ಸೋಮವಾರ, ಜನವರಿ 27, 2020
20 °C
ಚಿಂಚೋಳಿ: ಚಾಲುಕ್ಯ ಶೈಲಿಯ ದೇವಾಲಯ; ಪೇಶ್ವೆಗಳೊಂದಿಗೆ ನಂಟು...

ಚಾರಿತ್ರಿಕ ಮಹತ್ವದ ವೆಂಕಟೇಶ್ವರ ದೇವಸ್ಥಾನ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಪಟ್ಟಣದ ದೇವಡಿ ಬಳಿಯಿರುವ ವೆಂಕಟೇಶ್ವರ ದೇವಾಲಯ ಚಾರಿತ್ರಿಕ ಮಹತ್ವದ ತಾಣವಾಗಿದೆ. ಈಗಿನ ಮುಲ್ಲಾಮಾರಿ (ಅಂದಿನ ಭೋಗಾವತಿ) ನದಿ ದಂಡೆಯ ಮೇಲಿರುವ ವೆಂಕಟೇಶ್ವರ ದೇವಾಲಯ ಚಾಲುಕ್ಯರ ಶೈಲಿಯ ಶಿಲ್ಪಕಲೆಯನ್ನು ಹೋಲುತ್ತದೆ.

ಗರ್ಭಗುಡಿ, ಅಂತರಾಳ ಹಾಗೂ ಸುಸಜ್ಜಿತ ನವರಂಗ ಹೊಂದಿರುವ ದೇವಾಲಯದ ಗೋಪುರದ ಹೊರ ಭಾಗವು ನವೀಕರಿಸಿದಂತೆ ಗೋಚರಿಸುತ್ತದೆ. ಬೃಹತ್‌ ಕಪ್ಪು ಕಲ್ಲುಗಳನ್ನು ಕೆತ್ತಿ ಆಕರ್ಷಕ ಕಂಬ ನಿರ್ಮಿಸಲಾಗಿದೆ. ಅಂತರಾಳ ಹಾಗೂ ನವರಂಗದಲ್ಲಿ ಈ ಕಂಬಗಳಿದ್ದು ಗರ್ಭಗುಡಿ ಹಾಗೂ ಅಂತರಾಳದ ಪ್ರವೇಶದ ದ್ವಾರದಲ್ಲಿ ಕೆತ್ತನೆಯಿದ್ದು ಈಗ ಅದಕ್ಕೆ ತಾಮ್ರ ಲೇಪಿಸಲಾಗಿದೆ.

ಕಲ್ಲುಬಂಡೆಗಳಿಂದಲೇ ಛತ್ತು ನಿರ್ಮಿಸಿ ಅದರ ಮೇಲೆ ಗಚ್ಚು ಹಾಕಿರುವುದು ಕಾಣ ಸಿಗುತ್ತದೆ. ಈ ದೇವಾಲಯ ಎದುರು ಕಲ್ಲುಗಳಿಂದ ನಿರ್ಮಿಸಿರುವ ಎರಡು ಸಣ್ಣ, ಮತ್ತು ಒಂದು ಎತ್ತರದ ಗರುಡಗಂಬಗಳು ವೈವಿಧ್ಯಮಯವಾಗಿದೆ. ಇತ್ತೀಚೆಗೆ ಸ್ಥಾಪಿಸಿದ ಪಂಚಲೋಹ ಲೇಪಿತ ಇನ್ನೊಂದು ಇಲ್ಲಿನ ಪ್ರಾಣದೇವರ ಮೂರ್ತಿಯ ಮೇಲ್ಬಾಗದಲ್ಲಿ ಕಾಣಿಸುತ್ತದೆ.

ಈ ದೇವಾಲಯಕ್ಕೂ ಮಹಾರಾಷ್ಟ್ರದ ಪೇಶ್ವೆಗಳಿಗೂ ಅವಿನಾಭಾವವಾದ ಸಂಬಂಧವಿದೆ. ಹೈದರಾಬಾದಿನ ನಿಜಾಮದೊಂದಿಗೆ ನಡೆದ ಯುದ್ಧದಲ್ಲಿ ಪೇಶ್ವೆಗಳು ಜಯ ಶಾಲಿಯಾದಾಗ ಅವರಿಗೆ ಸುಮಾರು 400 ತಾಲ್ಲೂಕುಗಳ ಜಹಾಗೀರು ನೀಡಲಾಗುತ್ತದೆ. ಹೀಗೆ ನೀಡಿದ ಜಹಾಗೀರುಗಳಲ್ಲಿ ಚಿಂಚೋಳಿ ತಾಲ್ಲೂಕು ಪೇಶ್ವೆಗಳ ಆಡಳಿತಕ್ಕೆ ಒಳಪ ಡುತ್ತದೆ ಎನ್ನುತ್ತಾರೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಶೋಕ ಪಾಟೀಲ.

ಪೇಶ್ವೆಗಳು ಇಲ್ಲಿಗೆ ಬಂದ ಮೇಲೆ ಅರಮನೆ, ದೇವಡಿ ನಿರ್ಮಿಸುತ್ತಾರೆ. ಇದೇ ಸಮಯದಲ್ಲಿ ಪೇಶ್ವೆ ಮೇಲಗಿರಿ ಪಂತ್‌ ಎಂಬುವವರಿಗೆ ಕನಸೊಂದು ಬೀಳುತ್ತದೆ. ಅದರಲ್ಲಿ ‘ನಾನು ತಿರುಮಲಾಪುರದ ಬಾವಿಯಲ್ಲಿದ್ದೇನೆ. ನನ್ನನ್ನು ಇಲ್ಲಿಂದ ಕರೆದೊಯ್ಯಿರಿ‘ ಎಂಬ ದೇವವಾಣಿ ಕೇಳಿಸುತ್ತದೆ. ಅದರಂತೆ ಪೇಶ್ವೆ ಮೇಲಗಿರಿ ಪಂತ್‌ ಈ ಬಗ್ಗೆ ತಿರುಮಲಾಪುರಕ್ಕೆ ಹೋಗಿ ವಿಚಾರಿಸಿದಾಗ ಅಲ್ಲಿ ಬಾವಿಯೊಂದರಲ್ಲಿ ಬಾಲಾಜಿ ವೆಂಕಟೇಶ್ವರ ಮೂರ್ತಿ ಇರುವುದು ತಿಳಿಯುತ್ತದೆ. ಆಗ ಧಾರ್ಮಿಕ ವಿಧಿ ವಿಧಾನಗಳಂತೆ ಅಲ್ಲಿಂದ ಮೂರ್ತಿ ತಂದು ಭೋಗಾವತಿ ತೀರದ ಜೈನ ಬಸದಿಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ತಿರುಮಲೇಶ್ವರನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂಬುದು ಅಶೋಕ ಪಾಟೀಲರ ವಿವರಣೆ.

ಅಂದಿನಿಂದ 1969ವರೆಗೂ ದೇವಾಲಯದ ಆಗುಹೋಗುಗಳು ಮತ್ತು ಉತ್ಸವಗಳನ್ನು ಸರ್ಕಾರವೇ ನೋಡಿಕೊಳ್ಳುತ್ತಿತ್ತು. ಮಧ್ಯದಲ್ಲಿ ಸರ್ಕಾರ ಉತ್ಸವ ಕೈಬಿಟ್ಟಾಗ ಬಾಲಾಜಿಯ ಭಕ್ತರಾಗಿದ್ದ ಹಣಮಂತರಾವ್‌ ಜಹಾಗೀರದಾರ ಅವರು ಸ್ಥಳೀಯರೊಂದಿಗೆ ಸೇರಿ ಜಾತ್ರೆ ಆರಂಭಿಸುತ್ತಾರೆ.

ನಂತರದ ದಿನಗಳಲ್ಲಿ ಇದಕ್ಕೆ ಹೈದರಾಬಾದ್‌ ಉಸ್ಮಾನಿಯಾ ಆರೋಗ್ಯ ವಿವಿ ಕುಲಪತಿ ಡಾ. ಶಾಮಸುಂದರ್‌ ಜಹಾಗೀರದಾರ ಕೈಜೋಡಿಸುತ್ತಾರೆ. ಪ್ರತಿವರ್ಷ ಮಾಗಶುದ್ಧ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು