ಶನಿವಾರ, ಜನವರಿ 29, 2022
23 °C
ಎಲ್ಲೆಡೆ ಎಳ್ಳ ಅಮವಾಸ್ಯೆಯ ಸಂಭ್ರಮ, ಚರಗ ಚೆಲ್ಲಿ ಸಂಭ್ರಮಿಸಿದ ರೈತ ಕುಟುಂಬಗಳು

ಹುಲ್ಲುಲ್ಲುಗೋ, ಚಲಾಂಬ್ರಿಗೋ: ಎಲ್ಲೆಡೆ ಎಳ್ಳ ಅಮವಾಸ್ಯೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ:‌ ನಗರವೂ ಸೇರಿ ಜಿಲ್ಲೆಯ ಎಲ್ಲೆಡೆ ಭಾನುವಾರ ಎಳ್ಳ ಅಮಾವಾಸ್ಯೆಯ ಸಡಗರ ಮನೆ ಮಾಡಿತು. ಶನಿವಾರವಷ್ಟೇ ಹೊಸ ವರ್ಷಾಚರಣೆಯ ಸಂಭ್ರಮ ಅನುಭವಿಸಿದ್ದ ಜನ, ಮರುದಿನವೇ ಮತ್ತೊಂದು ಖುಷಿಗೆ ಮುಂದಾದರು.

ಹಳ್ಳಿಗಳಲ್ಲಂತೂ ನಸುಕಿನಿಂದಲೇ ಹಬ್ಬದ ಗಡಿಬಿಡಿ ಕೆಲಸಗಳು ಆರಂಭವಾದವು. ಮನೆಯಲ್ಲಿ ಪೂಜಾ ಕೆಲಸ ಮುಗಿದ ಬಳಿಕ, ಭರ್ಜರಿ ಅಡುಗೆ ಸಿದ್ಧಪಡಿಸಿಕೊಂಡು, ಎತ್ತು–ಚಕ್ಕಡಿ ಕಟ್ಟಿಕೊಂಡ ರೈತ ಕುಟುಂಬಗಳು ಹೊಲದತ್ತ ಸಾಗಿದವು. ಸಮೃದ್ಧ ಬೆಳೆಯ ಬಯಕೆ ಹೊತ್ತು ಹೊಲಕ್ಕೆ ಚರಗ ಚೆಲ್ಲುವ ಮೂಲಕ ಭೂಮಿತಾಯಿಗೆ ನಮಿಸಿದರು. ಹೊಲದ ತುಂಬೆಲ್ಲ ಸಂಚರಿಸಿ ‘ಹುಲ್ಲುಲ್ಲುಗೋ… ಚಲಾಂಬ್ರಿಗೋ…’ ಎನ್ನುತ್ತ ಚರಗ ಚೆಲ್ಲಿದರು.

ಮೈದುಂಬಿ ನಿಂತ ಭೂರಮೆಗೆ ಸೀಮಂತ ಮಾಡುವ ಉದ್ದೇಶದಿಂದ ಈ ಎಳ್ಳ ಅಮಾವಾಸ್ಯೆ ಆಚರಿಸುವುದು ವಾಡಿಕೆ. ಹೊಲದಲ್ಲಿ  ಮರದ ಕೆಳಗೆ ಐದು ಕಲ್ಲುಗಳನ್ನು ಇಟ್ಟು ಅವರನ್ನೇ ಪಾಂಡವರು ಎಂದು ಪೂಜೆ ಮಾಡುವುದು ಸಂಪ್ರದಾಯ. ಬಗೆಬಗೆಯ ಖಾದ್ಯ
ಗಳನ್ನು ಅವರ ಮುಂದೆ ಇಟ್ಟು ನೈವೇದ್ಯ ಮಾಡಿದರೆ ಭೂತಾಯಿ ನೆಮ್ಮದಿಯಿಂದ ಇರುತ್ತಾಳೆ ಎಂಬುದು ನಂಬಿಕೆ.

ಕಲಬುರಗಿ ನಗರದ ಜನ ಕೂಡ ಸುತ್ತಲಿನ ಹೊಲಗಳಿಗೆ ಹೋಗಿ ಟೆಂಟ್‌ ಹಾಕಿ, ಚರಗ ಚೆಲ್ಲಿ ನೆಂಟರಿಷ್ಟರಿಗೆ ಊಟ ಹಾಕಿದರು. ಮಕ್ಕಳು ಹೊಸ ಬಟ್ಟೆ ತೊಟ್ಟುಕೊಂಡು ಹೊಲದ ತುಂಬ ಓಡಾಡಿ ನಲಿದರು.

ಏನೇನು ಖಾದ್ಯಗಳು: ಹಿಂಗಾರು ಫಸಲು ಸಮೃದ್ಧವಾಗಿ ಬರಲಿ, ಮನೆತುಂಬ ದವಸ– ಧಾನ್ಯ ತುಂಬಲಿ ಎಂಬ ಬೇಡಿಕೆಯೊಂದಿಗೆ ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ಎಳ್ಳ ಅಮಾವಾಸ್ಯೆ ವಿಶೇಷ.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಖಡಕ್‌ ರೊಟ್ಟಿ, ಜೋಳದ ಕಡಬು, ಪುಂಡಿಪಲ್ಯ, ತರಕಾರಿ, ಅನ್ನ, ಸಾಂಬಾರು, ವಿವಿಧ ನಮೂನೆಯ ಭಜ್ಜಿ, ಚಟ್ನಿಗಳು ಹಾಗೂ ಸಿಹಿ ತಿಂಡಿಗಳಾದ ಗೋಧಿ ಹುಗ್ಗಿ, ಮಾದಲಿ, ಜಾಮೂನು, ಶ್ಯಾವಿಗೆ ಪಾಯಸ, ಶೇಂಗಾ ಹೋಳಿಗೆ, ಸುರಳಿ ಹೋಳಿಗೆ, ಕರ್ಚಿಕಾಯಿ ಒಂದೇ ಎರಡೇ... ಮಧ್ಯಾಹ್ನ ಎಲ್ಲರೂ ಕುಳಿತು ಭರ್ಜರಿ ಭೋಜನ ಮಾಡಿದರು. 

ಅದರಲ್ಲೂ ಜೋಳದ ಕಡುಬು, ಶೀಖರಣೆ ಜತೆ ವಿವಿಧ ಖಾದ್ಯಗಳನ್ನು ತಯಾರಿಸಿ ಭೂಮಿತಾಯಿಗೆ ಅರ್ಪಿಸಿ ತಾವೂ ಸೇವಿಸಿ ಸಂಭ್ರಮಿಸಿದ್ದು ಕಂಡುಬಂತು.  ಕೃಷಿಕ ಮಹಿಳೆಯರು ಹೊಸ ಸೀರೆ ಉಟ್ಟು ಆಭರಣಗಳನ್ನು ಹಾಕಿಕೊಂಡು ಪುರುಷರು, ಮಕ್ಕಳು ಹೊಸ ಬಟ್ಟೆ ಧರಿಸಿಕೊಂಡು ಚರಗದ ಬುತ್ತಿಯನ್ನು ಚಕ್ಕಡಿ, ಟ್ರ್ಯಾಕ್ಟರ್‌ನಲ್ಲಿ ಇಟ್ಟುಕೊಂಡು ಹೊಲಕ್ಕೆ ಹೋಗುವುದೇ ಸಂಭ್ರಮ. ಹೊಲ ಇಲ್ಲದವರು ಕೂಡ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮವನ್ನು ಮನೆಯ ಹಿತ್ತಲು, ಉದ್ಯಾನ ಮುಂತಾದ ಸ್ಥಳಗಳಲ್ಲಿ ಆಚರಿಸಿದರು. ಕೆಲವರು ಪರಿಚಯಸ್ಥರ ಹೊಲಕ್ಕೆ ತೆರಳಿ ಊಟ ಮಾಡಿದರು. ಯುವಕ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖುಷಿ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.