ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ವಿಧಾನ ಪರಿಷತ್‌ ಎರಡು ಸ್ಥಾನ ಖೋತಾ; ಮತ್ತೆ ಸಿಕ್ಕೀತೇ ಅವಕಾಶ?

ಕಾಂಗ್ರೆಸ್‌ ಪಕ್ಷದಲ್ಲಿಯೂ ಲಾಬಿ ಜೋರು; ‘ಪೂರ್ಣಾವಧಿ’ ಜಪ
Last Updated 12 ಜೂನ್ 2020, 5:53 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನ ಪರಿಷತ್‌ ನಾಮಕರಣ ಸದಸ್ಯರಾದ ಕಾಂಗ್ರೆಸ್‌ನ ಇಕ್ಬಾಲ್‌ ಅಹಮ್ಮದ್‌ ಸರಡಗಿ ಹಾಗೂ ತಿಪ್ಪಣ್ಣಪ್ಪ ಕಮಕನೂರ ಅವರ ಅವಧಿ ಜೂ.23ರಂದು ಕೊನೆಗೊಳ್ಳಲಿದೆ. ಕಾಂಗ್ರೆಸ್‌ ಪಕ್ಷ ಜಿಲ್ಲೆಗೆ ಮತ್ತೆ ಪ್ರಾತಿನಿಧ್ಯ ನೀಡಲಿದೆಯೇ ಎಂಬ ಚರ್ಚೆ ಶುರುವಾಗಿದೆ.

ಇಕ್ಬಾಲ್‌ ಅಹಮ್ಮದ್‌ ಸರಡಗಿ ಮತ್ತು ತಿಪ್ಪಣ್ಣಪ್ಪ ಕಮಕನೂರ ಇಬ್ಬರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು.ಸರಡಗಿಎರಡು ಬಾರಿ ಸಂಸದರಾಗಿದ್ದರು. ವಿಧಾನ ಪರಿಷತ್‌ ಸದಸ್ಯರಾಗಿ ಅವಧಿ ಪೂರ್ಣಗೊಳಿಸಿದ್ದಾರೆ. ಮಂಡಿನೋವಿನಿಂದ ಬಳಲುತ್ತಿರುವ ಅವರು ಪುನರ್‌ ಆಯ್ಕೆಗೆ ಲಾಬಿ ನಡೆಸುತ್ತಿಲ್ಲ. ಇದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಇನ್ನು ಕಮಕನೂರ ‘ಪೂರ್ಣಾವಧಿ ಯೋಗ‌’ದ ನಿರೀಕ್ಷೆಯಲ್ಲಿದ್ದಾರೆ.

ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ಎರಡು ಸ್ಥಾನ ಗೆಲ್ಲುವ ಅವಕಾಶ ಇದೆ. ಮುಸ್ಲಿಂ ಹಾಗೂ ಹಿಂದುಳಿದ ಸಮುದಾಯದವರಿಗೆ ತಲಾ ಒಂದು ಸ್ಥಾನ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದ್ದು, ಕಲ್ಯಾಣ ಕರ್ನಾಟಕಕ್ಕೂ ಒಂದು ಸ್ಥಾನ ನೀಡಬೇಕು ಎಂದು ಈ ಭಾಗದ ಆಕಾಂಕ್ಷಿಗಳು ಕೇಳುತ್ತಿದ್ದಾರೆ.

‘ಅತ್ಯಂತ ಹಿಂದುಳಿದ ಕೋಲಿ, ಕಬ್ಬಲಿಗ ಸಮಾಜದ ವ್ಯಕ್ತಿಗೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಕಾಂಗ್ರೆಸ್‌ ವಿಧಾನ ಪರಿಷತ್‌ ಸ್ಥಾನ ನೀಡಿತ್ತು. ನನಗೆ ಸಿಕ್ಕ ಅವಧಿ ಕೇವಲ ಒಂಬತ್ತು ತಿಂಗಳು. ಈ ಭಾಗದಲ್ಲಿ ನಮ್ಮ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಭಾಗದ ಜಿಲ್ಲೆಗಳ ಬಹುತೇಕ ಕಾಂಗ್ರೆಸ್‌ ಶಾಸಕರು ನನ್ನ ಹೆಸರು ಶಿಫಾರಸು ಮಾಡಿದ್ದಾರೆ’ ಎನ್ನುತ್ತಾರೆ ತಿಪ್ಪಣ್ಣಪ್ಪ ಕಮಕನೂರ.

‘ಕಡಿಮೆ ಅವಧಿ ಸಿಕ್ಕವರಿಗೆ ಪೂರ್ಣಾವಧಿಗೆ ಮುಂದುವರಿಸಿರುವ ಸಂಪ್ರದಾಯ ಕಾಂಗ್ರೆಸ್‌ ಪಕ್ಷದಲ್ಲಿದೆ. ನನಗೆ ಇನ್ನೊಂದು ಅವಕಾಶ ಕೊಡದಿದ್ದರೆ ಕೇವಲ ಮೂಗಿಗೆ ತುಪ್ಪ ಸವರಿದರು ಎಂಬ ತಪ್ಪು ಕಲ್ಪನೆ ಹೋಗುತ್ತದೆ. ಹೀಗಾಗಿ ನನಗೆ ಇನ್ನೊಂದು ಬಾರಿ ಅವಕಾಶ ನೀಡುವಂತೆ ಕೋರಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ಕಲಬುರ್ಗಿ ಜಿಲ್ಲೆಯ ಇಬ್ಬರು ಪರಿಷತ್‌ ಸದಸ್ಯರ ಅವಧಿ ಮುಗಿಯಲಿದೆ. ಜಿಲ್ಲೆಯ ಒಬ್ಬರಿಗಾದರೂ ಅವಕಾಶ ದೊರೆಯುತ್ತದೆಯೇ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಚುನಾವಣೆ ನಂತರ ಬಂತು ಸ್ಥಾನ

ಕೋಲಿ ಸಮಾಜದ ಮುಖಂಡ ಬಾಬುರಾವ್‌ ಚಿಂಚನಸೂರ ಗುರುಮಠಕಲ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಬಿಜೆಪಿ ಸೇರಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತೊಡೆ ತಟ್ಟಿದ್ದರು. ಇಷ್ಟೊತ್ತಿಗಾಗಲೇ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದಿದ್ದ ವಿ.ಎಸ್‌. ಉಗ್ರಪ್ಪ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅವರಿಂದ ತೆರವಾಗಿದ್ದ ಪರಿಷತ್‌ ಸ್ಥಾನಕ್ಕೆ, ತಿಪ್ಪಣ್ಣಪ್ಪ ಕಮಕನೂರ ಅವರನ್ನು ನೇಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಮೇರೆಗೆ ಆಗಿನ ಮುಖ್ಯಮಂತ್ರಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.ಕೋಲಿ ಸಮಾಜಕ್ಕೆ ‘ಪ್ರಾತಿನಿಧ್ಯ’ ನೀಡುವ ಕಾರಣಕ್ಕಾಗಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಪರಿಗಣಿಸಲಾಗಿತ್ತು. ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ನಾಮಕರಣ ಕಡತಕ್ಕೆ ರಾಜ್ಯಪಾಲರು ಸಹಿ ಹಾಕಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸೋತರೂ, ಕಮಕನೂರ ಅವರನ್ನು ಪರಿಷತ್‌ ಸದಸ್ಯರನ್ನಾಗಿ ನಾಮಕರಣ ಮಾಡಲಾಯಿತು.

ಸರಡಗಿ ಸೋಲಿಸಿದ್ದರು!

ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ 2012ರ ಜೂನ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇಕ್ಬಾಲ್‌ ಅಹಮ್ಮದ್‌ ಸರಡಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಶಾಸಕರ ಅಡ್ಡ ಮತದಾನದಿಂದಾಗಿ ಸರಡಗಿ ಸೋತಿದ್ದರು. ಬಿಜೆಪಿಯಲ್ಲೂ ಅಡ್ಡ ಮತದಾನ ನಡೆದಿತ್ತು. ಪಕ್ಷೇತರ ಅಭ್ಯರ್ಥಿ ಬಿ.ಎಸ್‌.ಸುರೇಶ್‌ ಎಲ್ಲರಿಗಿಂತ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. 2014ರ ಜೂನ್‌ ತಿಂಗಳಲ್ಲಿ ಸರಡಗಿ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡುವ ಮೂಲಕ ಕಾಂಗ್ರೆಸ್‌ ‘ಅನ್ಯಾಯ’ ಸರಿಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT