ಶನಿವಾರ, ಏಪ್ರಿಲ್ 1, 2023
29 °C
‘ಮೌಢ್ಯ ಮತ್ತು ಮಹಿಳೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ: ಪ್ರೊ. ಶಿವಗಂಗಾ ರುಮ್ಮಾ

ಶಿಕ್ಷಣದಲ್ಲಿ 5 ಸಾವಿರ ವರ್ಷ ಹಿಂದಿರುವ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಪುರುಷರು ಐದು ಸಾವಿರ ವರ್ಷಗಳ ಹಿಂದೆಯೇ ಶಿಕ್ಷಣವನ್ನು ಪಡೆದಿದ್ದಾರೆ. ಹಾಗಾಗಿ, ಶಿಕ್ಷಣದಲ್ಲಿ ಮಹಿಳೆಯರು 5 ಸಾವಿರ ವರ್ಷಗಳಷ್ಟು ಹಿಂದೆ ಇದ್ದಾರೆ. ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಟ್ಟರೆ ಮೌಢ್ಯಾಚರಣೆಯನ್ನು ಕೊನೆಗಾಣಿಸಬಹುದು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ ಹೇಳಿದರು.

ನಗರದ ಬಸವ ಮಂಟಪದಲ್ಲಿ ಸೋಮವಾರ ಜಾಗತಿಕ ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮತ್ತು ಬಸವಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ‘ಮೌಢ್ಯ ಮತ್ತು ಮಹಿಳೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಮಹಿಳೆಯರಿಗಿಂತ ಪುರುಷರು ಹೆಚ್ಚು ಶಿಕ್ಷಣವಂತರಾದ ಕಾರಣ ಕಡಿಮೆ ಮೌಢ್ಯ ಆಚರಣೆ ಮಾಡುತ್ತಾರೆ. ಇದು ವೈಜ್ಞಾನಿಕ ಕಾರಣವೂ ಹೌದು. ಮೌಢ್ಯಾಚರಣೆಯ ಶೇಕಡಾವಾರು ಮಾಡಿದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿಯಾಗಿದ್ದಾರೆ. ಶಿಕ್ಷಣ ಮತ್ತು ಜಾಗೃತಿ ಕೊರತೆಯೇ ಇದಕ್ಕೆ ಕಾರಣ’ ಎಂದು ಒತ್ತಿ ಹೇಳಿದರು.

‘ಮೌಢ್ಯವನ್ನು ಹುಟ್ಟಿನಿಂದ ಸಾಯುವವರೆಗೆ ಆಚರಣೆ ಮಾಡುತ್ತಿದ್ದೇವೆ. ಶಿಕ್ಷಣವಂತರಾದರೂ ಕೆಲವರು ಸಂಸ್ಕಾರದ ನೆಪದಲ್ಲಿ ಮೌಢ್ಯಕ್ಕೆ ಒಳಗಾಗಿರುತ್ತಾರೆ. ಬೆಳೆಯುವ ಪರಿಸರ ಕೂಡ ಇದಕ್ಕೆ ಕಾರಣವಾಗುತ್ತದೆ. ಪದವಿ ಪಡೆಯುವುದೇ ಶಿಕ್ಷಣವಲ್ಲ. ವೈಚಾರಿಕ ಶಿಕ್ಷಣದ ಮೇಲೆ ನಮ್ಮ ಆಲೋಚನೆ ನಿಂತಿರುತ್ತದೆ’ ಎಂದರು.

‘ಬಹಳಷ್ಟು ಸಲ ಯಾವುದು ಮೌಢ್ಯ? ಯಾವುದು ಅಲ್ಲ ಎಂಬುದು ಕಂಡುಕೊಳ್ಳುವುದು ಕಷ್ಟ. ಕೂದಲೆಳೆ ಅಂತರ ಅಷ್ಟೇ ಇರುತ್ತದೆ. ಅದನ್ನು ವೈಚಾರಿಕ ನೆಲೆಯಲ್ಲಿ ನೋಡಿದಾಗ ಉತ್ತರ ಪಡೆಯಬ‌ಹುದು’ ಎಂದು ಉಡದಾರ ಕಟ್ಟಿಕೊಳ್ಳುವುದು, ಡಾಬು ಬಳಕೆ, ಮದುವೆಯಲ್ಲಿ ಅರಿಶಿಣ ಹೆಚ್ಚುವುದು ಸೇರಿ ವಿವಿಧ ಉದಾಹರಣೆ ಸಹಿತ ಡಾ.ರುಮ್ಮಾ ವಿವರಿಸಿದರು.

‘ಕ್ರೀಮ್‌ ಹಚ್ಚಿಕೊಂಡರೆ ಬೆಳ್ಳಗಾಗುತ್ತಾರೆ ಅನ್ನುವುದು ಕೂಡ ಒಂದು ಮೌಢ್ಯವಾಗಿದೆ. ಕಪ್ಪು ಇದ್ದವರು ಬೆಳ್ಳಗಾಗಲು ಜಗತ್ತಿನಲ್ಲಿ ಯಾವುದೇ ಔಷಧ ಇಲ್ಲವೆಂದು ವಿಜ್ಞಾನ ಹೇಳುತ್ತದೆ. ಆದರೆ, ಕಾಸ್ಮೆಟಿಕ್‌ ಮಾರ್ಕೆಟಿಂಗ್‌ ತ್ವಚೆಯ ಸುಂದರ ಹೊಳಪಿಗಾಗಿ ಕ್ರೀಮ್‌ ಹಚ್ಚಿಕೊಳ್ಳಿ ಎನ್ನುತ್ತದೆ. ಆಧುನಿಕ ಯುಗದಲ್ಲಿ ಮೌಢ್ಯವನ್ನು ಬಿತ್ತುವುದರಲ್ಲಿ ಮಾಧ್ಯಮಗಳು ಅಥವಾ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪ‍ರಿಗಣಿಸಬೇಕಿದೆ’ ಎಂದರು.

ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ ಉದ್ಘಾಟಿಸಿ ಮಾತನಾಡಿ, ‘ಬೆಕ್ಕು ಅಡ್ಡ ಬಂದರೆ ಕೆಲಸ ಆಗುವುದಿಲ್ಲ. ಆ ರಸ್ತೆಯಲ್ಲಿ ಹೋದರೆ ಕೆಟ್ಟದಾಗುತ್ತದೆ. ಇಂಥ ವಾರವೇ ಕೆಲಸ ಆರಂಭಿಸಬೇಕು ಎಂಬುದು ಸೇರಿದಂತೆ ಅನೇಕ ಮೌಢ್ಯ ಆಚರಣೆಗಳು ಅನಾದಿ ಕಾಲದಿಂದಲೂ ಬೆಳೆದು ಬಂದಿವೆ. ಮೌಢ್ಯಕ್ಕೆ ಮಹಿಳೆಯರಷ್ಟೇ ಅಲ್ಲ; ಪುರುಷರೂ ಬಲಿಯಾಗಿದ್ದಾರೆ. ವೈಚಾರಿಕತೆಯಿಂದ ಇವುಗಳಿಗೆ ಅಂತ್ಯ ಹಾಡಬಹುದು’ ಎಂದರು.

‘ಆಧುನಿಕ ಜಗತ್ತಿನಲ್ಲಿಯೂ ನಮಗೆ ಅರಿವಿಲ್ಲದೆಯೇ ಮೌಢ್ಯಕ್ಕೆ ಒಳಗಾಗುತ್ತಿರುತ್ತೇವೆ. ಕಂದಾಚಾರಗಳನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ವೈಜ್ಞಾನಿಕ ಮನೋಭಾವನೆಯಿಂದ ಇಂಥ ಮೌಢ್ಯ ಆಚರಣೆಗಳನ್ನು ಹೋಗಲಾಡಿಸಬಹುದು’ ಎಂದು ಸಲಹೆ ನೀಡಿದರು.

ಡಿವೈಎಸ್‌ಪಿ ಆಗಿ ಆಯ್ಕೆಯಾದ ವಿಜಯಕ್ರಾಂತಿ ಬಿ.ವಿಭೂತಿ ನೆಲೋಗಿ ಅವರನ್ನು ಸನ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌ ಅಧ್ಯಕ್ಷತೆ ವಹಿಸಿದ್ದರು.

ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯ ನಿರ್ದೇಶಕ ಶರಣಸವ ಕಲ್ಲಾ, ಪರಿಷತ್ತು ಜಿಲ್ಲಾ ಅಧ್ಯಕ್ಷ ರವೀಂದ್ರ ಶಾಬಾದಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಮಾಲತಿ ರೇಷ್ಮಿ, ಮಹಾಂತೇಶ ಕಲಬುರಗಿ, ಸತೀಶ ಸಜ್ಜನ್‌, ಕಮಲಾಬಾಯಿ ಶಾಬಾದಿ ಇದ್ದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಜಿ.ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು. ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶಿವರಂಜನ ಸತ್ಯಂಪೇಟೆ ನಿರೂಪಿಸಿದರು. ಪರಮೇಶ್ವರ ಶೆಟಗಾರ ವಂದಿಸಿದರು.

‘ಅತಿ ಭ್ರಷ್ಟರು ಮೌಢ್ಯದ ಮೊರೆ’

‘ಸಿಗ್ಮೆಂಟ್‌ ಫ್ರೈಡ್‌ ಹೇಳುವ ಹಾಗೆ ಮನುಷ್ಯ ಅತ್ಯಂತ ಸೋಮಾರಿ ಪ್ರಾಣಿ. ಮೌಢ್ಯ ಮತ್ತು ಕೆಲಸಕ್ಕೆ ಅವಿನಾಭಾವ ಸಂಬಂಧ ಇದೆ. ಅತಿ ಭ್ರಷ್ಟರು, ಅನೈತಿಕ ಮಾರ್ಗದಿಂದ ಬದುಕನ್ನು ಕಟ್ಟಿಕೊಂಡವರು ಹೆಚ್ಚಾಗಿ ಮೌಢ್ಯಾಚರಣೆ ಮೊರೆ ಹೋಗುತ್ತಾರೆ. ವಾಮಮಾರ್ಗದಿಂದ ಬಂದ ಹಣವನ್ನು ದಕ್ಕಿಸಿಕೊಳ್ಳಲು ದೇವರಿಗೂ ಪಾಲು ಕೊಡುತ್ತಾರೆ!’ ಎಂದು ಮೌಢ್ಯಾಚರಣೆಯ ವಿಸ್ತಾರವನ್ನು ಪ್ರೊ. ಶಿವಗಂಗಾ ರುಮ್ಮಾ ವಿಶ್ಲೇಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು