ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಾಳ ಜಲಾಶಯದಿಂದ ನೀರು ಹೊರಕ್ಕೆ: ಸೇತುವೆಗಳು ಮುಳುಗಡೆ, ಪರೀಕ್ಷೆಗೆ ಅಡ್ಡಿ

Last Updated 19 ಜುಲೈ 2021, 3:07 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ‌ ಜಿಲ್ಲೆ): ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಮತ್ತೆ 7 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.‌ ಇದರಿಂದ ಕೆಲವು ಸೇತುವೆಗಳು ಮುಳುಗಡೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಭಾನುವಾರ ರಾತ್ರಿ ಒಳ ಹರಿವು ಹೆಚ್ಚಾಗಿದ್ದರಿಂದ ಆರಂಭದಲ್ಲಿ ಎರಡು ಗೇಟು ತಲಾ ಒಂದು ಅಡಿ ಎತ್ತರ ಎತ್ತಿ ನೀರು ಬಿಡಲಾಯಿತು. ಆದರೂ ನೀರಿನ‌ಮಟ್ಟ ಹೆಚ್ಚುತ್ತ ಸಾಗಿದ್ದರಿಂದ ಮತ್ತೊಂದು ಗೇಟು ಎತ್ತಲಾಗಿದೆ. ಮೂರು ಗೇಟುಗಳನ್ನು ತಲಾ ಎರಡು ಅಡಿ ಎತ್ತರ ಎತ್ತಿದ್ದು ನಾಲ್ಕನೇ ಗೇಟ್ ಒಂದು ಅಡಿ ಎತ್ತಿ ನೀರು ಹೊರ ಬಿಡಲಾಯಿತು.

ಒಳಹರಿವು 2500 ಕ್ಯುಸೆಕ್ ಇದೆ. ನೀರು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಬಿಟ್ಟಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಎದುರಾಗಿದೆ.

ಪರೀಕ್ಷಾ ಕೇಂದ್ರದ ಸಂಪರ್ಕ ತಾತ್ಕಾಲಿಕ ಕಡಿತ:

ಚಿಮ್ಮನಚೋಡ ಸೇತುವೆ ಮುಳುಗಡೆಯಾಗಿದ್ದು ಗ್ರಾಮದಿಂದ ಸ್ಥಳೀಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸಂಪರ್ಕ ಕಳೆದುಕೊಂಡಿತು.

ನಸುಕಿನಲ್ಲಿಯೇ ಇದನ್ನು ಗಮನಿಸಿದ ಬಿಇಒ ರಾಚಪ್ಪ ಭದ್ರಶೆಟ್ಟಿ ಅವರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ನೀರು ಹೊರ ಬಿಡುವ ಪ್ರಮಾಣ ತಗ್ಗಿಸಲಾಗಿದೆ ಎಂದು ಯೋಜನೆಯ ಎಇಇ ಹಣಮಂತ ಪೂಜಾರಿ ತಿಳಿಸಿದರು.

ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಚಿಮ್ಮನಚೋಡ, ಕನಕಪುರ, ಗಾರಂಪಳ್ಳಿ, ಚಿಂಚೋಳಿ ಹಾಗೂ ನದಿ ಪಾತ್ರದ ಗ್ರಾಮಗಳಲ್ಲಿ‌ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಜಲಾಶಯಕ್ಕೆ ಒಳ ಹೆಚ್ಚಾದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪ್ರವಾಹ ತೊಡಕು ಉಂಟು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಭರ್ತಿಯಾಗಿದ್ದರಿಂದ ಹೆಚ್ಚಿನ ನೀರು ನದಿ‌ಮೂಲಕ ನಾಗರಾಳ ಜಲಾಶಯಕ್ಕೆ ಹರಿದು ಬರುತ್ತಿದೆ. ಈಗ ಜಲಾಶಯದ ನೀರಿನ ಮಟ್ಟ 489.90 ಮೀಟರ್ ಇದೆ. ಜಲಾಶಯದ ಗರಿಷ್ಠ ಮಟ್ಟ 491 ಮೀಟರ್.

ವಾಡಿ ಸಮೀಪದ ಬಳವಡಗಿ ಗ್ರಾಮದೊಳಗೆ ಭಾನುವಾರ ರಾತ್ರಿ ಹಳ್ಳದ ನೀರು ನುಗ್ಗಿದೆ
ವಾಡಿ ಸಮೀಪದ ಬಳವಡಗಿ ಗ್ರಾಮದೊಳಗೆ ಭಾನುವಾರ ರಾತ್ರಿ ಹಳ್ಳದ ನೀರು ನುಗ್ಗಿದೆ

ವಾಡಿ ವರದಿ: ಭಾನುವಾರ ರಾತ್ರಿ ಸುರಿದ ಮಳೆಗೆ ಪಟ್ಟಣ ಸಮೀಪದ ಬಳವಡಗಿ ಗ್ರಾಮ ಜಲಾವೃತವಾಗಿದೆ.

ಗ್ರಾಮದ ಭೀಮನಗರ ರೇಣುಕಾ ಯಲ್ಲಮ್ಮ ಪ್ರದೇಶದ ಹಲವು ಮನೆಗಳಿಗೆ ಹಳ್ಳದ ನೀರು ನುಗ್ಗಿದೆ. ಸೋಮವಾರ ಬೆಳಿಗ್ಗೆ ಕೂಡ ಮಳೆ ಮುಂದುವರಿದಿದ್ದರಿಂದ ಹಳ್ಳದ ನೀರು ಹೆಚ್ಚಾಗುತ್ತಲೇ ಇದ್ದು, ಗ್ರಾಮಸ್ಥರಲ್ಲಿ ಪ್ರವಾಹ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT