ಮಂಗಳವಾರ, ಆಗಸ್ಟ್ 16, 2022
21 °C
ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಸಲಹೆ

ವರ್ಷಕ್ಕೊಮ್ಮೆ ಮಿದುಳು ತಪಾಸಣೆ ಮಾಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಾವು ಯಾರು ಕೂಡ 100ಕ್ಕೆ 100ರಷ್ಟು ಮಾನಸಿಕವಾಗಿ ಆರೋಗ್ಯಕರವಾಗಿರುವುದಿಲ್ಲ. ಮನುಷ್ಯರೆಂದ ಮೇಲೆ ಜ್ವರ, ನೆಗಡಿ, ಕೆಮ್ಮು ಬರುವ ಹಾಗೇ ಮಿದುಳಿಗೂ ಜ್ವರ ಬರುತ್ತದೆ. ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಮಾನಸಿಕ ತಜ್ಞರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜೆ.ಸತೀಶ ಸಿಂಗ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಪ್ರಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಘಟನೆಗಳು ಹಾಗೂ ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ) ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಗೌರವಯುತವಾಗಿ ಬದುಕುವುದು ಸಂವಿಧಾನದ ಮೂಲಭೂತ ಹಕ್ಕು. ಹೀಗಾಗಿ, ಅಂಗವಿಕಲರಿಗೆ ಸಿಗುವ ಎಲ್ಲಾ ಸೌಲಭ್ಯ ಲಭಿಸುವಂತೆ ಆಗಬೇಕು. ಸಾರ್ವಜನಿಕಕರು ಅಧಿಕಾರಿಗಳ ಕಣ್ಣುಗಳಾಗಿ ಕೆಲಸ ಮಾಡಬೇಕು. ಎಲ್ಲಾದರೂ ಮಾನಸಿಕ ಅಸ್ವಸ್ಥ ವ್ಯಕ್ತಿಗಳು ಕಂಡರೆ ಕೂಡಲೇ ಪೊಲೀಸರ ಸಹಾಯವಾಣಿ 100ಕ್ಕೆ ಕರೆಮಾಡಿ ಮಾಹಿತಿ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದ ಅವರು, ಮಾನಸಿಕ ಅನಾರೋಗ್ಯ, ಹಿರಿಯರು, ಕಾನೂನು ಸುವ್ಯವಸ್ಥೆಯಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಅಂಗವಿಕಲರಿಗೆ ಮಾಹಿತಿ ನೀಡಿದರು.‌

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಆರ್. ಶೆಟ್ಟರ್ ಮಾತನಾಡಿ, ‘ಕಾನೂನಿನಲ್ಲಿ ಹಲವಾರು ಬದಲಾವಣೆಗಳಾಗಿವೆ. ಅದರಲ್ಲಿ ಅಸ್ತಿ ವಿಚಾರವೂ ಒಂದು. ಗಂಡು– ಹೆಣ್ಣು ಭೇದ ಮರೆತು ಸಮಾನವಾಗಿ ಕಾಣುವುದು ಉಚಿತ. ಗ್ರಾಮೀಣ ಪ್ರದೇಶದ ಹಿರಿಯರಲ್ಲಿ ಬರುವ ಅಸ್ತಿ ಸಮಸ್ಯೆಗಳನ್ನು ಗಂಡು– ಹೆಣ್ಣು ಅಂತ ಭೇದ ಮಾಡದೇ ನ್ಯಾಯ ಮಾಡಿದರೆ ನ್ಯಾಯಾಲಯಕ್ಕೆ ಬರುವ ಶೇ 50ರಷ್ಟು ಕೇಸುಗಳು ನಿಲ್ಲುತ್ತವೆ’ ಎಂದು ತಿಳಿಸಿದರು.

ಅಂಗವಿಕಲ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ ಮರಣ ಪರಿಹಾರ ಚೆಕ್ ವಿತರಣೆ, ಅಂಗವಿಕಲರ ವಿವಾಹ ಯೋಜನೆ ಅಡಿಲ್ಲಿ ಪ್ರೋತ್ಸಾಹ ಧನ ಬಾಂಡ್ ವಿತರಣೆ, ಹೈದರಾಬಾದ್‌ನ ಶ್ರೀ ಗುರುದೇವ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಧನ ಸಲಕರಣೆ ವಿತರಣೆ ಹಾಗೂ ಉತ್ತಮ ಸೇವೆ ಸಲ್ಲಿಸಿದ ವಿವಿಧ ತಾಲ್ಲೂಕಿನ ವಿ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಪ್ರಮಾಣ ಪಾತ್ರವನ್ನು ವಿತರಿಸಿದರು. ಭಾರತೀಯ ರೆಡ್‌ಕ್ರಾಸ್ ವತಿಯಿಂದ ಮಾಸ್ಕ್ ಮತ್ತು ಸಾಬೂನು ವಿತರಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಕಣ್ಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜ ಮಾತನಾಡಿದರು. ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನಾಗಣ್ಣ ಗಾಣಜಲಕೇಡ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್, ಭಾರತೀಯ ರೆಡ್‌ಕ್ರಾಸ್ ಕಲಬುರ್ಗಿ ಘಟಕದ ಉಪಾಧ್ಯಕ್ಷ ಅರುಣಕುಮಾರ ಗೋಳಾ ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಸ್ವಾಗತಿಸಿದರು. ಸರ್ಕಾರಿ ಅಂಧ ಬಾಲಕರ ಶಿಕ್ಷಕರು ನಾಡಗೀತೆ ಹಾಡಿದರು. ರಮೇಶ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಜಾದವ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು