ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4.62 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಗುರಿ: ಯಶವಂತ ಗುರುಕರ್

Last Updated 9 ಆಗಸ್ಟ್ 2022, 14:43 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ 4.62 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಗುರಿಯಿದ್ದು, ಆಗಸ್ಟ್ 13ರಿಂದ 15ರವರೆಗೆ ಆಸಕ್ತರು ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಬಹುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಒಟ್ಟು 6.10 ಲಕ್ಷ ಮನೆಗಳಿವೆ. ಶೇ 75ರಷ್ಟು ಮನೆಗಳ ಮೇಲಾದರೂ ಧ್ವಜ ಹಾರಿಸುವ ಸಂಕಲ್ಪವಿದೆ. ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಗ್ರಾಮ ಒನ್ ಕೇಂದ್ರಗಳು, ಕಂದಾಯ ನಿರೀಕ್ಷಕರ ಕಚೇರಿ ಸೇರಿ ಕಂದಾಯ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಧ್ವಜ ಮಾರಲಾಗುತ್ತಿದೆ’ ಎಂದರು.

‌‘ಪ್ರತಿ ಧ್ವಜಕ್ಕೆ ₹ 22 ನಿಗದಿ ಮಾಡಲಾಗಿದೆ. ಧ್ವಜ ಹಾರಿಸುವ ನಿಯಮಾವಳಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಆಗಸ್ಟ್ 13 ಮತ್ತು 14ರಂದು ಇಡೀ ದಿನ ಧ್ವಜ ಹಾರಿಸಬಹುದು. 15ರಂದು ಸಂಜೆ ಸೂರ್ಯಾಸ್ತದ ವೇಳೆಗೆ ಧ್ವಜ ಇಳಿಸಬೇಕು’ ಎಂದರು.

1500 ಮನೆಗಳಿಗೆ ನೀರು: ‘15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 1500 ಮನೆಗಳಿಗೆ ನೀರು ನುಗ್ಗಿದ್ದು, 1050 ಮನೆಗಳು ಭಾಗಶಃ ಬಿದ್ದಿವೆ. 1211 ಮನೆಗಳ ಮಾಲೀಕರಿಗೆ ದುರಸ್ತಿಗಾಗಿ ತಲಾ ₹ 10 ಸಾವಿರ ಪರಿಹಾರ ನೀಡಲಾಗಿದೆ. ಕಲಬುರಗಿ, ಚಿತ್ತಾಪುರ, ಆಳಂದ, ಕಮಲಾಪುರ ತಾಲ್ಲೂಕುಗಳಲ್ಲಿ ಒಟ್ಟು 6 ಜನ ಮಳೆ ಸಂಬಂಧಿ ಅವಘಡಗಳಿಂದ ಮೃತಪಟ್ಟಿದ್ದು, ಅವರ ಸಂಬಂಧಿಕರಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದು ಅವರು ವಿವರಿಸಿದರು.

ಪ್ರವಾಹ ಸಾಧ್ಯತೆ ಇಲ್ಲ: ಸದ್ಯಕ್ಕೆ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಗಳಿಲ್ಲ. ಅಲ್ಲದೇ, ಮಹಾರಾಷ್ಟ್ರದ ಉಜನಿ ಅಣೆಕಟ್ಟೆ ಭರ್ತಿಯಾಗಲು 14 ಟಿಎಂಸಿ ಅಡಿ ನೀರು ಬರಬೇಕಿದೆ. ಹೀಗಾಗಿ, ಅಣೆಕಟ್ಟೆಯಿಂದ ನೀರನ್ನು ಹೊರಬಿಡುತ್ತಿಲ್ಲ. 1.75 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲು ಶುರು ಮಾಡಿದರೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡಬೇಕಾಗುತ್ತದೆ. ಇನ್ನೂ 10 ದಿನಗಳವರೆಗೆ ನೀರು ಬಿಡುವ ಸಾಧ್ಯತೆಗಳಿಲ್ಲ ಎಂದರು.

ಶಿಥಿಲಾವಸ್ಥೆ ತಲುಪಿರುವ ಶಾಲಾ, ಕಾಲೇಜುಗಳ ಕಟ್ಟಡಗಳನ್ನು ಗುರುತಿಸಿ ಅಲ್ಲಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಂತೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಡಿ.ಸಿ. ಖಾತೆಯಲ್ಲಿ ₹ 41 ಕೋಟಿ
‘ಮಳೆ ಸಂಬಂಧಿ ಅವಘಡಗಳಿಗೆ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಹಣದ ಕೊರತೆ ಇಲ್ಲ. ಈಗಾಗಲೇ ₹ 41 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿದ್ದು, ಅಗತ್ಯ ಬಿದ್ದರೆ ರಾಜ್ಯ ಸರ್ಕಾರ ಇನ್ನಷ್ಟು ಬಿಡುಗಡೆ ಮಾಡಲಿದೆ. ಪರಿಹಾರ ಕಾರ್ಯಗಳಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಜಿಲ್ಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇದೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ನಿಜವಲ್ಲ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.

*

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಿಸಿ 11 ವರ್ಷಗಳಾಗಿದ್ದು, ಇಷ್ಟು ಬೇಗ ಚಾವಣಿ ಕುಸಿಯಬಾರದಿತ್ತು. ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
-ಯಶವಂತ ವಿ. ಗುರುಕರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT