ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್ ಯಾವ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದರೆಂದು ಹೇಳಲಿ: ಪ್ರಿಯಾಂಕ್ ಖರ್ಗೆ

Published 5 ಮೇ 2024, 5:32 IST
Last Updated 5 ಮೇ 2024, 5:32 IST
ಅಕ್ಷರ ಗಾತ್ರ

ಕಲಬುರಗಿ: ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಕಾಂಗ್ರೆಸ್‌ನ ಯಾವ ನಾಯಕರನ್ನು ಭೇಟಿಯಾಗಿದ್ದರು ಎಂದು ಹೇಳಲಿ ಎಂದು ಗ್ರಾಮೀಣಾಭಿವೃದ್ಧಿ ‌ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕಲಬುರಗಿಯಲ್ಲಿ ತಾಲಿಬಾನ್ ಸರ್ಕಾರವಿದೆ‌ ಎನ್ನುವ ಜಾಧವ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಕೋಟನೂರು ಹಾಗೂ ಲಾಡ ಮುಗಳಿ ಪ್ರಕರಣಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಯಾರನ್ನು ಬಳಸಿಕೊಂಡು‌‌ ಜಾಧವ್ ಚುನಾವಣೆ ನಡೆಸಿದ್ದಾರೆ ಎಂದು ಗೊತ್ತಿದೆ. ಸ್ವತಃ‌ ಅವರ ಪಕ್ಷದ ಅಭ್ಯರ್ಥಿಯಾಗಿದ್ದವರೇ ಈಗ ವಿದೇಶಕ್ಕೆ ಹೋಗಿದ್ದಾರೆ. ಕಲಬುರಗಿಯಲ್ಲಿ ತಾಲಿಬಾನ್ ಆಡಳಿತವಿದ್ದರೆ ಜಾಧವ್ ಮಾತನಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಶಾಸಕ ರೇವಣ್ಣ ಬಂಧನ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್, ರೇವಣ್ಣ ವಿರುದ್ದ ಎರಡು ಕೇಸ್‌ಗಳು ದಾಖಲಾಗಿವೆ. ಎಸ್‌ಐಟಿ ಈಗಾಗಲೇ ತನಿಖೆ ಆರಂಭಿಸಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಪ್ರಕರಣದಿಂದಾಗಿ ರಾಜಕಾರಣಿಗಳು ತಲೆ ತಗ್ಗಿಸುವಂತಾಗಿ ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ‌ ಜನರಲ್ಲಿ ಜಿಗುಪ್ಸೆ ಮೂಡಿದೆ ಎಂದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದವರು. ಕಾನೂನು ಪ್ರಕ್ರಿಯೆಯ ಬಗ್ಗೆ ಅವರಿಗೆ ಗೊತ್ತಿಲ್ಲವಾ? ಅವರು ತಮಿಳುನಾಡಿಗೆ ಹೋಗಿದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಒಬ್ಬ ಅಸಮರ್ಥ ಐಪಿಎಸ್ ಅಧಿಕಾರಿ ರಾಜ್ಯದಲ್ಲಿ ಇರುವಂತಾಗುತ್ತಿತ್ತು ಎಂದು ತಿರುಗೇಟು ನೀಡಿದರು.

'ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ, ಜೆ.ಪಿ. ನಡ್ಡಾ, ಅಶೋಕ, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಹುಬ್ಬಳ್ಳಿ ಪ್ರಕರಣದಲ್ಲಿ ತೋರಿಸಿದಷ್ಟು ಆಸಕ್ತಿಯನ್ನು ಹಾಸನ ಪ್ರಕರಣದಲ್ಲಿ ಯಾಕೆ ತೋರಿಸುತ್ತಿಲ್ಲ‌? ಪ್ರಜ್ವಲ್ ಲೈಂಗಿಕ‌ ದೌರ್ಜನ್ಯದ ಬಗ್ಗೆ ಮೊದಲೇ ಗೊತ್ತಿದ್ದರೂ ಅವರಿಗೆ ಟಿಕೆಟ್ ನೀಡಿ ಅವರ ಪರ ಪ್ರಚಾರ ಕೈಗೊಂಡಿದ್ದರು. ಎಲ್ಲದಕ್ಕೂ ಮಾತನಾಡುವ ಮೋದಿ ಈ ವಿಚಾರದಲ್ಲಿ ಮೌನ ವಹಿಸಿದ್ದು ಯಾಕೆ? ಪ್ರಜ್ವಲ್ ಬಂಧನಕ್ಕೆ ಬ್ಲೂ ನೋಟಿಸ್ ಜಾರಿ ಮಾಡಲಾಗಿದೆ. ಅವರ ಬಂಧನ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು ಇಲ್ಲವಾ?' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT