ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ವಾಹನಗಳ ಮೊರೆತ: ಪಾದಚಾರಿಗಳಲ್ಲಿ ನಡುಕ

Published 19 ಡಿಸೆಂಬರ್ 2023, 5:13 IST
Last Updated 19 ಡಿಸೆಂಬರ್ 2023, 5:13 IST
ಅಕ್ಷರ ಗಾತ್ರ

ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ನಗರಕ್ಕೆ ಸಂಚಾರ ದಟ್ಟಣೆ ದುಃಸ್ವಪ್ನದಂತೆ ಕಾಡುತ್ತಿದೆ. ಜನಸಂಖ್ಯೆಗೆ ಪೈಪೋಟಿ ನೀಡುವಂತೆಯೂ ವಾಹನಗಳ ಸಂಖ್ಯೆ ಮಿತಿ ಮೀರಿ ಏರುತ್ತಿದೆ. ಜಿಲ್ಲೆಯಲ್ಲಿರುವ 5.69 ಲಕ್ಷ ವಾಹನಗಳ ಪೈಕಿ 2.90 ಲಕ್ಷ ವಾಹನಗಳು ನಗರ ಸೇರಿ ಕಲಬುರಗಿ ತಾಲ್ಲೂಕಿನಲ್ಲಿವೆ!

ನಗರದ ಪ್ರದೇಶಿಕ ಸಾರಿಗೆ (ಆರ್‌ಟಿಒ) ನೀಡಿದ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 5.69 ಲಕ್ಷ ವಾಹನಗಳಿವೆ. ಕಲಬುರಗಿ ತಾಲ್ಲೂಕು ಬಳಿಕ ಅತ್ಯಧಿಕ ವಾಹನಗಳ ಸಾಲಿನಲ್ಲಿ ಜೇವರ್ಗಿ (51,637), ಚಿತ್ತಾಪುರ (50,889), ಆಳಂದ (46,818) ಹಾಗೂ ಸೇಡಂ (46,046) ತಾಲ್ಲೂಕುಗಳಿವೆ. ಆದರೆ, ತಾಲ್ಲೂಕು ಕೇಂದ್ರಗಳಲ್ಲಿ ಕಲಬುರಗಿ ನಗರದಷ್ಟು ವಾಹನ ದಟ್ಟಣೆ ಸಮಸ್ಯೆ ಬಾಧಿಸುತ್ತಿಲ್ಲ.

ಕಲಬುರಗಿ ತಾಲ್ಲೂಕಿನಲ್ಲಿ 2,90,543 ವಾಹನಗಳಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 2.33 ಲಕ್ಷ ದ್ವಿಚಕ್ರ ವಾಹನ, 24,671 ಕಾರು, 9,438 ಸರಕು ವಾಹನ, 7,693 ಪ್ರಯಾಣಿಕ ಆಟೊ, 4,619 ಸರಕು ಆಟೊ, 2,094 ಮೊಟಾರ್ ಕ್ಯಾಬ್, 5,337 ಟ್ರ್ಯಾಕ್ಟರ್‌ಗಳಿವೆ. 0ಇವುಗಳಲ್ಲಿ ಬಹುತೇಕ ವಾಹನಗಳು ನಗರದ ರಸ್ತೆಗಳಲ್ಲಿ ನಿತ್ಯ ಸಂಚರಿಸುತ್ತವೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,100 ಕಿ.ಮೀ. ರಸ್ತೆ ಇದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಸಾಗುವ ಕೇಂದ್ರ ಬಸ್ ನಿಲ್ದಾಣ ಮಾರ್ಗ, ಸೂಪರ್ ಮಾರ್ಕೆಟ್‌ ಹಾಗೂ ಲಾಲಗೇರಿ ಕ್ರಾಸ್‌ ರಸ್ತೆಯು ವಾಹನ ಹಾಗೂ ಜನದಟ್ಟಣೆಯಿಂದ ಕೂಡಿರುತ್ತದೆ. ಈ ಮಾರ್ಗಗಳಲ್ಲಿ ಸಂಜೆಯ ವೇಳೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆಯ ಬದಿಯಲ್ಲಿ ಬೈಕ್‌ಗಳು, ಅವುಗಳ ಹಿಂದೆ ಕಾರು ನಿಲ್ಲಿಸಲಾಗುತ್ತದೆ. ಇದರ ಜತೆಗೆ ರಸ್ತೆಗಳ ಬದಿಯ ಫುಟ್‌ಪಾತ್‌ಗಳು ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿವೆ. ಪಾದಚಾರಿಗಳು ಓಡಾಡಲು ಜಾಗವೇ ಇಲ್ಲದಂತೆ ಆಗಿದೆ.

‘ಒಂದೆಡೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಾದರೆ, ಮತ್ತೊಂದೆಡೆ ಹದಗೆಟ್ಟ ರಸ್ತೆಗಳು. ಅಭಿವೃದ್ಧಿಯಾದ ರಸ್ತೆಯಲ್ಲಿ ವಾಹನ ಚಾಲಕರ ದಿವ್ಯ ನಿರ್ಲಕ್ಷ್ಯ, ಕೆಟ್ಟು ನಿಂತ ಸಿಗ್ನಲ್‌ಗಳು. ರಸ್ತೆಯಲ್ಲೇ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ಜೀವ ಭಯದಲ್ಲಿ ರಸ್ತೆಗೆ ಇಳಿಯುವಂತೆ ಆಗಿದೆ. ವಯಸ್ಕರು ರಸ್ತೆಯ ಬದಿಯಲ್ಲಿ ಓಡಾಡದಂತಹ ಸ್ಥಿತಿ ಇದೆ. ಬೈಕ್ ಡಿಕ್ಕಿಯಿಂದ ಬೀದರ್‌ನ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರ ತಾಯಿ ಮೃತಪಟ್ಟ ಘಟನೆಯ ಬಳಿಕ ರಸ್ತೆಗೆ ಇಳಿಯಲು ಇನ್ನಷ್ಟು ಭಯವಾಗುತ್ತಿದೆ’ ಎನ್ನುತ್ತಾರೆ ಪಾದಚಾರಿ ಅನಿಲ್.

ಪ್ರತಿ ವರ್ಷ 32,660 ವಾಹನಗಳು ಸೇರ್ಪಡೆ

ಗ್ರಾಹಕ ಖರೀದಿ ಸಾಮರ್ಥ್ಯ ವೃದ್ಧಿಯಾಗುತ್ತಿದ್ದಂತೆ ವಾಹನಗಳ ಕೊಳ್ಳುವ ಶಕ್ತಿಯೂ ಹೆಚ್ಚಾಗಿದ್ದು ಪ್ರತಿ ವರ್ಷ ಸರಾಸರಿ 32660 ವಾಹಗಳು ರಸ್ತೆಗೆ ಇಳಿಯುತ್ತಿವೆ. 2008ರಿಂದ 2018ರ ನಡುವೆ ಜಿಲ್ಲೆಯಲ್ಲಿ 1.95 ಲಕ್ಷ ವಾಹನಗಳು ಇದ್ದವು. ಈಗ ಅವು 5.69 ಲಕ್ಷಕ್ಕೆ ತಲುಪಿವೆ. 2018ರಲ್ಲಿ 37792 2019ರಲ್ಲಿ 35368 2020ರಲ್ಲಿ 29269 2021ರಲ್ಲಿ 27478 2022ರಲ್ಲಿ 33200 ಹಾಗೂ 2023ರಲ್ಲಿ ಡಿಸೆಂಬರ್ 18ರ ವರೆಗೆ 32857 ವಾಹನಗಳು ಖರೀದಿಯಾಗಿವೆ. ಕಳೆದ ಆರು ವರ್ಷಗಳಲ್ಲಿ 195959 ವಾಹನಗಳು ರಸ್ತೆಗೆ ಬಂದಿದ್ದು ವಾರ್ಷಿಕ ಖರೀದಿ 32660ರಷ್ಟಿದೆ ಎಂಬುದು ಆರ್‌ಟಿಒ ಅಂಕಿಅಂಶಗಳಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT