ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ: ದನಗಳ ದೊಡ್ಡಿಯಾದ ಹಳೆ ಬಸ್ ನಿಲ್ದಾಣ

Published 28 ಮೇ 2024, 5:41 IST
Last Updated 28 ಮೇ 2024, 5:41 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಾದ ಮೇಲೆ ಪಟ್ಟಣದಲ್ಲಿ ಮೊದಲಿದ್ದ ಬಸ್ ನಿಲ್ದಾಣದ ಜಾಗ ಸಾಕಾಗದೆ ಅದರ ಕೂಗಳತೆಯಲ್ಲೇ ಕಳೆದವರ್ಷ ಹೊಸ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಆ ಬಳಿಕ ಹಳೆ ಬಸ್ ನಿಲ್ದಾಣಕ್ಕೆ ಹೇಳೋರು ಕೇಳೋರಿಲ್ಲದಂತಾಗಿ ಅದು ದನಗಳ ಕೊಂಡವಾಡದಂತೆ ಕಾಣುತ್ತಿದೆ.

ಕಲಬುರಗಿ-ಚಿಂಚೋಳಿ ಮುಖ್ಯರಸ್ತೆ ನಡುವಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಭರತನೂರ, ಕೊಡದೂರ ಮತ್ತು ಊರೊಳಗೆ ಹಾದುಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನಿಲ್ದಾಣವೇ ಹಳೆ ಬಸ್ ನಿಲ್ದಾಣ.

ಕಾಳಗಿ ತಾಲ್ಲೂಕಾಗುವ ಮುಂಚೆ ಇಲ್ಲಿನ ಭರತನೂರ ರಸ್ತೆ ಮಾರ್ಗದಲ್ಲಿ ಬಸ್ ಘಟಕ ಸ್ಥಾಪಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ಕ್ಕೆ ಒಳಪಟ್ಟಿದೆ. ಇದರ ಬಸ್ಸುಗಳ ಜತೆಗೆ ಕಲಬುರಗಿ-ಚಿಂಚೋಳಿ ನಡುವೆ ಸಂಚರಿಸುವ ವಿವಿಧ ಡಿಪೊ ಬಸ್ಸುಗಳು ಸಹ ಇದೇ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದವು. ಆದರೆ ವಾಹನ ಹೆಚ್ಚಳ ಮತ್ತು ಜನದಟ್ಟಣೆಯಿಂದ ಈ ಜಾಗ ಕಡಿಮೆ ಎನಿಸಿ, ಒಂದು ವರ್ಷದ ಹಿಂದೆ ಅರ್ಧ ಕಿ.ಮೀ ಅಂತರದಲ್ಲೇ 2ಎಕರೆ ಪ್ರದೇಶದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿದೆ.

ಆಗಿನಿಂದ ಎಲ್ಲಾ ಬಸ್ಸುಗಳು ಈ ಹೊಸ ನಿಲ್ದಾಣವನ್ನೇ ಆಶ್ರಯಿಸಿಕೊಂಡಿವೆ. ಆದರೆ ಜನಸಂಪರ್ಕ ಮಾತ್ರ ಹಳೆ ಬಸ್ ನಿಲ್ದಾಣಕ್ಕೆ ಹತ್ತಿರವಿದೆ. ಹೀಗಾಗಿ ಬಹಳಷ್ಟು ಜನರು ಹಳೆ ನಿಲ್ದಾಣದ ಮುಂಭಾಗದಲ್ಲೆ ಓಡಾಡಿಕೊಂಡಿರುತ್ತಾರೆ.

ಕಳೆದೊಂದು ವರ್ಷದಿಂದ ಈ ಹಳೆ ನಿಲ್ದಾಣಕ್ಕೆ ಬೀಗ ಬಿದ್ದು ರಾತ್ರಿ ವೇಳೆ ಬೆಳಕಿಲ್ಲದೆ ಕತ್ತಲು ಕಂಡುಬರುತ್ತಿದೆ. ಕಸ ಗುಡಿಸುವ ಸಿಬ್ಬಂದಿ ಕಾಣದೆ ಸ್ವಚ್ಛತೆ ಮಾಯವಾಗಿದೆ. ದನಕರುಗಳು ಓಡಾಡತೊಡಗಿ ಸಗಣಿ, ಮೂತ್ರ ಜಾಸ್ತಿಯಾಗಿದೆ. ಮಾನಸಿಕ ಅಸ್ವಸ್ಥರಿಗೆ, ಪೋಲಿ ಹುಡುಗರಿಗೆ ಅಡ್ಡೆಯಾಗಿದೆ. ದುರ್ವಾಸನೆ ಕೇಂದ್ರವಾಗಿ ಮಾರ್ಪಟ್ಟಿದೆ.

‘ಸಂಬಂಧಪಟ್ಟ ಅಧಿಕಾರಿಗಳು ನಿತ್ಯ ಈ ನಿಲ್ದಾಣದ ಮುಂದಿನಿಂದಲೇ ಓಡಾಡಿಕೊಂಡು ಎಲ್ಲವೂ ಕಂಡು ಕಾಣದಂತೆ ಮೌನವಹಿಸಿದ್ದಾರೆ. ಸ್ವಚ್ಛತೆ ಕಾಪಾಡಿ ಕಟ್ಟಡ ಸುರಕ್ಷಿತವಾಗಿಡುವಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

‘ಹಳೆ ನಿಲ್ದಾಣ ಇನ್ನೂ ನಮ್ಮ ಸುಪರ್ದಿಗೆ ಒಳಪಟ್ಟಿದೆ. ಗೇಟ್ ಕೂಡಿಸಬೇಕಾಗಿದೆ, ಸೆಕ್ಯೂರಿಟಿ ಗಾರ್ಡ್ ಇಲ್ಲ. ಪೊಲೀಸರು ನೋಡ್ತಿರಬೇಕು. ಜೂನ್ ತಿಂಗಳಲ್ಲಿ ಕಂಟ್ರೋಲರ್‌ ಕೂಡಿಸಿ ವಿದ್ಯಾರ್ಥಿಗಳ ಬಸ್ ಪಾಸ್ ಕೌಂಟರ್ ಸ್ಥಾಪನೆ ಮಾಡುತ್ತೇವೆ’ ಎಂದು ಬಸ್ ಘಟಕದ ವ್ಯವಸ್ಥಾಪಕ ಯಶವಂತ ಯಾತನೂರ ಪ್ರತಿಕ್ರಿಯೆ ನೀಡಿದರು.

ಕಲಬುರಗಿ-ಚಿಂಚೋಳಿ ಮಾರ್ಗದಿಂದ ಬರುವ ಬಸ್ಸುಗಳು ಹಳೆ ನಿಲ್ದಾಣದಲ್ಲಿ ನಿಲ್ಲಿಸದೆ ಇರುವುದರಿಂದ ವೃದ್ಧರಿಗೆ ಮಹಿಳೆಯರಿಗೆ ಚಿಕ್ಕಮಕ್ಕಳಿಗೆ ತೊಂದರೆಯಾಗುತ್ತಿದೆ
– ರೇವಯ್ಯ ಸಾಲಿ ಅಧ್ಯಕ್ಷ ಕೃಷಿ ಕೂಲಿಕಾರರ ಸಂಘ ಕಾಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT