ಮಂಗಳವಾರ, ಜೂನ್ 28, 2022
20 °C
ಸರ್ಕಾರಿ ಶಾಲೆ ಶಿಕ್ಷಕರಿಂದ ಮಕ್ಕಳಿಗಾಗಿ ಹೊಸ ಪ್ರಯೋಗ; 71 ಶಿಕ್ಷಕ, ಶಿಕ್ಷಕಿಯರು ಭಾಗಿ

ಕಲಬುರ್ಗಿ: ಎಸ್ಸೆಸ್ಸೆಲ್ಸಿ ಮಕ್ಕಳ ನೆರವಿಗೆ ಜಾಲತಾಣಗಳ ಗ್ರೂಪ್

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲಾಕ್‌ಡೌನ್‌ನಿಂದ ಸರಿಯಾಗಿ ಓದಲು ಸಾಧ್ಯವಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೆರವಿಗೆ ರಾಜ್ಯದ ವಿವಿಧೆಡೆಯ ಸರ್ಕಾರಿ ಶಾಲೆಗಳ ಶಿಕ್ಷಕರು ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್‌ ರಚಿಸಿಕೊಂಡಿದ್ದು, ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಚರ್ಚಿಸಲಿದ್ದಾರೆ.

ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳು ಈಗಾಗಲೇ ಸಕ್ರಿಯವಾಗಿದ್ದು, ಸಹಾಯವಾಣಿಯು ಮೇ 7ರಿಂದ ಪ್ರತಿದಿನ ರಾತ್ರಿ 8.30ರಿಂದ 9.30ರವರೆಗೆ ಮುಕ್ತವಾಗಿರಲಿದೆ. ಇದಕ್ಕಾಗಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ವಿವಿಧ ವಿಷಯಗಳ 71 ಶಿಕ್ಷಕರು ಮತ್ತು ಶಿಕ್ಷಕಿಯರ ಮೊಬೈಲ್‌ ಸಂಖ್ಯೆಗಳನ್ನು ನೀಡಲಾಗಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸರಾಸರಿ 10 ರಿಂದ 15 ಶಿಕ್ಷಕರು ಮಕ್ಕಳ ಸಂದೇಹಗಳನ್ನು ಬಗೆಹರಿಸುವರು.

ಮೊದಲು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿ ಈ ಸಹಾಯವಾಣಿಯ ಪರಿಕಲ್ಪನೆ ರೂಪುಗೊಂಡಿತು. ತಾಲ್ಲೂಕಿನ ಶಿಕ್ಷಕರ ಈ ವಿನೂತನ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾ ಪ್ರೋತ್ಸಾಹಿಸಿದರು. ನಂತರ ಕಲಬುರ್ಗಿ, ಬೀದರ್, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರೂ ಸೇರ್ಪಡೆಯಾದರು.

ಪ್ರತಿ ಶುಕ್ರವಾರ ಮತ್ತು ಭಾನುವಾರ ಸಂಜೆ ರಸಪ್ರಶ್ನೆ ಇರುತ್ತದೆ. ಇದನ್ನು ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ನಡೆಸಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಠ್ಯಕ್ರಮದ ಆಯ್ದ ಭಾಗಗಳನ್ನು ರಸಪ್ರಶ್ನೆಯ ರೂಪದಲ್ಲಿ ಕೇಳಲಾಗುತ್ತದೆ. ವಿದ್ಯಾರ್ಥಿಗಳು ಆಯ್ಕೆ ಉತ್ತರ ಹೇಳಿದ ಬಳಿಕ ಪರಿಣಿತ ಶಿಕ್ಷಕರು ಅಂತಿಮವಾಗಿ ಸರಿಯಾದ ಉತ್ತರ ಹೇಳುವರು.

ಕಳೆದ ಬಾರಿ ಲಾಕ್‌ಡೌನ್‌ ಸಂದರ್ಭದಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ಆರಂಭವಾದ ಪ್ರಯೋಗ ಈ ವರ್ಷ ರಾಜ್ಯದೆಲ್ಲೆಡೆ ವಿಸ್ತರಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಿಭಾಗದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್, ವಿವಿಧ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವಿಶೇಷ ಆಸಕ್ತಿ ತೋರಿದ್ದಾರೆ.

‘ಲಾಕ್‌ಡೌನ್‌ನಿಂದ ವಿದ್ಯಾರ್ಥಿಗಳಿಗೆ ನಿಯಮಿತ ಪಾಠ ನಡೆಯಲಿಲ್ಲ. ಇದನ್ನು ಸರಿಪಡಿಸಲು ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್ ಆರಂಭಿಸಿದೆವು. ಸ್ಮಾರ್ಟ್‌ಫೋನ್‌ ಹೊಂದಿರದ ವಿದ್ಯಾರ್ಥಿಗಳಿಗೆ ಸಹಾಯವಾಣಿ ಆರಂಭಿಸಿದ್ದೇವೆ’ ಎಂದು ದೇವದುರ್ಗ ತಾಲ್ಲೂಕಿನ ಗಾಣಧಾಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗುಲಾಂ ನಬಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ದಿನದವರೆಗೂ ಈ ಸಹಾಯವಾಣಿ ಚಾಲ್ತಿಯಲ್ಲಿರುತ್ತದೆ. ರಾಜ್ಯದ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು’ ಎಂದು ದೇವದುರ್ಗದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಎಂ.ಜಿ. ಸತೀಶ್‌ ತಿಳಿಸಿದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ: 9741244343

ಟೆಲೆಗ್ರಾಂ ಗ್ರೂಪ್: Karnataka SSLC Students Group.

ಗ್ರೂಪ್‌ಗೆ ಸೇರ್ಪಡೆಯಾಗಲು ಲಿಂಕ್: https://t.me/joinchat/RKkVRTF4i0TR9V-f

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು