ಕಲಬುರಗಿ: ಸಣ್ಣ ಕೈಗಾರಿಕೆ ಸ್ಥಾಪನೆ ಮಾಡಬೇಕು. ಆ ಮೂಲಕ ಜನರಿಗೆ ಉದ್ಯೋಗ ನೀಡಬೇಕು ಎಂಬ ಕಲಬುರಗಿಯ ಉದ್ಯಮಿಗಳ ಮಹದಾಸೆಗೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮವು ತಣ್ಣೀರು ಎರಚುತ್ತಿದೆ ಎಂಬುದಕ್ಕೆ ಇಲ್ಲಿರುವ ಮೂಲಸೌಲಭ್ಯಗಳೇ ಸಾಕ್ಷಿ.
ಕಲಬುರಗಿಯ ಹುಮನಾಬಾದ್ ರಸ್ತೆಯ ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೆ, ಹೆಜ್ಜೆಗೂ ಉದ್ಯಮಗಳಿವೆ. ಪ್ಲಾಸ್ಟಿಕ್, ಕಬ್ಬಿಣ, ಟಾರ್ಪಲ್, ಟ್ರ್ಯಾಕ್ಟರ್ ತಯಾರಿಕೆ, ದಾಲ್ ಮಿಲ್ ಸೇರಿದಂತೆ ಸಾಕಷ್ಟು ಉದ್ಯಮಗಳು ಕಾಲಿಟ್ಟಿವೆ. ಕಲಬುರಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಉದ್ಯಮಿಗಳು ಇಲ್ಲಿ ಭರಪೂರ ಹೂಡಿಕೆಯನ್ನೂ ಮಾಡಿದ್ದಾರೆ.
ಆದರೆ, ಇಲ್ಲಿನ ಮೂಲಸೌಲಭ್ಯಗಳನ್ನು ನೋಡಿದರೆ ಕುಗ್ರಾಮಗಳಂತೆ ಭಾಸವಾಗುತ್ತಿದೆ. ಕಪನೂರು ಕೈಗಾರಿಕಾ ವಲಯದ ಮೊದಲ ಹಂತದ ಒಂದೊಂದು ರಸ್ತೆಯೂ ಸ್ಲಂ ರಸ್ತೆಗಿಂತಲೂ ಕೆಟ್ಟದಾಗಿವೆ. ರಸ್ತೆ ತುಂಬಾ ನೀರು, ಕಟ್ಟಿದ ಚರಂಡಿ, ಬೀದಿ ದೀಪ ಇಲ್ಲದ ಕಂಬಗಳೇ ಎದುರಾಗುತ್ತವೆ.
ಇಲ್ಲಿನ ಒಂದೇ ಒಂದು ರಸ್ತೆಗೂ ಚರಂಡಿ ಇಲ್ಲ. ಗುಂಡಿ ಯಾವುದು, ರಸ್ತೆ ಯಾವುದು ಎಂಬುದು ತಿಳಿಯದ ಸ್ಥಿತಿ ಇದೆ. ಮರಂ ಬಿಡಿ; ಮಣ್ಣೂ ಸಹ ಇರದ ರಸ್ತೆಗಳು ಇಲ್ಲಿ ಕಾಣ ಸಿಗುತ್ತವೆ.
ಹುಮನಾಬಾದ್ ರಿಂಗ್ ರಸ್ತೆಗೆ ಅಂಟಿಕೊಂಡಿರುವ ಕಪನೂರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ವಲಯ ಹಾಗೂ ನಿವೇಶನಗಳಿವೆ. ನಂತರ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸಿದ ಕೈಗಾರಿಕಾ ವಲಯವೂ ಇದೆ.
ಕೆಐಎಡಿಬಿ ನಿರ್ಮಿಸಿದ ಕೈಗಾರಿಕಾ ವಲಯದಲ್ಲಿ ರಸ್ತೆಗಳ ಸ್ಥಿತಿ ಅಷ್ಟೇನೂ ಹಾಳಾಗಿಲ್ಲ. ಆದರೆ, ಅಲ್ಲಿ ಚರಂಡಿ, ಒಳಚರಂಡಿ ಹಾಗೂ ಬೀದಿ ದೀಪಗಳ ಸಮಸ್ಯೆಗಳಿವೆ. ರಸ್ತೆಗಳ ನಿರ್ವಹಣೆ ಸರಿ ಇಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಆದರೆ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ನಿಗಮ ಅಭಿವೃದ್ಧಿಪಡಿಸಿದ ಕೈಗಾರಿಕಾ ವಲಯದ ರಸ್ತೆಗಳೆಲ್ಲವೂ ಹಾಳಾಗಿವೆ.
‘ಯಾವ ವಾಹನ ಚಾಲಕರೂ ಧೈರ್ಯದಿಂದ ಇಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ರಾತ್ರಿ ವೇಳೆಯಂತೂ ಇಲ್ಲಿ ಸಾಗುವುದು ಯಮಯಾತನೆ’ ಎನ್ನುತ್ತಾರೆ ಟೆಂಪೊ ಚಾಲಕ ಮಹಮದ್ ಖಾಸಿಂ.
ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ನಿಗಮದ ವ್ಯಾಪ್ತಿಯಲ್ಲಿ 17.3 ಎಕರೆ ಜಾಗ ಇದೆ. ಇದರಲ್ಲಿ ಎಂಟು ಮುಖ್ಯ ರಸ್ತೆಗಳೂ ಸೇರಿವೆ. ಪ್ರಧಾನ ರಸ್ತೆ 60 ಅಡಿ ಇದೆ. ಇನ್ನಿತರ ಮುಖ್ಯ ಹಾಗೂ ಅಡ್ಡ ರಸ್ತೆಗಳು 30 ಅಡಿ ಇವೆ. ಇಲ್ಲಿ 47 ದೊಡ್ಡ ಶೆಡ್‌ಗಳಿದ್ದು, ಎಲ್ಲವನ್ನೂ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡುವ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ. 94 ಗೋದಾಮುಗಳಲ್ಲಿ (ಶೆಡ್) 90 ಅನ್ನು ವಿವಿಧ ಉದ್ಯಮ ಸ್ಥಾಪನೆಗೆ ನೀಡಲಾಗಿದೆ. ಹೊಸದಾಗಿ 52 ನಿವೇಶಗಳನ್ನು ವಿವಿಧ ಉದ್ಯಮಗಳಿಗೆ ಹಂಚಿಕೆ ಮಾಡಲಾಗಿದೆ.
ಈ ಕೈಗಾರಿಕಾ ಪ್ರದೇಶದ ಒಟ್ಟು ಜನಸಂಖ್ಯೆ ಲಕ್ಷಕ್ಕೂ ಹೆಚ್ಚು ಮೀರಿದೆ. ಇಲ್ಲಿ ಕಾರ್ಮಿಕರ ಸಂಖ್ಯೆಯೇ ಅಂದಾಜು 10 ಸಾವಿರ ಇದೆ. ದಿನದ 24 ಗಂಟೆಯೂ ಇಲ್ಲಿ ಜನಜಂಗುಳಿ ಹಾಗೂ ವಾಹನ ಸಂಚಾರ ಇರುತ್ತದೆ. ಇಲ್ಲಿ ಸಣ್ಣ ಉದ್ಯಮಗಳೇ ಸಾವಿರಕ್ಕೂ ಹೆಚ್ಚು ಇವೆ. ಈ ಎಲ್ಲದಕ್ಕೂ ರಹದಾರಿ ಆಗಿರುವ ಮೊದಲ ಹಂತದ ರಸ್ತೆಯೇ ಸರಿ ಇಲ್ಲ. ಇದರ ಆಸುಪಾಸಿನಲ್ಲಿಯೇ ಅಮಿತ್ ಪಾಟೀಲ್ ಸೆಂಟ್ರಲ್ ಸ್ಕೂಲ್ ಸಹ ಇದ್ದು, ಶಾಲಾ ವಾಹನಗಳೂ ಈ ರಸ್ತೆಗಳ ಮೂಲಕವೇ ಸಾಗುತ್ತವೆ.
ಸುಮಾರು ಒಂದು ಕಿ.ಮೀ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಈ ರಸ್ತೆಯ ಮೂಲಕವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ)ಅಭಿವೃದ್ಧಿಪಡಿಸಿದ ವಲಯಕ್ಕೆ ಹೋಗಬೇಕು. ಸೋನೆಕಾಟ, ಮಾಲಗತ್ತಿ, ಕಪನೂರು, ಹರಸೂರು, ಹುಮನಾಬಾದ್ ರಿಂಗ್ ರಸ್ತೆಗೆ ವಾಹನ ಹಾಗೂ ಜನರು ಸಾಗಬೇಕಾಗಿದೆ.
‘ಈ ರಸ್ತೆಯನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ, ಕೇವಲ ಮರಂ ಹಾಕಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ’ ಎನ್ನುತ್ತಾರೆ ಆಟೊ ಚಾಲಕ ಬಂಡೆಪ್ಪ ಪೊಲೀಸ್ ಪಾಟೀಲ.
‘ಒಂದು ಪ್ರದೇಶಕ್ಕೆ ಕೈಗಾರಿಕೆಯೇ ಜೀವಾಳ. ಆದರೆ, ಅದಕ್ಕೆ ಮೂಲಸೌಲಭ್ಯಗಳ ಕೊರತೆ ಇದೆ ಎಂದರೆ ಅಭಿವೃದ್ಧಿ ಕುಂಠಿತವಾಗುವುದು ಖಚಿತ . ಸಾಕಷ್ಟು ಬಾರಿ ನಾವು ನೀಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಉದ್ಯಮಿ ಅಶೋಕ್ ದುರ್ಗದ ಬೇಸರ ವ್ಯಕ್ತಪಡಿಸಿದರು.
ಇಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಳ್ಳತನ ಪ್ರಮಾಣ ಜಾಸ್ತಿಯಾಗುತ್ತಿದೆ. ಜನರು ಗುಂಡಿ ಮಧ್ಯದಲ್ಲಿಯೇ ಸಾಗಬೇಕು. ರಸ್ತೆ ದುರಸ್ತಿ ಮಾಡಬೇಕುಅಶೋಕ್ ದುರ್ಗದ ಮೆಡಿಕಲ್ ಶಾಪ್ ಮಾಲೀಕ
ಇಲ್ಲಿ ಉತ್ಪಾದನೆಯಾಗುವ ವಸ್ತು ರಫ್ತು ಮಾಡಲಾಗುತ್ತದೆ. ನಿತ್ಯವೂ ಹತ್ತಾರು ಬಾರಿ ಇಲ್ಲಿ ಟೆಂಪೊ ಓಡಿಸುತ್ತಿದ್ದು ಅಪಘಾತವೂ ಆಗಿದೆ. ಇಲ್ಲಿಯ ರಸ್ತೆಯೇ ಸರಿ ಇಲ್ಲ. ಬೀದಿ ದೀಪ ಉರಿದಿದ್ದನ್ನು ನಾನು ಇನ್ನೂ ನೋಡಿಲ್ಲ.ಮಹಮದ್ ಖಾಸಿ ಟೆಂಪೊ ಚಾಲಕ
‘ಸಣ್ಣ ಕೈಗಾರಿಕೆ ವ್ಯಾಪ್ತಿಯಲ್ಲಿಯ ಕಪನೂರು ಮೊದಲ ಹಂತದ ರಸ್ತೆ ಚರಂಡಿ ಬೀದಿ ದೀಪಗಳನ್ನು ಅಭಿವೃದ್ಧಿಪಡಿಸಲು ₹7.75 ಕೋಟಿ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕೆ ಅನುಮೋದನೆ ಸಿಗಬೇಕಾಗಿದೆ’ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಮೋಹನ್ ದೇಶಮುಖ್ ಪ್ರತಿಕ್ರಿಯಿಸಿದ್ದಾರೆ. ‘ಕಪನೂರು ಕೈಗಾರಿಕಾ ವಲಯದ ಮೊದಲ ಹಂತದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ 50 ಹಾಗೂ ರಾಜ್ಯ ಸರ್ಕಾರ ಶೇ 50ರಷ್ಟು ಹಣ ನೀಡಬೇಕು. ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ನಂತರ ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಕರೆದು ಕೆಲಸ ಮಾಡಲಾಗುವುದು’ ಎನ್ನುತ್ತಾರೆ ದೇಶಮುಖ್. ‘ಇಲ್ಲಿರುವ 60 ಅಡಿ ರಸ್ತೆಯನ್ನು 2022ರಂದು ರಿಪೇರಿ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಡಾಂಬಾರು ರಸ್ತೆ ಬದಲಿಗೆ ಸಿಮೆಂಟ್ ರಸ್ತೆ ಮಾಡಬೇಕು ಎಂದು ಉದ್ಯಮಿಗಳು ಪಟ್ಟು ಹಿಡಿದ ಪರಿಣಾಮ ನನೆಗುದಿಗೆ ಬಿದ್ದಿದೆ. ಈಗ ಕ್ರಿಟಿಕಲ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ (ಕಠಿಣ ಮೂಲಸೌಲಭ್ಯ ಅಭಿವೃದ್ಧಿ ನಿಧಿ)ನ ಹಣ ಬಳಸಿ ತಾತ್ಕಾಲಿಕ ಕೆಲಸ ಮಾಡಲಾಗುವುದು. ನಂತರ ಶಾಶ್ವತ ಕಾಮಗಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.