ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ, ಕವಿಗಳ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಿ’, ‘ಜನಪ್ರತಿನಿಧಿಗಳು, ಅಧಿಕಾರಿಗಳ ಮಕ್ಕಳು ಕನಿಷ್ಠ ಎಸ್ಸೆಸ್ಸೆಲ್ಸಿ ತನಕ ಸರ್ಕಾರಿ ಶಾಲೆಗಳಲ್ಲಿ ಓದುವ ನೀತಿ ರೂಪಿಸಿ’, ‘50ನೇ ವರ್ಷಾಚರಣೆಗೆ 50 ಕೃತಿ ಪ್ರಕಟಿಸಿ’, ‘ಕನ್ನಡ ಚಟುವಟಿಕೆಗಾಗಿ ತಾಲ್ಲೂಕಿಗೊಂದು ಕನ್ನಡ ಭವನ ಕಟ್ಟಿ’, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮಾದರಿಯಲ್ಲಿ ಮನೆ –ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಿ’, ‘ಧ್ವನಿ ಬೆಳಕು ಕಾರ್ಯಕ್ರಮ ಸಿದ್ಧಪಡಿಸಿ’, ‘ಕನ್ನಡ ಭಾಷೆಯ ಹಲವು ನುಡಿಗಳಿದ್ದು, ಸಮೀಕ್ಷೆ ನಡೆಸಿ’...
ಇವೆಲ್ಲ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಸಂಭ್ರಮ–50’ ವರ್ಷವಿಡಿ ಕಾರ್ಯಕ್ರಮ ಆಯೋಜನೆಗೆ ರೂಪುರೇಷೆ ಸಿದ್ಧಪಡಿಸಲು ಕಲಬುರಗಿ ಕಂದಾಯ ವಿಭಾಗದ ಜಿಲ್ಲೆಗಳ ಸಾಹಿತಿಗಳು ಮತ್ತು ಕಲಾವಿದರ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾದ ಸಲಹೆಗಳು.
‘ಸುವರ್ಣ ಕರ್ನಾಟಕ ಸಂಭ್ರಮ ರಾಜಕೀಯ ಉತ್ಸವವಾಗದೇ ಜನೋತ್ಸವವಾಗಲಿ, ಕನ್ನಡ ನಾಮಫಲಕ ಕಡ್ಡಾಯ ಅಭಿಯಾನ ನಡೆಸಿ, ಕಂದಾಯ ವಿಭಾಗಗಳ ಕೇಂದ್ರಗಳಿಂದ ಬೆಂಗಳೂರಿಗೆ ಕನ್ನಡ ರಥ ಜಾಥಾ, ಜ್ಯೋತಿ ಜಾಥಾ ಹಮ್ಮಿಕೊಂಡು ಜಾಗೃತಿ ಮೂಡಿಸಿ, 50ನೇ ವರ್ಷಾಚರಣೆಗೆ 50 ನಾಟಕ ಆಯ್ದು ರಾಜ್ಯದೆಲ್ಲಡೆ ಪ್ರದರ್ಶಿಸಿ, ವಿಶ್ವವ್ಯಾಪಿಯ ಜ್ಞಾನವನ್ನು ಕನ್ನಡದಲ್ಲಿ ಒದಗಿಸಲು ಕ್ರಮವಹಿಸಿ, ಗಡಿನಾಡು ಹಾಗೂ ಹೊರನಾಡು ಕನ್ನಡಿಗರು, ಮಕ್ಕಳು–ವಿದ್ಯಾರ್ಥಿಗಳೂ ಸಂಭ್ರಮದ ಭಾಗವಾಗಲಿ’ ಎಂದು ನೆರೆದಿದ್ದ ಸಾಹಿತಿಗಳು–ಕಲಾವಿದರು, ಸಂಘಟನೆಗಳ ಮುಖಂಡರು ಹೇಳಿದರು.
‘ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಿರಿ. ದಶಕಗಳಿಂದ ಕನ್ನಡಕ್ಕೆ ದುಡಿಯುತ್ತಿರುವ ಸಂಘ–ಸಂಸ್ಥೆಗಳಿಗೆ ಅನುದಾನ ಒದಗಿಸಿ. ಕನ್ನಡಕ್ಕೆ ದುಡಿದು ಗುಂಡೇಟಿಗೆ ಬಲಿಯಾದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ಅವರ ಹೆಸರಲ್ಲಿ ಮಕ್ಕಳಿಗೆ ಪ್ರಶಸ್ತಿ ನೀಡಿ’ ಎಂಬ ಸಲಹೆಗಳೂ ವ್ಯಕ್ತವಾದವು.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ‘ರಾಜ್ಯದಾದ್ಯಂತ ಸುವರ್ಣ ಸಂಭ್ರಮ-50 ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಲು ಜನರ ನಡುವೆ ಬಂದು ಅಭಿಪ್ರಾಯ ಸಂಗ್ರಹಿಸುವುದು. ಜನಪರವಾಗಿ ಕಾರ್ಯಕ್ರಮ ರೂಪಿಸಿವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ವಿಶ್ವನಾಥ ಹಿರೇಮಠ, ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧೂಸೂಧನ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಏಳು ಜಿಲ್ಲೆಗಳ ಸಹಾಯಕ ನಿರ್ದೇಶಕರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸುಮಾರು 400ಕ್ಕೂ ಹೆಚ್ಚು ಕಲಾವಿದರು, ಸಾಹಿತಿಗಳು, ಚಿಂತಕರು, ಲೇಖಕರು ಭಾಗವಹಿಸಿದ್ದರು.
‘ಆಗ ಅರಸು ಈಗ ಸಿದ್ದರಾಮಯ್ಯ’
‘ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣ ಮಾಡಿದಾಗಲೂ ಡಿ.ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. ಅವರು ಹಿಂದುಳಿದ ವರ್ಗಗಳ ಹರಿಕಾರ ಆಗಿದ್ದರು. ಇದೀಗ ಅದರ 50ನೇ ವರ್ಷಾಚರಣೆ ವೇಳೆಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಹಿಂದುಳಿದವರ ಪರ ಅತ್ಯಂತ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು ಕಾಕತಾಳೀಯ’ ಎಂದು ಸಚಿವ ಶಿವರಾಜ ತಂಗಡಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆಂಪು ಹಳದಿ ಬಣ್ಣವುಳ್ಳ ಧ್ವಜವನ್ನು ನಾಡಧ್ವಜವಾಗಿ ರಾಜ್ಯ ಸರ್ಕಾರ ಸ್ವೀಕರಿಸಿದೆ. ಅದಕ್ಕೆ ಮಾನ್ಯತೆ ನೀಡುವ ನಿರ್ಧಾರ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕೇಂದ್ರ ಸರ್ಕಾರ ಅವಕಾಶ ನೀಡಿದರೆ ಸುವರ್ಣ ಸಂಭ್ರಮದಲ್ಲಿ ಮನೆ–ಮನೆಗಳ ಮೇಲೆ ನಾಡಧ್ವಜ ಹಾರಿಸಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ನಿಗಮಗಳ–ಮಂಡಳಿಗಳ ಅಧ್ಯಕ್ಷರ ನೇಮಕ ರಾಜಕೀಯ ನಿರ್ಧಾರ. ಅದಕ್ಕೆ ತುಸು ಸಮಯಬೇಕು’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.