ಶುಕ್ರವಾರ, ಸೆಪ್ಟೆಂಬರ್ 24, 2021
21 °C

ವಾಡಿ: ಸೌಲಭ್ಯ ವಂಚಿತ ಲಾಡ್ಲಾಪುರ ಪ್ರೌಢಶಾಲೆ

ಸಿದ್ದರಾಜ ಎಸ್ ಮಲ್ಕಂಡಿ Updated:

ಅಕ್ಷರ ಗಾತ್ರ : | |

Prajavani

ಲಾಡ್ಲಾಪುರ(ವಾಡಿ): ದೊಡ್ಡ ಕಟ್ಟಡವಿದ್ದರೂ ಶೌಚಾಲಯವಿಲ್ಲ, ತಡೆಗೋಡೆಯಿಲ್ಲದ ಕಾರಣ ದನಕರುಗಳು ನುಗ್ಗುತ್ತವೆ, ಹಾವು–ಚೇಳುಗಳ ಕಾಟವೂ ವ್ಯಾಪಕ, ಕುಡಿಯಲು ನೀರು ಸಹ ಸಿಗುವುದಿಲ್ಲ...

ಇದು ವಾಡಿ ಸಮೀಪ ಇರುವ ಲಾಡ್ಲಾಪುರ ಗ್ರಾಮದ ಸರ್ಕಾರಿ ಫ್ರೌಢಶಾಲೆಯ ಸಂಕ್ಷಿಪ್ತ ಪರಿಚಯ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಅಷ್ಟೇ ಅಲ್ಲ, ಶಿಕ್ಷಕರೂ ಸಹ ಕಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಚಿತ್ತಾಪುರ ತಾಲ್ಲೂಕಿನಲ್ಲಿ ಅತಿ ದೊಡ್ಡ ಫ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಲಾಡ್ಲಾಪುರ ಸರ್ಕಾರಿ ಫ್ರೌಢಶಾಲೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ‍‘ಸೌಕರ್ಯ ಇಂದಲ್ಲ, ನಾಳೆ ಸಿಗುವುದು’ ಎಂಬ ಭರವಸೆಯಲ್ಲಿ ವಿದ್ಯಾರ್ಥಿಗಳಿದ್ದರೆ, ‘ಸಮಸ್ಯೆ ಬೇಗನೇ ಪರಿಹಾರ ಆಗುವುದು’ ಎಂಬ ಆಶಾಭಾವ ಶಿಕ್ಷಕರು ಹೊಂದಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಫ್ರೌಢಶಾಲೆ ನಡೆಯುತ್ತಿದ್ದು, 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಶೌಚಾಲಯ ವಿರದ ಕಾರಣ ವಿದ್ಯಾರ್ಥಿಗಳು ಕೆರೆ ಇಲ್ಲವೇ ಜಾಲಿಮರಗಳ ಆಸರೆಗೆ ಹೋಗುತ್ತಾರೆ. ಹಾವು, ಚೇಳುಗಳ ಕಾಟವೂ ಅವರಿಗೆ ಆಗಾಗ್ಗೆ ಕಾಡುತ್ತದೆ.

‘ಎರಡು ವರ್ಷಗಳ ಹಿಂದೆ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಆದರೆ ಶೌಚಾಲಯ ನಿರ್ಮಿಸದ ಕಾರಣ ವಿದ್ಯಾರ್ಥಿಗಳಿಗೆ ಅಲ್ಲದೇ ಶಿಕ್ಷಕರಿಗೂ ಸಮಸ್ಯೆಯಾಗಿದೆ. ಶೌಚಕ್ಕೆ ಕೆರೆ ಮತ್ತು ಜಾಲಿಮರಗಳನ್ನೇ ಆಶ್ರಯಿಸಿದ್ದೇವೆ. ಶೌಚಾಲಯ ಸಮಸ್ಯೆ ಪರಿಹಾರ ಆಗುವವರೆಗೆ ನಮಗೆ ಭಯ ತಪ್ಪಿದ್ದಲ್ಲ’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

‘ವಿದ್ಯುತ್ ಸಂಪರ್ಕವಿಲ್ಲದ ಕಾರಣ ಶಾಲೆಯಲ್ಲಿನ ಕಂಪ್ಯೂಟರ್‌ ಮತ್ತು ಬ್ಯಾಟರಿಗಳು ತುಕ್ಕು ಹಿಡಿದಿವೆ. ಸ್ಮಾರ್ಟ್ ಕ್ಲಾಸ್ ತರಗತಿ ನಡೆಯುತ್ತಿಲ್ಲ. ಶಾಲೆಗೆ ಸೌಲಭ್ಯ ಕಲ್ಪಿಸಲು ಮತ್ತು ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಕಾಳಜಿ ತೋರಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

‘ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ’
‘ಲಾಡ್ಲಾಪುರ ಫ್ರೌಢಶಾಲೆಗೆ ಕುಡಿಯುವ ನೀರು, ಶೌಚಾಲಯ ಸಮಸ್ಯೆ ಪರಿಹರಿಸುವಂತೆ ಗ್ರಾಪಂ ಪಿಡಿಓ ಅವರಿಗೆ ತಿಳಿಸಿದ್ದೇನೆ. ಅಳ್ಳೊಳ್ಳಿ ಮುಖ್ಯರಸ್ತೆಯಲ್ಲಿನ ಗುಮ್ಮಿಯಿಂದ ನೀರಿನ ಪೈಪ್ ಲೈನ್ ಅಳವಡಿಸಿ ನೀರು ಪೂರೈಸಲು ಸೂಚಿಸಲಾಗಿದೆ’ ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರು ತಿಳಿಸಿದರು.

‘ಫ್ರೌಢಶಾಲೆಗೆ ಹೊಸ ಕಟ್ಟಡ ಮಂಜೂರಾಗಿದ್ದು, ಕಾಮಗಾರಿ ಶೀಘ್ರ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

‘ಸಮಸ್ಯೆಗಳ ಪರಿಹಾರಕ್ಕೆ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳ ಲಾಗುವುದು. ನರೇಗಾ ಅನುದಾನ ಬಳಸಿಕೊಂಡು ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಾಲಿಮರಗಳ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಲಾಡ್ಲಾಪುರ ಪಿಡಿಒ ರುದ್ರಪ್ಪ ಅಳ್ಳೊಳ್ಳಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು