದೆ. ಪರಮೇಶ್ವರ ದೇವಸ್ಥಾನದ ಸಮೀಪದಲ್ಲಿನ ಏಕೈಕ ಕೊಳವೆ ಬಾವಿಯಿಂದ ಈಗ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಗ್ರಾಮದ ಎಲ್ಲ ಮನೆಗಳಿಗೂ ಸಾಕಾಗುತ್ತಿಲ್ಲ. ಹೀಗಾಗಿ ಮುಖ್ಯರಸ್ತೆ ಬದಿಯಲ್ಲಿನ 80ಕ್ಕೂ ಹೆಚ್ಚು ಮನೆಗಳಿಗೆ ನಿತ್ಯ ಸರದಿಯಂತೆ ನಾಲ್ಕು ಕೊಡಪ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.

ನಾಲ್ಕು ಕೊಡಪ ನೀರು ಪಡೆಯಲು ಖಾಲಿ ಕೊಡಪ ಸಾಲು ಸಮಸ್ಯೆಗೆ ಸಾಕ್ಷಿಯಾಗಿದೆ. ನಾಲ್ಕು ಕೊಡಪ ನೀರು ಮನೆಯ ಸದಸ್ಯರಿಗೆ ಕುಡಿಯಲು ಸಾಲುವದಿಲ್ಲ, ಇನ್ನು ಅಡುಗೆ, ಸ್ನಾನ, ಬಟ್ಟೆ ತೊಳೆಯುವುದು ಹಾಗೂ ಜಾನುವಾರುಗಳಿಗಾಗಿ ಸಂಕಟ ಪಡಬೇಕಿದೆ. ಅದಕ್ಕಾಗಿ ಗ್ರಾಮಸ್ಥರು ಸುತ್ತಲಿನ ಹೊಲತೋಟಗಳಿಗೆ ಅಲೆಯುತ್ತಿದ್ದಾರೆ ಎಂದು ಮಹಿಳೆ ಕಲ್ಲಾಬಾಯಿ ಪ್ರಜಾವಾಣಿಗೆ ತಿಳಿಸಿದರು.

ಮೋಘಾ ಕೆ. ಗ್ರಾಮದ ಸುತ್ತಲಿನ ಹೊಲ ಗದ್ದೆಗಳಿಗೆ ಸೈಕಲ್‌, ಜೀಪ್‌, ಕ್ರೂಸರ್‌ ಮೂಲಕ ತೆರಳಿ ಅನುಕೂಲಸ್ಥರು ನೀರು ತರುತ್ತಿದ್ದಾರೆ. ಆದರೆ ಸಾಮಾನ್ಯ ಜನರಿಗೆ ನೀರಿನ ಹುಡುಕಾಟವೂ ಕಷ್ಟದಾಯಕವಾಗಿದೆ. ಗ್ರಾಮ ಪಂಚಾಯಿತಿಯಿಂದ ನೀರಿನ ಸಮಸ್ಯೆ ಕಂಡು ಕೊಳವೆಬಾವಿ ಹಾಕಲಾಗಿದೆ, ಆದರೆ ಮೋಟಾರ್‌ ಅಳವಡಿಕೆಗೆ ವಿಳಂಬ ಕಾಣುತ್ತಿದೆ, ಇದರಿಂದ ಗ್ರಾಮಸ್ಥರ ನೀರಿನ ಸಮಸ್ಯೆ ಅಧಿಕಗೊಂಡಿದೆ.

ಮೋಘಾ ಕೆ.ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತರಕಾರಿ ಬೆಳೆಯುತ್ತಾರೆ. ರೈತರ ನೀರಿನ ಮೂಲಗಳು ಕಡಿಮೆಯಾಗಿವೆ, ಹೀಗಾಗಿ ತಮ್ಮ ತರಕಾರಿ ಬೆಳೆ ಉಳಿಸಿಕೊಳ್ಳುವ ಕಾರಣ ನೀರು ಪೂರೈಕೆಗೆ ಸ್ಪಂದಿಸುತ್ತಿಲ್ಲ ಎಂದು ಪಿಡಿಒ ಗುರುನಾಥ ತಿಳಿಸಿದರು. ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕೈಗೊಳ್ಳದಿದ್ದರೆ ಮುಂದಿನ ವಾರದಲ್ಲಿ ನೀರಿನ ಸಂಕಷ್ಟ ಇನ್ನಷ್ಟು ತೀವ್ರಗೊಳ್ಳಲಿದೆ. ಹಾಗಾಗಿ ಗ್ರಾಮಸ್ಥರು ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಒತ್ತಾಯಿಸುತ್ತಿದ್ದಾರೆ.

ಮಧ್ಯರಾತ್ರಿವರೆಗೂ ಗ್ರಾಮದಲ್ಲಿ ಕಾದುಕುಳಿತರೂ ಹತ್ತು ಕೊಡಪ ನೀರು ಸಿಗುತ್ತಿಲ್ಲ ನೀರಿನ ಸಮಸ್ಯೆ ತೀವ್ರವಾದಷ್ಟು ಮಹಿಳೆಯರ ಸಂಕಷ್ಟ ಹೆಚ್ಚುತ್ತಿದೆ ನೀರಿಗಾಗಿ ಸುತ್ತಲಿನ ತೋಟಗಳಿಗೆ ಅಲೆಯುತ್ತಿದ್ದೆವೆ
ಜ್ಯೋತಿ ಗೃಹಿಣಿ
ಮೋಘಾ ಕೆ ಗ್ರಾಮದಲ್ಲಿನ ಅಂತರ್ಜಲವು ಏಕಾಏಕಿ ಕಡಿಮೆಯಾಗಿದ್ದು ಗ್ರಾಮದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ ಪಂಚಾಯಿತಿಯು ಖಾಸಗಿ ವ್ಯಕ್ತಿಗಳಿಂದ ತಕ್ಷಣ ನೀರು ಖರೀದಿಸಿ ನೀರು ಪೂರೈಕೆ ಮಾಡಬೇಕು
ಸಾತಣ್ಣ ಕಾಳಜೆ ಗ್ರಾ.ಪಂ.ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT