ಶನಿವಾರ, ಜನವರಿ 22, 2022
16 °C
ಎರಡು ದಿನಗಳ ಎಐಡಿವೈಒ ರಾಜ್ಯಮಟ್ಟದ ಸಮ್ಮೇಳನ

ನಿರುದ್ಯೋಗ, ಅಪೌಷ್ಟಿಕತೆ ಸಾವಿಗಿಂತ ಭೀಕರ: ಡಾ. ಬರಗೂರು ರಾಮಚಂದ್ರಪ್ಪ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಮೂರನೇ ವಿಶ್ವ ಯುದ್ಧ ನಡೆದರೆ ಯೋಧರು ಸಾಯುವುದಿಲ್ಲ. ಬದಲಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ಯೋಧರು ಗಾಯಾಳು ಆಗುವುದಿಲ್ಲ. ಬದಲಾಗಿ ಅಸಂಖ್ಯಾತ ನಿರುದ್ಯೋಗಿಗಳಾಗುತ್ತಾರೆ. ಅದೇ ವಿಶ್ವಯುದ್ಧದ ಸ್ವರೂಪ’ ಎಂದು ಬ್ರೆಜಿಲ್ ಕ್ರಾಂತಿಕಾರಿ ಲೂಯಿಸ್ ಇಗ್ನೇಷಿಯಾ ಹೇಳಿದ ಮಾತು ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂದು ನಿಜವಾಗುತ್ತಿದೆ’ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ನಡೆದ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ಐದನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೂರನೇ ವಿಶ್ವ ಯುದ್ಧದಿಂದ ಅಮೆರಿಕವು ಲ್ಯಾಟಿನ್ ಅಮೆರಿಕ ಮತ್ತು ತೃತೀಯ ಜಗತ್ತನ್ನು ಆಳಲಿದೆ. ಕಾರ್ಖಾನೆಗಳು ಮುಚ್ಚಲಿವೆ ಎಂದಿದ್ದರು. ಅದೆಲ್ಲ ಸತ್ಯವಾಗುತ್ತಿದೆ. 1990ರ ದಶಕದಲ್ಲಿ ಭಾರತದಲ್ಲಿ ಜಾಗತೀಕರಣ ನೀತಿ ಜಾರಿಯಾದ ಬಳಿಕ ಬಂಡವಾಳಶಾಹಿಗಳು ದೇಶದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ’ ಎಂದರು.

‘ವಿದೇಶಿ ಸಾಲ ಪಡೆದ ಬಡರಾಷ್ಟ್ರಗಳು ಬಡ್ಡಿ ಪಾವತಿಸಿ ಸುಸ್ತಾಗಿವೆ. ಇದೇ ಅಸ್ತ್ರವನ್ನು ಬಳಸಿಕೊಂಡು ಶ್ರೀಮಂತ ರಾಷ್ಟ್ರಗಳು ಬಡರಾಷ್ಟ್ರಗಳನ್ನು ಹಣಿಯುತ್ತಿವೆ’ ಎಂದು ವಿವರಿಸಿದರು.

‘ಧರ್ಮವು ಸಂಸ್ಕೃತಿಯ ಒಂದು ಭಾಗ. ಆದರೆ, ಸಂಸ್ಕೃತಿಯನ್ನೇ ಧರ್ಮದ ಭಾಗ ಎನ್ನುವ ಪ್ರಯತ್ನಗಳು ನಡೆದಿವೆ. ದೇಶದ ಶೇ 99ರಷ್ಟು ಜನರು ಆಸ್ತಿಕರು, ದೇವರನ್ನು ನಂಬುವವರು. ಅದನ್ನೇ ಬಂಡವಾಳ ಮಾಡಿಕೊಂಡು ದೇಶದಲ್ಲಿ ಮೂಲಭೂತವಾದ ಹೇರಲಾಗುತ್ತಿದೆ. ಈ ವ್ಯತ್ಯಾಸ ಜನರ ಮುಂದೆ ಇಡಬೇಕಾದ ಕರ್ತವ್ಯ ದೇಶದ ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ಮೇಲಿದೆ. ನಾನು ನಾಸಿಕನಾಗಿದ್ದೇನೆ. ಆದರೆ, ಆಸ್ತಿಕರು ಎಂಬ ಕಾರಣ ನೀಡಿ ಜನರ ಮಧ್ಯೆ ಹೋಗುವುದನ್ನು ಬಿಡಬಾರದು’ ಎಂದು ಕಿವಿಮಾತು ಹೇಳಿದರು.

ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ‘ದೇಶದ ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುವ ಹೋರಾಟಗಾರರಿಗೆ ದೆಹಲಿ ಗಡಿಗಳಲ್ಲಿ  ಒಂದು ವರ್ಷದಿಂದ ನಡೆಯುತ್ತಿರುವ ರೈತ ಚಳವಳಿ ಸ್ಫೂರ್ತಿಯಾಗಿದೆ. ರೈತ ಹೋರಾಟದ ಬಗ್ಗೆ ಆಳುವ ಬಿಜೆಪಿ ಪಕ್ಷದ ಮುಖಂಡರು ಮಾಡಿದ ಅವಮಾನ, ನೀಡಿದ ಹೇಳಿಕೆಗಳು ಅಷ್ಟಿಷ್ಟಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಂದೋಲನ ಜೀವಿಗಳು ಎಂದು ಛೇಡಿಸಿದರು. ಆದರೆ, ಅದಾವುದರ ಬಗ್ಗೆಯೂ ಗಮನ ಹರಿಸದೇ ತಮ್ಮ ಗುರಿಯತ್ತ ಕೇಂದ್ರೀಕರಿಸಿ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್‌ ಮಾತನಾಡಿ, ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ದೇಶವನ್ನು ಶೋಷಣೆ ಮುಕ್ತ ಮಾಡಲು ಹಿರಿಯರ ಮಾರ್ಗದರ್ಶನ, ಯುವಕರ ಪ್ರಯತ್ನ ಎರಡೂ ಅಗತ್ಯವಾಗಿವೆ. ಭಗತ್ ಸಿಂಗ್‌, ಸುಖದೇವ್, ರಾಜಗುರು, ಖುದಿರಾಂ ಬೋಸ್ ಮುಂತಾದ ಕ್ರಾಂತಿಕಾರಿಗಳು ಬರೀ ಬ್ರಿಟಿಷರು ಭಾರತ ಬಿಟ್ಟು ಹೋಗಲಿ ಎಂದು ಬಯಸಲಿಲ್ಲ. ಬದಲಾಗಿ, ಇಲ್ಲಿನ ಶೋಷಕರಿಗೂ ರಾಜ್ಯಾಧಿಕಾರ ಸಿಗಬಾರದು ಎಂದು ಬಯಸಿದ್ದರು. ಆ ಉದ್ದೇಶ ಇನ್ನೂ ಈಡೇರಿಲ್ಲ. ಆ ನಿಟ್ಟಿನಲ್ಲಿ ಯುವಕರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು’ ಎಂದರು.

ಸಭೆಯಲ್ಲಿ ಎಐಡಿವೈಒ ರಾಜ್ಯ ಘಟಕದ ಅಧ್ಯಕ್ಷೆ ಎಂ. ಉಮಾದೇವಿ, ಕಾರ್ಯದರ್ಶಿ ಜಿ. ಶಶಿಕುಮಾರ್ ಮಾತನಾಡಿದರು.

ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರತಿಭಾ ನಾಯಕ್, ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಶರಣಪ್ಪ ಉದ್ಬಾಳ್, ಸಿದ್ದಲಿಂಗ ಬಾಗೇವಾಡಿ, ಲಕ್ಷ್ಮಣ ಜಡಗನ್ನವರ, ಜಯಪ್ರಕಾಶ್ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು