ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಮಕ್ಕಳಿಗೆ ಪಾಠ

ಗುಂಜ ಬಬಲಾದ: ಮುಖ್ಯಶಿಕ್ಷಕ, ಶಿಕ್ಷಕರ ವಿನೂತನ ಪ್ರಯತ್ನ
Last Updated 10 ಜೂನ್ 2021, 5:19 IST
ಅಕ್ಷರ ಗಾತ್ರ

ಆಳಂದ: ಕೊರೊನಾ ಹರಡುತ್ತಿರುವ ಕಾರಣ ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದರೂ ಆಳಂದ ತಾಲ್ಲೂಕಿನ ಗುಂಜ ಬಬಲಾದ ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಿಕೆಯು ಲಾಕ್‌ಡೌನ್‌ ಸಂಕಷ್ಟದ ನಡುವೆ ಮುಂದುವರದಿದೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 178 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆ ಮುಖ್ಯ ಶಿಕ್ಷಕ ನಿಂಗಪ್ಪ ಮುಂಗೊಂಡಿ ಅವರ ವಿಶೇಷ ಕಾಳಜಿ ಮತ್ತು ಹೊಸ ಪ್ರಯೋಗಶೀಲತೆ ಗಮನ ಸೆಳೆದಿದೆ.

ಗುಂಜ ಬಬಲಾದ ಗ್ರಾಮವು ಮುಖ್ಯಶಿಕ್ಷಕರಾಗಿರುವ ನಿಂಗಪ್ಪ ಅವರ ಸ್ವಗ್ರಾಮವು ಹೌದು. ಹೀಗಾಗಿ ಗ್ರಾಮದ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿ ಮನೆಯೇ ಮಕ್ಕಳ ಪಾಠಶಾಲೆಯಾಗಿಸಿ ಮೊಬೈಲ್‌ ಮೂಲಕವೇ ಮಕ್ಕಳ ಕಲಿಕಾ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಇಲ್ಲಿಯ ಸಹ ಶಿಕ್ಷಕರಾದ ಚೆನ್ನಮ್ಮ, ಚಂದ್ರಕಲಾ ನರೋಣಿಕರ, ಲತಾ, ಅನೀಲ, ಅಶೋಕ ಪಂಚಾಳ ಸಹಕಾರ ನೀಡಿದ್ದಾರೆ.

1 ರಿಂದ 3ನೇ ತರಗತಿ, 4 ರಿಂದ 6ನೇ ತರಗತಿ ಹಾಗೂ 7 ರಿಂದ 8ನೇ ತರಗತಿಗಳ ವಾಟ್ಸ್‌ಆ್ಯಪ್ ಗ್ರೂಪ್ ಮಾಡಲಾಗಿದೆ. ಈ ಗ್ರೂಪ್‌ಗೆ ತಲಾ ಇಬ್ಬರೂ ಶಾಲಾ ಶಿಕ್ಷಕರು ವಿಷಯವಾರು ಬೋಧನೆ, ಗೃಹಪಾಠ, ಚಟುವಟಿಕೆ ನೀಡುವರು. ಜೂನ್ 1ರಿಂದ ಆರಂಭವಾದ ಈ ತರಗತಿಗಳಲ್ಲಿ ಪಾಲಕರು ಸಹ ಮಕ್ಕಳ ಕಲಿಕೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

38 ಜನ ವಿದ್ಯಾರ್ಥಿಗಳು ಸ್ವಯಂ ಮೊಬೈಲ್‌ ಬಳಸಿದರೆ, 66 ವಿದ್ಯಾರ್ಥಿಗಳ ಪಾಲಕರು ಮೊಬೈಲ್‌ ಮುಖಾಂತರ ತಮ್ಮ ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳ ಅಭ್ಯಾಸದ ಮೇಲೆ ನಿಗಾವಹಿಸಿದ್ದಾರೆ. ಸ್ವಯಂ ಪಾಲಕರು ದಿನನಿತ್ಯ ಮಕ್ಕಳಿಗೆ ಶಿಕ್ಷಕರು ಸೂಚಿಸಿದ ಗೃಹಪಾಠ ಮನನ ಮಾಡಿಸುವದು, ಬರೆಯುವುದು, ಚಿತ್ರ ತೆಗೆಯುವುದು. ರಾತ್ರಿ ಶಿಕ್ಷಕರಿಗೆ ವಾಟ್ಸ್‌ಆ್ಯಪ್ ಮೂಲಕ ಒಪ್ಪಿಸುವುದು ನಡೆದಿದೆ.

ಗುಂಜ ಬಬಲಾದ ಶಾಲೆಯ ಶಿಕ್ಷಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಳೆದ ಭಾನುವಾರ ಜಿಲ್ಲೆಯ 200ಕ್ಕೂ ಹೆಚ್ಚು ಶಿಕ್ಷಕರಿಗೆ ವೆಬಿನಾರ್‌ ಏರ್ಪಡಿಸಿ ಗುಂಜ ಬಬಲಾದ ಶಾಲೆಯ ಶಿಕ್ಷಕರ ಹಾಗೂ ಪಾಲಕರ ಶೈಕ್ಷಣಿಕ ಚಟುವಟಿಕೆಗಳ ಪ್ರಯೋಗದ ಕುರಿತು ಪರಿಚಯಿಸುವ ಕಾರ್ಯ ನಡೆದಿದೆ.

*ಮಕ್ಕಳ ಪಾಲಕರಿಗೆ ಮಕ್ಕಳ ಶಿಕ್ಷಣದ ಅಗತ್ಯತೆ ಹಾಗೂ ಜವಾಬ್ದಾರಿ ಕುರಿತು ಮನವರಿಕೆ ಮಾಡಲಾಯಿತು. ಈಗ ವಿದ್ಯಾರ್ಥಿಗಳಿಗಿಂತ ಪಾಲಕರೆ ಹೆಚ್ಚು ಸ್ಪಂದನೆ ನೀಡುತ್ತಿದ್ದಾರೆ
ನಿಂಗಪ್ಪ ಮುಂಗೋಂಡಿ, ಮುಖ್ಯಶಿಕ್ಷಕ, ಗುಂಜ ಬಬಲಾದ ಸರ್ಕಾರಿ ಪ್ರಾಥಮಿಕ ಶಾಲೆ

*ಇಲ್ಲಿನ ಶಿಕ್ಷಕರ ಪ್ರಯತ್ನವು ಮಾದರಿಯಾಗಿದೆ. ಗುಂಜ ಬಬಲಾದ ಶಾಲೆಯ ಪ್ರಯೋಗ ಕುರಿತು 200ಕ್ಕೂ ಹೆಚ್ಚು ಶಿಕ್ಷಕರಿಗೆ ವೆಬನಾರ್‌ ಮೂಲಕ ಪರಿಚಯಿಸಲಾಗಿದೆ

ಭರತರಾಜ ಸಾವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT