ಕಲಬುರಗಿ: ಕೆಂಪು, ಹಸಿರು, ಶಂಖ, ನವಿಲು ದಡಿಗಳ ಬಣ್ಣಬಣ್ಣದ ಸೀರೆಯುಟ್ಟು ಬಂಗಾರದ ಸರ, ಮುತ್ತಿನ ನತ್ತು, ಓಲೆ, ಬಳೆ ತೊಟ್ಟು ನಗುತ್ತಾ ಕುಳಿತ ಬೆಳ್ಳಿ ಮೊಗದ ದೇವಿ...
ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ನಡೆದ ವರಮಹಾಲಕ್ಷ್ಮಿ ಪೂಜೆಗಾಗಿ ಮಹಿಳೆಯರು ದೇವಿಯನ್ನು ಅಲಂಕರಿಸಿದ ಪರಿ ಇದು. ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮನೆಗಳಲ್ಲಿ ಮಹಿಳೆಯರು ಸಂಭ್ರಮ, ಸಡಗರದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ವ್ರತ ಆಚರಿಸಿದ್ದ ಮಹಿಳೆಯರು ಮನೆಯ ಜಗುಲಿ ಹಾಗೂ ಮನೆಯ ಕೋಣೆಗಳಲ್ಲಿ ಲಕ್ಷ್ಮಿದೇವಿ ಮೂರ್ತಿ ಕುಳ್ಳಿರಿಸಲು ಬೃಹತ್ ಮಂಟಪ ನಿರ್ಮಿಸಿ, ವರಮಹಾಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ, ಹತ್ತಿಯಿಂದ ಮಾಡಿ ಹಾರ, ದುಂಡು ಮಲ್ಲಿಗೆ, ಕಮಲ ಸೇರಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿದರು.
ಬಾಳೆ ದಿಂಡು, ಮಾವಿನ ಎಲೆ, ಕಬ್ಬುಕಟ್ಟಿ, ಕಬ್ಬಿನ ಪೈರಿನ ತೋರಣದಿಂದ ಮನೆಗಳನ್ನು ಸಿಂಗರಿಸಿ, ಕಳಸದ ಮೇಲೆ ತೆಂಗಿನ ಕಾಯಿ ಇಟ್ಟು ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ವರಮಹಾಲಕ್ಷ್ಮಿ ಮೂರ್ತಿಗೆ ಬಂಗಾರದ ಆಭರಣ, ಐದು ಬಗೆಯ ಸಿಹಿ ಪದಾರ್ಥ 11 ಬಗೆಯ ನೈವೇದ್ಯ ಸಿದ್ಧಪಡಿಸಿ ದೇವಿಗೆ ಅರ್ಪಿಸಿದರು.
ಮಹಿಳೆಯರು ತಯಾರಿಸಲಾದ ಪಂಚಾಮೃತ ಅಭಿಷೇಕವನ್ನು ದೇವಿಗೆ ಅರ್ಪಿಸಿ, ಮಹಿಳೆಯರು ಕಳಸವನ್ನು ಬೆಳಗಿ ಭಕ್ತಿ ಮೆರೆದರು. ಪೂಜೆ ಬಳಿಕ ಕೆಲವರು ಐದು ಜನ, ಇನ್ನು ಕೆಲವರು 11 ಜನ ಮಹಿಳೆಯರಿಗೆ ಊಟ ಮಾಡಿಸಿ ಉಡಿ ತುಂಬಿದರು. ಬಾಲಕಿಯರಿಗೆ ಕುಪ್ಪಸ ತಾಂಬೂಲ ದಕ್ಷಿಣೆಗಳಿಂದ ಉಡಿ ತುಂಬಿದರು. ನೆರೆಹೊರೆಯ ಹಾಗೂ ಪರಿಚಯಸ್ಥ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ–ಕುಂಕುಮ ಕೊಟ್ಟು ಉಡಿ ತುಂಬುವುದು ಎಲ್ಲೆಡೆ ಕಂಡು ಬಂತು.
ಹೊಸ ಸೀರೆ ತೊಟ್ಟ ಸಂಭ್ರಮ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಲ್ಲಿ ಸಂಭ್ರಮ ಮನೆ ಮಾಡಿತ್ತು. ಬಣ್ಣ ಬಣ್ಣದ ಸೀರೆ ತೊಟ್ಟು, ಬಂಗಾರ ಆಭರಣಗಳನ್ನು ಹಾಕಿಕೊಂಡು ಸಂಭ್ರಮದಿಂದ ಹಬ್ಬ ಆಚರಿಸಿದರು.
ಕಲಬುರಗಿಯ ಐವಾನ್–ಇ–ಶಾಹಿ ಬಡಾವಣೆಯಲ್ಲಿರುವ ಸವಿತಾ ಗುತ್ತೇದಾರ ಅವರ ನಿವಾಸದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಿಗೆ ವಿವಿಧ ಬಗೆ ಹಾರ, ಬಂಗಾರ ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಐದು ಜನ ಮುತ್ತೈದೆಯರು ಆರತಿ ಮಾಡಿ ದೇವಿಯ ಪೂಜೆ ಸಲ್ಲಿಸಿದರು.
ಈ ವೇಳೆ ಉಷಾ ವಡಕೆ, ಪ್ರೇಮಲತಾ, ಸಂಧ್ಯಾ, ತುಳಸಿ ಚಪಳಿ ಇತರರು ಪೂಜೆಯಲ್ಲಿ ಭಾಗಿಯಾಗಿದ್ದರು.
ಕಲಬುರಗಿಯ ಕೊತ್ತಂಬರಿ ಬಡಾವಣೆಯಲ್ಲಿರುವ ವಾಣಿಶ್ರಿ ಮೊದಲಿಯಾರ್ ಅವರ ಮನೆಯಲ್ಲಿ ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ ಪಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಮನೆಯಲ್ಲಿ ಮಂಟಪ ಹಾಕಿ ತಳಿರು ತೋರಣದಿಂದ ಮನೆಯನ್ನು ಸಿಂಗರಿಸಲಾಗಿತ್ತು. 11 ಜನ ಮುತ್ತೈದೆಯರು ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು.
ಈ ವೇಳೆ ಶ್ರಾವಣಿ ಮೊದಲಿಯಾರ್, ಶಿಲ್ಪಾ ಕಿಣ್ಣಿ, ರೇಖಾ ಪಾಟೀಲ, ಸುನಿತಾ ಗಿಯಾ, ಗಾಯತ್ರಿ ಮುನ್ನೂರ, ಚೈತ್ರಾ ಇತರರು ಪೂಜೆಯಲ್ಲಿ ಭಾಗಿಯಾಗಿದ್ದರು.
ಸಂಪತ್ತು ವೃದ್ಧಿ ಹಾಗೂ ಕಷ್ಟ ನಿವಾರಣೆಗೆ ಮಹಾಲಕ್ಷ್ಮಿ ವ್ರತಾಚರಣೆ ಮಾಡಲಾಗುತ್ತದೆ. ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಸಿರಿ ಸಂಪತ್ತು ವೃದ್ಧಿಯಾಗುವ ನಂಬಿಕೆ ಇದೆವಾಣಿಶ್ರೀ ಮೊದಲಿಯಾರ್ ಕೊತ್ತಂಬರಿ ಬಡಾವಣೆ ನಿವಾಸಿ
ಆರೋಗ್ಯ ಹಾಗೂ ಸಂಪತ್ತು ನಾಡಿನ ಶಾಂತಿಗೆ ಸುಮಾರು ವರ್ಷದಗಳಿಂದ ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತಿದೆಸವಿತಾ ಸತೀಶ ಗುತ್ತೇದಾರ ಐವಾನ್–ಇ–ಶಾಹಿ ಬಡಾವಣೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.