ಕಲಬುರಗಿ: ‘ನಗರದಲ್ಲಿ ವಾಹನಗಳ ದಟ್ಟಣೆ ನಿರ್ವಹಣೆ ಹಾಗೂ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆ ಮುಂದಾಗಬೇಕು’ ಎಂದು ಕರ್ನಾಟಕ ಸಂಘಟನಾ ವೇದಿಕೆ ಅಧ್ಯಕ್ಷ ಗುರುರಾಜ ಬಂಡಿ ಮನವಿ ಮಾಡಿದರು.
‘ದಿನದಿಂದ ದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳ ವಿಸ್ತರಣೆ ಹಾಗೂ ಅಭಿವೃದ್ಧಿ ಆಗುತ್ತಿಲ್ಲ. ಇದರಿಂದಾಗಿ ಪಾದಚಾರಿಗಳು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗುತ್ತಿದೆ. ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪೊಲೀಸರು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.
‘ನಗರದಲ್ಲಿ ಶಾಪಿಂಗ್ ಮಾಲ್‌ಗಳು, ವಾಣಿಜ್ಯ ಕಟ್ಟಡಗಳು ವಿಪರೀತವಾಗಿ ತಲೆ ಎತ್ತುತ್ತಿವೆ. ಮಾಲ್‌ಗಳು, ಮಳಿಗೆಗಳಿಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ಸರಿಯಾದ ವ್ಯವಸ್ಥೆ ಿಲ್ಲದಿರುವುದರಿಂದ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಪಾಲಿಕೆಯ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ಮಾಡದೆ ಕಟ್ಟಡ ಕಟ್ಟಲು ಪರವಾನಿಗೆ ಕೊಡುತ್ತಿದ್ದಾರೆ. ಇದರಲ್ಲಿ ಜಿಲ್ಲಾಡಳಿತದ ಬೇಜವಾಬ್ದಾರಿಯೂ ಎದ್ದು ಕಾಣುತ್ತಿದೆ. ನಗರದಲ್ಲಿನ ಸಮಸ್ಯೆಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಆದ್ಯತೆ ನೀಡಿ, ಕ್ರಮಕ್ಕೆ ಮುಂದಾಗದೆ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಈಶ್ವರ ಹೆಗ್ಗಾ, ಸಾಗರ ಬಾವಿ, ಉಮೇಶ ಬಿರಾದಾರ, ಸಿದ್ದು ಖೇಣಿ, ಪ್ರದೀಪ ಓಂಕಾರ, ಅನಿಲ್ ಬಂಡಿ, ಮುತ್ತಣ್ಣ ಬಚ್ಚನ್ ಉಪಸ್ಥಿತರಿದ್ದರು.