ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಗಂಟುರೋಗ ಹತೋಟಿ ಸಾಧ್ಯ: ಪ್ರಾಣಿ ವಿಜ್ಞಾನಿ ಡಾ.ಮಂಜುನಾಥ ಪಾಟೀಲ

ಲಿಂಪಿಸ್ಕಿನ್‌ ಹತೋಟಿಗೆ ಐಸಿಎಆರ್– ಕೃಷಿ ವಿಜ್ಞಾನ ಕೇಂದ್ರದ ಪ್ರಾಣಿ ವಿಜ್ಞಾನಿ ಡಾ.ಮಂಜುನಾಥ ಪಾಟೀಲ ಸಲಹೆ
Last Updated 1 ಸೆಪ್ಟೆಂಬರ್ 2020, 15:09 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ‘ಮುದ್ದೆಚರ್ಮ ವೈರಸ್‍ ರೋಗ’ ಎಂಬ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ಪಶುಸಂಗೋಪನೆ ಹಾಗೂ ಹೈನುಗಾರಿಕೆ ಉದ್ಯಮಕ್ಕೆ ಇದು ಪೆಟ್ಟು ನೀಡಲಿದೆ. ಆದ್ದರಿಂದ ಜಾನುವಾರು ಸಾಕಣೆ ಮಾಡುವವರು ಹಾಗೂ ರೈತರು ಕೆಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ 5ರಿಂದ 6 ಸಾವಿರ ಜಾನುವಾರಿಗಳಿಗೆ ಈ ರೋಗ ಅಂಟಿರುವ ಸಾಧ್ಯತೆ ಇದೆ ಎಂದುಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಉಪನಿರ್ದೇಶಕಡಾ.ವಿ.ಎಚ್. ಹನುಮಂತಪ್ಪ ತಿಳಿಸಿದ್ದಾರೆ.

ನೆರೆಯ ರಾಜ್ಯಗಳಿಂದ ಬಂದಿರುವ ಈ ರೋಗ ಜಾನುವಾರಗಳ ಹಾಲಿನ ಇಳುವರಿ ಕಡಿಮೆ ಮಾಡುತ್ತದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಮೊದಲು ಒರಿಸ್ಸಾದಲ್ಲಿ ಕಂಡುಬಂದಿತ್ತು. ಆನಂತರ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿತು. ಅಲ್ಲಿನ ಜಾನುವಾರುಗಳ ಮೂಲಕ ಜಿಲ್ಲೆಗೆ ಲಗ್ಗೆ ಇಟ್ಟಿದೆ. ಈಗಾಗಲೇ ಸಾಂಕ್ರಾಮಿಕ ವೈರಸ್‍ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರಗಳಲ್ಲಿ ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ರೋಗದ ಲಕ್ಷಣಗಳು: ‘ಕ್ಯಾಪ್ರಿ ಪಾಕಸ್‌’ ವೈರಸ್‍ನಿಂದ ಬರುವ ಈ ರೋಗವು ಎತ್ತು, ಆಕಳು, ಎಮ್ಮೆ ಮತ್ತು ಕರುಗಳಲ್ಲಿ ಮಾತ್ರ ಕಾಣಿಸುತ್ತದೆ. ಈ ವೈರಾಣು ನೊಣ, ಸೊಳ್ಳೆ ಹಾಗೂ ಉಣ್ಣೆ ಕಚ್ಚುವ ಮೂಲಕ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಕ್ಕೆ ಹರಡುತ್ತದೆ.

ಮಿಶ್ರತಳಿಗಳು ಹಾಗೂ ಹೆಚ್ಚು ಹಾಲು ಕೊಡುವ ಆಕಳು ಮತ್ತು ಕರುಗಳಿಗೆ ಅತಿ ಹಚ್ಚಾಗಿ ಈ ರೋಗ ಭಾದಿಸುತ್ತದೆ. ‘ಲಂಪಿಸ್ಕಿನ್ ಡಿಸೀಸ್’ ಎಂದು ಕರೆಯಲ್ಪಡುವ ಈ ವೈರಸ್‍ ರೋಗ, ಅತಿ ವೇಗವಾಗಿ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಕ್ಕೆ ಹರಡುತ್ತದೆ. ಎರಡು ಅಥವಾ ಮೂರು ದಿನಗಳವರೆಗೆ ಸಾಧಾರಣ ಜ್ವರ, ನಂತರ ಜಾನುವಾರುಗಳ ಚರ್ಮದ ಮೇಲೆ ಚಿಕ್ಕ ಗಡ್ಡೆಗಳಾಗುವುದು, ಗಂಟುಕಟ್ಟುವುದು, ರೂಪಾಯಿ ನಾಣ್ಯದಷ್ಟು ಚರ್ಮ ಹೋಗಿ ಹುಣ್ಣು ಬೀಳುವುದು ಈ ಕಾಯಿಲೆಯ ಮುಖ್ಯ ಲಕ್ಷಣಗಳಾಗಿವೆ.

ಪರಿಣಾಮಗಳೇನು?: ಬಾಯಿ ಹಾಗೂ ಉಸಿರಾಟದ ನಾಳದಲ್ಲಿ ಗಾಯಗಳಾಗುವುದು, ಬಡಕಲಾಗುವುದು ಮತ್ತು ದುಗ್ದ ಗಂಟುಗಳು ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ಗಬ್ಬಾದ ದನಗಳು ಗರ್ಭಪಾತವಾಗುವುದು, ಬಂಜೆತನ ಸಮಸ್ಯೆ ಕಾಣಿಸುತ್ತದೆ. ಚಿಕಿತ್ಸೆ ನಿರ್ಲಕ್ಷಿಸಿದ್ದಲ್ಲಿ, ಜಾನುವಾರಗಳು ಸಾವನ್ನಪ್ಪಬಹುದು. ಸಾವಿನ ಪ್ರಮಾಣ ಕೇವಲ ಶೇಕಡ 2ರಷ್ಟುಇದ್ದರೂ ಜಾನುವಾರು ಸರಿಯಾಗಿ ಮೇಯದೆ ನಿಗದಿತ ಹಾಲು ನೀಡುವುದಿಲ್ಲ. ಶಕ್ತಿ ಕೊರತೆ ಉಂಟಾಗಿ ಜಾನುವಾರುಗಳು ಬೆದೆಗೆ ಬಾರದೇ ರೈತರ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಆತಂಕ ಇರುತ್ತದೆ.

ಮುಂಜಾಗ್ರತೆ ಹಾಗೂ ಹತೋಟಿ ಕ್ರಮಗಳು:

* ಲಂಪಿಸ್ಕಿನ್ ಡಿಸೀಸ್ ಬಂದಿರುವ ಜಾನುವಾರುಗಳನ್ನು ಉಳಿದ ಆರೋಗ್ಯವಂತಹ ಜಾನುವಾರುಗಳಿಂದ ಬೇರ್ಪಡಿಸಬೇಕು.

* ಜಾನುವಾರುಗಳ ಮೈಮೇಲೆ ಚಿಕ್ಕಚಿಕ್ಕ ಗಡ್ಡೆಗಳು ಕಾಣಿಸಿಕೊಂಡಿದ್ದರೆ, ದನದ ಕೊಟ್ಟಿಗೆಯಲ್ಲಿ ಕಟ್ಟದೇ ಹೊರಗಡೆ ಕಟ್ಟಬೇಕು.

* ನೊಣ, ಸೊಳ್ಳೆ ಹಾಗೂ ಉಣ್ಣೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು.

* ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ಜಾನುವಾರಗಳಿಗೆ ಅತೀಯಾಗಿ ಕಚ್ಚುತ್ತವೆ. ಹೀಗಾಗಿ ದಪ್ಪನೆಯ ಸೊಳ್ಳೆಯ ಪರದೆಯ ಒಳಗಡೆ ಜಾನುವಾರುಗಳನ್ನು ಕಟ್ಟಬೇಕು. ನಂತರ ಬೇವಿನ ಎಲೆಗಳ ಹೊಗೆಯಿಂದ ಸೊಳ್ಳೆಗಳ ಕಡಿತವನ್ನು ನಿಯಂತ್ರಿಸಬೇಕು.

* ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಜಾನುವಾರುಗಳ ಚಲನೆಯನ್ನು ನಿರ್ಬಂಧಿಸಬೇಕು.

* ರೋಗ ಬಂದತಹ ಪ್ರದೇಶದಿಂದ ಯಾವುದೇ ಜಾನುವಾರುಗಳ ಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು.

* ಜಾನುವಾರುಗಳನ್ನು ಕಟ್ಟುವ ಜಾಗ, ಹಗ್ಗ, ಸರಪಳಿ ಅಥವಾ ಇತ್ಯಾದಿ ವಸ್ತುಗಳನ್ನು ಕ್ರಿಮಿನಾಶಕಗಳಾದ ಈಥರ್ (ಶೇ 20), ಕ್ಲೋರೊಫಾರ್ಮ್‌ (ಶೇ 1), ಫಾರ್ಮಲಿನ್ (ಶೇ 1) ಅಥವಾ ಫಿನಾಲ್ (ಶೇ 2)ನಿಂದ ಸ್ವಚ್ಛಗೊಳಿಸಬೇಕು.

* ಎಲ್ಲದಕ್ಕಿಂತ ಮುಖ್ಯವಾಗಿ, ಜಾನುವಾರುಗಳಲ್ಲಿ ಮುದ್ದೆರೋಗದ ಲಕ್ಷಣಗಳು ಕಂಡಕೂಡಲೇ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತಂದುಚಿಕಿತ್ಸೆ ಕೊಡಿಸಬೇಕು.

ಅಗತ್ಯ ಔಷಧಿ ಲಭ್ಯ

ಕಲಬುರ್ಗಿ: ಜಿಲ್ಲೆಯಲ್ಲಿ ಲಿಂಪಿಸ್ಕಿನ್‌ ಕಾಯಿಲೆಗೆ ಲಕ್ಷಣದ ಅನುಗುಣವಾಗಿ ಔಷಧ ಲಭ್ಯವಿದೆ. ಇದರಿಂದ ಜಾನುವಾರುಗಳ ಸಾವಿನ ಪ್ರಮಾಣ ಕಡಿಮೆ ಇದೆ. ಆದರೂ ಮುಂಜಾಗ್ರತೆಗಾಗಿ ಜಾನುವಾರುಗಳ ಆರೋಗದ ಹಿತದೃಷ್ಟಿಯಿಂದ ಪಶು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ಕಲಬುರಗಿಯ ಐಸಿಎಆರ್– ಕೃಷಿ ವಿಜ್ಞಾನ ಕೇಂದ್ರದ ಪ್ರಾಣಿ ವಿಜ್ಞಾನಿ ಡಾ.ಮಂಜುನಾಥ ಪಾಟೀಲ

(ಹೆಚ್ಚಿನ ಮಾಹಿತಿಗೆ 94492 36868 ಸಂಪರ್ಕಿಸಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT