42 ವರ್ಷಗಳಲ್ಲಿ ಖರ್ಗೆ ಕೊಡುಗೆ ಏನು: ಯಡಿಯೂರಪ್ಪ ಪ್ರಶ್ನೆ

ಮಂಗಳವಾರ, ಏಪ್ರಿಲ್ 23, 2019
27 °C

42 ವರ್ಷಗಳಲ್ಲಿ ಖರ್ಗೆ ಕೊಡುಗೆ ಏನು: ಯಡಿಯೂರಪ್ಪ ಪ್ರಶ್ನೆ

Published:
Updated:

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಸಾಧನೆ ಶೂನ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಿದ್ದಾರೆ. ಹಾಗಾದರೆ, 42 ವರ್ಷಗಳಲ್ಲಿ ಖರ್ಗೆ ಅವರ ಸಾಧನೆ, ಕೊಡುಗೆ ಏನು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1970ರಲ್ಲಿ ಕಲಬುರ್ಗಿಯಲ್ಲಿ ಜೀವನಮಟ್ಟ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಮಾನವ ಅಭಿವೃದ್ಧಿ ಸೂಚ್ಯಂಕ ಕುಸಿದಿದೆ. ಎಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಇಂದಿಗೂ ಕೊನೆಯ ಸ್ಥಾನದಲ್ಲಿದೆ. ಸಾಮಾಜಿಕ, ಆರ್ಥಿಕವಾಗಿ ಸುಧಾರಣೆ ಆಗಿಲ್ಲ. ನಗರದ ಎಷ್ಟೋ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಸಮರ್ಪಕ ಕುಡಿಯುವ ನೀರು ಪೂರೈಕೆ ಇಂದಿಗೂ ಸಾಧ್ಯವಾಗಿಲ್ಲ. ಹಾಗಾದರೆ ಅಭಿವೃದ್ಧಿ ಆಗಿದ್ದಾದರೂ ಏನು’ ಎಂದು ಕೇಳಿದರು.

‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, ವಿಮಾನ ನಿಲ್ದಾಣ ಯಾರಿಂದ ಆಗಿದೆ ಎಂಬುದನ್ನು ಖರ್ಗೆ ಅವರು ಸರಿಯಾಗಿ ಹೇಳಬೇಕು. ಅದು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು’ ಎಂದರು.

‘ಬಿಜೆಪಿಗೆ 2014ರ ಅವಧಿಗಿಂತ 10 ಪಟ್ಟು ಹೆಚ್ಚು ಉತ್ತಮ ವಾತಾವರಣವಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಸಕ ರಾಜೂಗೌಡ ನಾಯಕ, ಮುಖಂಡರಾದ ಡಾ.ಎ.ಬಿ.ಮಾಲಕರೆಡ್ಡಿ, ಬಸವರಾಜ ಇಂಗಿನ, ಸುನಿಲ್ ವಲ್ಲ್ಯಾಪುರೆ, ಶಶೀಲ್ ಜಿ.ನಮೋಶಿ ಇದ್ದರು.

‘ಉಪ ಚುನಾವಣೆ ಚರ್ಚಿಸಿ ತೀರ್ಮಾನ’

‘ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಭ್ಯರ್ಥಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಯಡಿಯೂರಪ್ಪ ಹೇಳಿದರು.

ಉಪ ಚುನಾವಣೆ ಬಗ್ಗೆ ಮಾತನಾಡಲ್ಲ: ಜಾಧವ

‘ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹೀಗಾಗಿ ಏನನ್ನೂ ಮಾತನಾಡುವುದಿಲ್ಲ. ಏಪ್ರಿಲ್ 23ರ ಸಂಜೆ ನಾನೇ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಹೇಳುತ್ತೇನೆ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಹೇಳಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಮಟ್ಟದ ನಾಯಕರು. ಅವರು ದೇಶದಾದ್ಯಂತ ಪ್ರಚಾರಕ್ಕೆ ಹೋಗಬೇಕು. ಆದರೆ, ಕಲಬುರ್ಗಿ ಬಿಟ್ಟು ಕದಲುತ್ತಿಲ್ಲ. ಅವರಿಗೆ ಭಯ ಶುರುವಾಗಿದೆ. ಹೀಗಾಗಿ ದೇವಸ್ಥಾನ, ದರ್ಗಾಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 11

  Happy
 • 4

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !