ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾಪುರ: ಹೊತ್ತಿ ಉರಿದ ವಿದ್ಯುತ್ ಪರಿವರ್ತಕ, ತಪ್ಪಿದ ಅನಾಹುತ

Last Updated 16 ಮಾರ್ಚ್ 2021, 10:12 IST
ಅಕ್ಷರ ಗಾತ್ರ

ಚಂದಾಪುರ (ಚಿಂಚೋಳಿ): ಇಲ್ಲಿನ ಪುರಸಭೆ ವ್ಯಾಪ್ತಿಗೆ ಬರುವ ಚಂದಾಪುರದಲ್ಲಿ ವಿದ್ಯುತ್ ಪರಿವರ್ತಕ ಮಂಗಳವಾರ ಮಧ್ಯಾಹ್ನ ಹೊತ್ತಿ ಉರಿದಿದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಇದು ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

33/110 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದಲ್ಲಿ ಗ್ರಾಮೀಣ ಪ್ರದೇಶದ ಫೀಡರ್‌ಗಳಿಗೆ ವಿದ್ಯುತ್ ಪ್ರವಹಿಸುತ್ತಿದ್ದ 20 ಎಂವಿಎ ಸಾಮರ್ಥ್ಯದ ಪರಿವರ್ತಕ ಸಂಪೂರ್ಣವಾಗಿ ಸುಟ್ಟುಹೋಗಿದೆ. ಅತಿಯಾದ ಶಾಖ ಮತ್ತು ಓವರ್‌ಲೋಡ್‌ನಿಂದ ಬೆಂಕಿ ಹೊತ್ತಿರುವ ಸಾಧ್ಯತೆ ಇದೆ ಎಂದು ಜೆಸ್ಕಾಂ ಶಾಖಾಧಿಕಾರಿ ಮೋಹನ ರಾಠೋಡ ತಿಳಿಸಿದ್ದಾರೆ.

‌ಮಿನಿ‌ವಿಧಾನ ಸೌಧದ ಎದುರುಗಡೆ ಇರುವ ಈ ಪರಿವರ್ತಕದಿಂದ ಮಧ್ಯಾಹ್ನ 1.30ರ ಸುಮಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿತು. ಹತ್ತಿರದ ಮನೆ, ಕಚೇರಿ ಕಟ್ಟಡಗಳಲ್ಲಿದ್ದ ಜನ ಭಯದಿಂದ ಹೊರಗೆ ಓಡಿಬಂದರು. ನಾಲ್ಕೈದು ಬಾರಿ ದೊಡ್ಡ ಸದ್ದಿನೊಂದಿಗೆ ಮೇಲಕ್ಕೆ ಚಿಮ್ಮಿದ ಬೆಂಕಿಯಿಂದ ದಟ್ಟವಾದ ಹೊಗೆ ಕೂಡ ಆವರಿಸಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಅವಘಡದಿಂದ ನಿಗಮಕ್ಕೆ ₹1 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೇರೆ ಪರಿವರ್ತಕ ಅಳವಡಿಸಲು ಕನಿಷ್ಠ ಮೂರು ದಿನ ಸಮಯ ಬೇಕು. ಇದರಿಂದ ಮಿರಿಯಾಣ, ಕುಂಚಾವರಂ, ನಿಡಗುಂದಾ, ಸುಲೇಪೇಟ, ಚಿಮ್ಮನಚೋಡ ಮತ್ತು ಐನಾಪುರ ಮುಂತಾದ ಗ್ರಾಮಗಳಲ್ಲಿ ಮೂರು ದಿನ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT