ಬೆಂಗಳೂರು: ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಯಾದಗಿರಿಯಲ್ಲಿ ನಿಲುಗಡೆಗೆ ಶನಿವಾರ ರಾತ್ರಿ ನಗರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ 2024-25ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ₹ 7,560 ಕೋಟಿ ಅನುದಾನ ನೀಡಲಾಗಿದೆ. ಇದು 2009-14ರ ಅವಧಿಯ ವಾರ್ಷಿಕ ಸರಾಸರಿ ಅನುದಾನಕ್ಕಿಂತ 9 ಪಟ್ಟು ಹೆಚ್ಚಾಗಿದೆ. ರಾಜ್ಯದ ಎಲ್ಲ ಪ್ರಮುಖ ಮಾರ್ಗಗಳನ್ನು ದ್ವಿಪಥವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ರಾಜ್ಯದ ಶೇ 90ರಷ್ಟು ರೈಲು ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಲೆವೆಲ್ ಕ್ರಾಸಿಂಗ್ ಮುಚ್ಚಲು 2014ರಿಂದ ಇಲ್ಲಿವರೆಗೆ ರಾಜ್ಯದಲ್ಲಿ 534 ಮೇಲ್ಸೇತುವೆ, ಕೆಳ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ₹ 2,900 ಕೋಟಿ ವೆಚ್ಚದಲ್ಲಿ 59 ರೈಲು ನಿಲ್ದಾಣಗಳ ನವೀಕರಣ ಕಾಮಗಾರಿಗಳು ನಡೆಯುತ್ತಿವೆ. ₹ 7.5 ಕೋಟಿ ವೆಚ್ಚದಲ್ಲಿ ಯಾದಗಿರಿ ನಿಲ್ದಾಣವನ್ನು ಮೇಲ್ದರ್ಜೆಗೇರಿ
ಸಲಾಗುತ್ತಿದೆ. ರಾಯಚೂರು ನಿಲ್ದಾಣವನ್ನು ಉನ್ನತೀಕರಿಸಲು ₹ 12.5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
10 ವರ್ಷಗಳಲ್ಲಿ ರೈಲ್ವೆಯಲ್ಲಿ ಐದು ಲಕ್ಷ ಉದ್ಯೋಗಗಳನ್ನು ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲಾಗಿದೆ. ಸಾಮಾನ್ಯ ವರ್ಗದ ಜನರ ಪ್ರಯಾಣಕ್ಕಾಗಿ ದೇಶದಲ್ಲಿ 10 ಸಾವಿರ ಸಾಮಾನ್ಯ ದರ್ಜೆಯ (ಜನರಲ್) ಕೋಚ್‌ಗಳ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯದಿಂದ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಹೆಚ್ಚುವರಿ ವಿಭಾಗೀಯ ರೈಲ್ವೆ
ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ ಪೂರಿಯಾ ಮತ್ತು ಆಶುತೋಷ್ ಮಾಥುರ್ ಉಪಸ್ಥಿತರಿದ್ದರು. ಯಾದಗಿರಿ ನಿಲ್ದಾಣದಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ್, ದಕ್ಷಿಣ ಮಧ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಧನಂಜಯುಲು, ಗುಂತಕಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಂ. ವಿಜಯ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.