ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು ಸೇವನೆ ಶಂಕೆ; ಮಹಿಳೆ ಸಾವು

Last Updated 19 ಅಕ್ಟೋಬರ್ 2021, 3:44 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಬೋಳಣಿ ಗ್ರಾಮದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು, ಕಲುಷಿತ ನೀರು ಸೇವಿಸಿ ವಾಂತಿಭೇದಿಯೇ ಸಾವಿಗೆ ಕಾರಣ ಎಂದು ಸಂಶಯ ಪಡಲಾಗಿದೆ.

ಗ್ರಾಮದ ನಿವಾಸಿ ಮಲ್ಲಮ್ಮ ಮಹಾಂತಪ್ಪ (26) ಅವರು ಅಸ್ವಸ್ಥಗೊಂಡು ಶನಿವಾರ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುವಾಗ ಮೃತಪಟ್ಟಿದ್ದಾರೆ. ಮೃತರು ಗರ್ಭಿಣಿ ಆಗಿದ್ದು, ಕಲುಷಿತ ನೀರು ಸೇವಿಸಿರಬಹುದು ಎಂಬ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ವೈದ್ಯರ ವರದಿಗಾಗಿ ಕಾಯಲಾಗುತ್ತಿದೆ.

ಇದೇ ಗ್ರಾಮದ ಮಹೇಶ ಸಿದ್ದಣ್ಣ ಆಲೂರೆ, ಶಿವಾನಂದ ಮೈಲಾರಿ ಶಹಬಾದ್, ಸುನಂದಾ ಪೂಜಾರಿ, ನಾಗಮ್ಮ ಪರೀಟ, ಶಿವಲಿಂಗ ಗಣಪತಿ, ರಾಮಚಂದ್ರ ಶರಣಪ್ಪ ಮೇಲ್ಕೇರಿ, ಗುರಮ್ಮ ವಿಠಲ ಮುಲಗೆ, ಚಿನ್ನಾ ಮಲ್ಕರೆ ಅವರಲ್ಲಿಯೂ ವಾಂತಿಭೇದಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಅವರು ಕಲಬುರಗಿ, ಆಳಂದ ಹಾಗೂ ಉಮರ್ಗಾದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಕೆಲವು ವಾರ್ಡ್‌ಗಳ ನಿವಾಸಿಗರು ಕೊಳವೆ ಬಾವಿ ನೀರನ್ನೇ ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವಿಕೆ ಹಾಗೂ ಕಲುಷಿತ ನೀರು ಸೇವನೆಯಿಂದ ವಾಂತಿಭೇದಿ ಉಲ್ಬಣಿಸಿದೆ ಎನ್ನುತ್ತಾರೆ ಗ್ರಾಮಸ್ಥರು.

ಅಧಿಕಾರಿಗಳ ಭೇಟಿ:

ಗ್ರಾಮಕ್ಕೆ ಸೋಮವಾರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ತಾ.ಪಂ ಇಒ ನಾಗಮೂರ್ತಿ ಶೀಲವಂತ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲಕುಮಾರ, ಪಿಡಿಒ ಲಕ್ಷ್ಮಣ ಭೇಟಿ ಅವರು ನೀಡಿ ಪರಿಶೀಲಿಸಿದರು.

‘ಗ್ರಾಮದಲ್ಲಿ ತಕ್ಷಣವೇ ಸ್ವಚ್ಛತೆ ಕಾರ್ಯ ನಡೆಸಿ, ಶುದ್ಧ ಹಾಗೂ ನೀರು ಕಾಯಿಸಿ ಕುಡಿಯಬೇಕು. ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸುರಕ್ಷತಾ ಕಿಟ್‌ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಡಾ.ಸುಶೀಲಕುಮಾರ ತಿಳಿಸಿದರು.

ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ, ಬ್ಲೀಚಿಂಗ್ ಪೌಡರ್‌ ಸಿಂಪರಣೆ, ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ ಎಂದು ಪಿಡಿಒ ಲಕ್ಷ್ಮಣ ಪೂಜಾರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಡಗಾ ಮತ್ತು ಮುದ್ದಡಗಾ ಗ್ರಾಮದಲ್ಲಿ ವಾಂತಿಭೇದಿ ಉಲ್ಬಣಿಸಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡಿದ್ದು, ಈಗ ರೋಗ ನಿಯಂತ್ರಣಕ್ಕೆ ಬಂದಿದೆ.

***

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಹೊರೆಯಾಗುತ್ತಿದ್ದು, ತಕ್ಷಣವೇ ನುರಿತ ವೈದ್ಯರನ್ನು ಕಾಯಂ ನಿಯೋಜಿಸಿ ವಾಂತಿಭೇದಿ ಹಬ್ಬದಂತೆ ಎಚ್ಚರವಹಿಸಬೇಕು

-ಮಲ್ಲಿಕಾರ್ಜುನ ಬಾಳಿ, ಬೋಳಣಿ ನಿವಾಸಿ

***

ಬೋಳಣಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಹೊಸ ಕೊಳವೆ ಬಾವಿ ಕೊರೆಸಲಾಗುವುದು. ಬಳಕೆ ಮಾಡುತ್ತಿದ್ದ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ

-ನಾಗಮೂರ್ತಿ ಶೀಲವಂತ, ತಾ.ಪಂ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT