ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್‌ ಬಿದ್ದುಮಹಿಳೆ ಸಾವು, 20 ಮಂದಿಗೆ ಗಾಯ

ಮಧ್ಯಾಹ್ನದ ಬಿಸಲಿನ ಝಳಕ್ಕೆ ಟೈರ್‌ ಸಿಡಿದು ಸಂಭವಿಸಿದ ಅಪಘಾತ
Last Updated 28 ಮಾರ್ಚ್ 2021, 5:26 IST
ಅಕ್ಷರ ಗಾತ್ರ

ಚಿಂಚೋಳಿ: ಶವ ಸಂಸ್ಕಾರಕ್ಕೆ ಜನರನ್ನು ಹತ್ತಿಸಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ಕಲ್ಲೂರು ರೋಡ್‌ ಗ್ರಾಮದ ಬಳಿ ಅಪಘಾತಕ್ಕೀಡಾಗಿದ್ದು, ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ. ತೀವ್ರ ಬಿಸಿಲಿನ ಕಾರಣ ಟ್ರ್ಯಾಕ್ಟರ್‌ನ ಟೈರ್‌ ಸಿಡಿದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮಳಖೇಡ ಗ್ರಾಮದ ಯಲ್ಲಮ್ಮ ಭೀಮರಾವ್ ಭೋವಿ (50) ಮೃತಪಟ್ಟವರು.ಇನ್ನೂ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರೂ ಸೇರಿದಂತೆ ಒಟ್ಟು 14 ಮಂದಿಗೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದೆ.ಐದು ಮಂದಿಗೆ ಚಿಕ್ಕಪುಟ್ಟ ತರಚಿದ ಗಾಯಗಳಾಗಿದ್ದು ಅವರನ್ನು ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ.

ಮಳಖೇಡ್‌ನ ಚಿನ್ನಯ್ಯ ಹಣಮಂತ ಭೋವಿ (ಟ್ರ್ಯಾಕ್ಟರ್ ಚಾಲಕ) ಅವರ ಸೋದರಅತ್ತೆ ಕಲ್ಲೂರು ರೋಡ್ ಗ್ರಾಮದಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 23 ಮಂದಿ ಸಂಬಂಧಿಕರನ್ನು ಟ್ರ್ಯಾಕ್ಟರ್‌ನ ಟ್ರಾಲಿಯಲ್ಲಿ ಕೂಡಿಸಿಕೊಂಡು ಕಲ್ಲೂರು ರೋಡ್‌ಗೆ ಬರುವಾಗ ಗ್ರಾಮದ ಕೂಗಳತೆ ದೂರದಲ್ಲಿಯೇ ಘಟನೆ ಸಂಭವಿಸಿದೆ.

ಮಧ್ಯಾಹ್ನ 12ರ ಸುಮಾರಿಗೆ ಬಿಸಿಲಿನ ಝಳಕ್ಕೆ ರಸ್ತೆ ಕಾದು ಟೈರ್‌ ಸಿಡಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ರಸ್ತೆ ಬದಿಗೆ ಉರುಳಿತು. ಘಟನೆ ನಡೆದ ತಕ್ಷಣ ಕಲ್ಲೂರು ರೋಡ್‌ ಗ್ರಾಮಸ್ಥರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಾಲಕರು ಗಾಯಾಗೊಂಡವರ ನೆರವಿಗೆ ಧಾವಿಸಿದರು. ಟ್ರ್ಯಾಕ್ಟರ್‌ನಲ್ಲಿ ಸಿಕ್ಕಿಕೊಂಡವರನ್ನು ಎತ್ತಿಕೊಂಡು ಹೊರತಂದರು. ಕೆಲವರು ನೀರು ಕುಡಿಸಿ ಸಂತೈಸಿದರು. 108 ಆಂಬುಲೆನ್ಸ್‌ಗೆ ಕರೆ ಮಾಡಿ ಕರೆಸಿದರು.

ಘಟನಾ ಸ್ಥಳಕ್ಕೆ ಮಿರಿಯಾಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಂತೋಷ ರಾಠೋಡ್, ಮಂಜುನಾಥ ಚೆಟ್ಟಿ, ಮಹಿಬೂಬ ಚೌಧರಿ, ಶಫಿ ಮೊದಲಾದವರು ಭೇಟಿ ನೀಡಿದರು. ಚಾಲಕ ಚಿನ್ನಯ್ಯ ಭೋವಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಂತ ಲಾರಿಗೆ ಬೈಕ್‌ ಡಿಕ್ಕಿ: ಸವಾರ ಸಾವು

ಚಿಂಚೋಳಿ: ತಾಲ್ಲೂಕಿನ ಬೆನಕೆಪಳ್ಳಿ ಬಳಿಯ ಫತ್ತು ನಾಯಕ ತಾಂಡಾಕ್ಕೆ ಬೈಕ್ ಮೇಲೆ ಬರುವ ದಾರಿ ಮಧ್ಯೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಚಿಮ್ಮನಚೋಡ,ಫತ್ತುನಾಯಕ ತಾಂಡಾ ಮಧ್ಯೆ ಸಂಭವಿಸಿದೆ.

ಫತ್ತು ನಾಯಕ ತಾಂಡಾದ ರಾಮದಾಸ ದೀಪಾದಾಸ ಮಹಾರಾಜ (38) ಮೃತಪಟ್ಟ ವ್ಯಕ್ತಿ.ತಾಜಲಾಪುರದಿಂದ ಫತ್ತುನಾಯಕ ತಾಂಡಾಕ್ಕೆ ಬರುವಾಗ ದಾರಿಯಲ್ಲಿ ನಿಲ್ಲಿಸಿದ ಲಾರಿ ಕಾಣಿಸದೇ ಡಿಕ್ಕಿ ಹೊಡೆದಿದ್ದಾರೆ. ಮೃತನಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಇದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT