‘ಸಣ್ಣ ವಿಮಾನ’ ಹಾರಾಟ ರಾಜಕೀಯ ಸ್ಟಂಟ್: ಬಿ.ಎಸ್.ಯಡಿಯೂರಪ್ಪ

7
ಸಂಸದ ಖರ್ಗೆ ವಿರುದ್ಧ ಬಿಎಸ್‌ವೈ ವಾಗ್ದಾಳಿ

‘ಸಣ್ಣ ವಿಮಾನ’ ಹಾರಾಟ ರಾಜಕೀಯ ಸ್ಟಂಟ್: ಬಿ.ಎಸ್.ಯಡಿಯೂರಪ್ಪ

Published:
Updated:
Deccan Herald

ಕಲಬುರ್ಗಿ: ‘ಗುಲಬರ್ಗಾ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸಣ್ಣ ವಿಮಾನದ ಪ್ರಾಯೋಗಿಕ ಹಾರಾಟ ಕೈಗೊಳ್ಳುವ ಮೂಲಕ ರಾಜಕೀಯ ಸ್ಟಂಟ್ ಮಾಡಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಮಾನ ನಿಲ್ದಾಣ ಕಾಮಗಾರಿಗೆ ನಾನು ಶಂಕು ಸ್ಥಾಪನೆ ನೆರವೇರಿಸಿದ್ದೇನೆ. ಅಲ್ಲದೆ, ಈಚೆಗೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದೇನೆ. ಆದರೆ, ಖರ್ಗೆ ಅವರು ಏನೂ ಇಲ್ಲದೆ ಉಡಾನ್ ಉಡಾನ್ ಅಂತ ಪ್ರಚಾರ ಮಾಡುತ್ತಿದ್ದಾರೆ. ಸಂಸದೀಯ ನಾಯಕರಾಗಿ ಖರ್ಗೆ ಜವಾಬ್ದಾರಿಯಿಂದ ಮಾತನಾಡಬೇಕು. ಉಡಾನ್ ಯೋಜನೆಯಡಿ ಸೇರಿಸಬಾರದು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಖರ್ಗೆ ಚುನಾವಣೆ ಸ್ಟಂಟ್ ಮಾಡುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22–23 ಸ್ಥಾನಗಳನ್ನು ಗೆಲ್ಲುತ್ತೇವೆ. ಕಲಬುರ್ಗಿ ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ಗೆಲ್ಲಬೇಕು ಎಂಬ ಹಠವಿದೆ. ರೇವೂನಾಯಕ್ ಬೆಳಮಗಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಖರ್ಗೆ ಯಾವತ್ತೋ ಸೋಲುತ್ತಿದ್ದರು. ಸಚಿವ ಸ್ಥಾನದ ಆಕಾಂಕ್ಷೆಯಿಂದ ಬೆಳಮಗಿ ಮೋಸ ಮಾಡಿದರು. ಈ ಬಾರಿ ಎಚ್ಚರಿಕೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಸ್ಥಳೀಯರಿಗೆ ಆದ್ಯತೆ ನೀಡುತ್ತೇವೆ’ ಎಂದು ತಿಳಿಸಿದರು.

‘ಪಕ್ಷಕ್ಕೆ ಈಗ ಮಾಜಿ ಸಚಿವರು, ಶಾಸಕರು ಸೇರ್ಪಡೆಯಾಗುತ್ತಿದ್ದಾರೆ. ಮುಂದೆ ಇನ್ನೂ ಯಾರಾರು ಬರುತ್ತಾರೆ ಎಂಬುದನ್ನು ಹೇಳಲಿಕ್ಕಾಗದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕರಾದ ಬಿ.ಜಿ.ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ಬಾಬುರಾವ ಚವಾಣ್, ಸುಭಾಷ ರಾಠೋಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !