ಗುರುವಾರ , ಮೇ 13, 2021
16 °C
ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ಪದಾಧಿಕಾರಿಗಳ ಪದಗ್ರಹಣ

‘ಸಮಾಜಕ್ಕೆ ವೀರಶೈವ–ಲಿಂಗಾಯತರ ಕೊಡುಗೆ ದೊಡ್ಡದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಮಾಜಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ವೀರಶೈವ ಲಿಂಗಾಯತರ ಕೊಡುಗೆ ದೊಡ್ಡದಾಗಿದೆ. ಈ ಸಮುದಾಯವೇ ಅನ್ನ ಅಕ್ಷರ ನೀಡಿ ಲಕ್ಷಾಂತರ ಜನರನ್ನು ವಿದ್ಯಾವಂತರನ್ನಾಗಿಸಿದೆ ಎಂದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಠಗಳಲ್ಲಿ ಅನ್ನ ದಾಸೋಹ ಹಾಗೂ ಶಿಕ್ಷಣ ದಾಸೋಹ ಎರಡೂ ನಡೆಯಿತು. ಇದರಿಂದಾಗಿ ಅಕ್ಷರದಿಂದ ವಂಚಿತರಾಗಬೇಕಿದ್ದವರು ಶಿಕ್ಷಿತರಾಗಿ ಉತ್ತಮ ಹುದ್ದೆಗಳನ್ನು ಪಡೆದರು. ವೀರಶೈವ ಮಹಾಸಭಾವನ್ನು ಹಾನಗಲ್ ಗುರುಕುಮಾರಸ್ವಾಮಿಗಳು ಕಟ್ಟುವ ಮೂಲಕ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ’ ಎಂದರು.

‘ರೇಣುಕಾಚಾರ್ಯರು ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದರು. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಾದಿ ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಾತುಗಳನ್ನಾಡಿದರು’ ಎಂದು ಹೇಳಿದರು.

‘ಮಹಾಸಭಾದ ಜಿಲ್ಲಾ ಘಟಕದಲ್ಲಿ ಸ್ಥಾನ ಸಿಗದವರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಯಲ್ಲಿ ಸೂಕ್ತ ಸ್ಥಾನ ನೀಡಲಾಗುವುದು. ಈಗ ವಿವಿಧ ಸ್ಥಾನದಲ್ಲಿರುವವರ ಮನವೊಲಿಸಿ ಬೇರೆಯವರಿಗೆ ಅವಕಾಶ ನೀಡುವಂತೆ ತಿಳಿಸಲಾಗುವುದು’ ಎಂದೂ ಖಂಡ್ರೆ ತಿಳಿಸಿದರು.

ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರ ಮಾತನಾಡಿ, ‘ಜಿಲ್ಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಹಂತದಲ್ಲಿ ಮತ್ತೊಂದು ಸಂಘಟನೆಯಿಂದ ಚಟುವಟಿಕೆ ನಡೆಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

‘ವೇದಿಕೆಯಲ್ಲಿ ಕುಳಿತ ನಾವು ಮನಸ್ಸು ಮಾಡಿದರೆ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಬಹುದು. ಆ ಇಚ್ಛಾಶಕ್ತಿಯನ್ನು ಎಲ್ಲರೂ ಪ್ರದರ್ಶಿಸೋಣ. ನಗರದಲ್ಲಿ ವಸತಿ ನಿಲಯ ನಿರ್ಮಿಸಲು ನನ್ನಿಂದ ₹ 10 ಲಕ್ಷ ನೆರವು ನೀಡುವೆ’ ಎಂದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಲಾ ₹ 5 ಲಕ್ಷ ನೆರವು ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿದ್ದ ಗಣ್ಯರು ತಾವೂ ಹಣ ನೀಡುವುದಾಗಿ ವಾಗ್ದಾನ ಮಾಡಿದರು.

ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಿಂದ ಬಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ 120 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಶಾಸಕ ಎಂ.ವೈ.ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ವಿಧಾನಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಚಂದ್ರಶೇಖರ ಪಾಟೀಲ ಹುಮನಾಬಾದ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ಶಶೀಲ್‌ ನಮೋಶಿ, ಅಮರನಾಥ ಪಾಟೀಲ, ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ ವೇದಿಕೆಯಲ್ಲಿದ್ದರು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಶರಣ ಬಿ. ಪಾಟೀಲ, ಕಾರ್ಯದರ್ಶಿ ಡಾ.ಎಸ್‌.ಎಸ್‌.ಪಾಟೀಲ, ಡಾ.ಸುಧಾ ಹಾಲಕಾಯಿ ಇದ್ದರು.

 

₹ 1000 ಕೋಟಿ ಇಡುಗಂಟಿನ ಬ್ಯಾಂಕ್‌ ತೆರೆಯೋಣ: ಅಪ್ಪ

ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಒಂದು ಬ್ಯಾಂಕ್‌ ಅಗತ್ಯವಿದ್ದು, ರಾಜ್ಯದಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳು ಮನಸ್ಸು ಮಾಡಿದರೆ ಇದೇನೂ ದೊಡ್ಡದಲ್ಲ ಎಂದು ಶರಣಬಸವೇಶ್ವರ ದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ ಅವರು ಅಭಿಪ‍್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೆಲ ವರ್ಷಗಳ ಹಿಂದೆಯೇ ₹ 100 ಕೋಟಿ ಬಂಡವಾಳ ಹೂಡಿ ಬ್ಯಾಂಕ್‌ ತೆರೆಯುವಂತೆ ಬೆಳಗಾವಿಯ ಕೆಎಲ್‌ಇ ಸೊಸೈಟಿ, ವಿಜಯಪುರದ ಬಿಎಲ್‌ಇಡಿ, ಮೈಸೂರಿನ ಸುತ್ತೂರು ಮಠ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ತಿಳಿಸಿದ್ದೆ. ಆದರೆ, ಆಗ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಅವರೆಲ್ಲ ಮನಸ್ಸು ಮಾಡಿದರೆ ₹ 1 ಸಾವಿರ ಕೋಟಿ ಬಂಡವಾಳ ಹೂಡುವುದು ಕಷ್ಟವಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು