ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕ್ರಮಕ್ಕೆ ಯುವ ಕಲಾವಿದರ ಬೇಸರ

ಕಲಾವಿದರಿಗೆ ಪ್ಯಾಕೇಜ್ ಘೋಷಣೆ: 35 ಮೀರಿದವರಿಗೆ ಆರ್ಥಿಕ ಸವಲತ್ತು
Last Updated 2 ಜೂನ್ 2021, 3:40 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‌ಡೌನ್‌ ಸಂದರ್ಭದಲ್ಲಿ ಯುವ ಕಲಾವಿದರಿಗೆ ನೆರವು ನೀಡಲು ಸರ್ಕಾರ ಮುಂದಾಗಿದೆಯಾದರೂ 35 ವರ್ಷ ವಯಸ್ಸು ಮೀರಿದವರಿಗೆ ಹಾಗೂ 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಆರ್ಥಿಕ ಸವಲತ್ತು ನೀಡಲು ಮುಂದಾಗಿರುವುದು ಯುವ ಕಲಾವಿದರಲ್ಲಿ ತೀವ್ರ ಬೇಸರ ಮೂಡಿಸಿದೆ.

ಇದಕ್ಕಾಗಿ ಹಲವು ಕಲಾವಿದರೂ ಹೋರಾಟದ ಹಾದಿಯನ್ನೂ ಹಿಡಿದಿದ್ದಾರೆ.

ಈ ಸಂಬಂಧ ಈಗಾಗಲೇ ಹಲವು ಕಲಾವಿದರು ಮುಖ್ಯಮಂತ್ರಿ ಅವರಿಗೆ ಮನವಿಯನ್ನೂ ಸಲ್ಲಿಸಿದ್ದು, 18 ವರ್ಷ ಮೀರಿದ ಎಲ್ಲರಿಗೂ ಸವಲತ್ತು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಅಸಮಧಾನ ಹೊರಹಾಕಿದ ರಂಗ ನಿರ್ದೇಶಕ, ರಂಗ ಕಲಾವಿದ ಮಹಾದೇವ ಹಡಪದ, ‘ಕನ್ನಡ ರಂಗಭೂಮಿ ಆಕರ್ಷಣೀಯವಾಗಿರುವುದೇ ಯುವಕರಿಂದ. ಪ್ರತಿ ವರ್ಷ ಕನ್ನಡ ರಂಗಭೂಮಿಯಲ್ಲಿ 100ಕ್ಕೂ ಹೆಚ್ಚು ಯುವ ರಂಗಕರ್ಮಿಗಳು ರಂಗಕ್ಕೆ ಬರುತ್ತಿದ್ದಾರೆ. ಯಾವುದೇ ಕ್ರಿಯಾಶೀಲ ಕೆಲಸಕ್ಕೆ ಯುವಕರೇ ಮುಂದೆ ಬರುತ್ತಾರೆ. ತಮ್ಮ ಪರಿಶ್ರಮದ ಚಟುವಟಿಕೆಯಿಂದಾಗಿ ರಂಗಭೂಮಿಯನ್ನು ಜೀವಂತವಾಗಿಟ್ಟಿರುವ 35 ವರ್ಷದೊಳಗಿನ ಎಲ್ಲ ಯುವ ಕಲಾವಿದರಿಗೆ ರಾಜ್ಯ ಸರ್ಕಾರ ಉದಾರವಾಗಿ ಹಣಕಾಸು ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಯುವ ರಂಗ ಕಲಾವಿದ ರಾಹಲ ಕಟ್ಟಿ ಮಾತನಾಡಿ, ‘ಸದ್ಯ 35 ವರ್ಷ ಮೆಲ್ಪಟ್ಟ, 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ, ಸಹಾಯಧನ ನೀಡುತ್ತಿದೆ. ಯುವ ಕಲಾವಿದರಿಗೂ ಸರ್ಕಾರ ಧನಸಹಾಯ ನೀಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಅದೆಷ್ಟೋ ಕಲಾವಿದರು, ವೃತ್ತಿರಂಗಭೂಮಿ ಕಲಾವಿದರು, ರಂಗ ಪರಿಕರಗಳ ಕಲಾವಿದರು, ಇನ್ನೂ ಹಲವಾರು ಕಲಾವಿದರು ರಂಗಭೂಮಿಯನ್ನೇ ನಂಬಿ ಬದುಕುವವರು ಇದ್ದಾರೆ, ಅವರ ಬದುಕು ಸಹ ಸಂಕಷ್ಟದಲ್ಲಿದೆ ಅಂತಹ ಕಲಾವಿದರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

‘ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಇಬ್ಬಗೆಯ ನೀತಿ ಸರಿಯಲ್ಲ, ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ, ಸವರುವುದನ್ನು ಬಿಟ್ಟು, ಎಲ್ಲಾ ಕಲಾವಿದರಿಗೂ ಸಮಾನವಾಗಿ ಸಹಾಯ ಮಾಡಲಿ’ ಎಂದು ಒತ್ತಾಯಿಸಿದ್ದಾರೆ.

ಹಸಿವಿಗೆ ಯಾವ ವಯಸ್ಸಿನ ಮಿತಿ: ರಾಜ್ಯ ಸರ್ಕಾರ 35 ವರ್ಷ ಮೀರಿದವರಿಗೆ ಮಾತ್ರ ಹಣಕಾಸು ನೆರವು ನೀಡುವುದಾಗಿ ಘೋಷಿಸಿದೆ. ಆದರೆ, ಹಸಿವಿಗೆ ವಯಸ್ಸಿನ ಮಿತಿಯೆಲ್ಲಿದೆ ಎಂದು ಯುವ ರಂಗ ಕಲಾವಿದ, ರಂಗ ನಿರ್ದೇಶಕ ಲಕ್ಷ್ಮಣ ಪೀರಗಾರ ಪ್ರಶ್ನಿಸಿದ್ದಾರೆ.

‘ಕೊರೊನಾ ಸಂಕಷ್ಟಕಾಲದಲ್ಲಿ ಕಲಾವಿದರಿಗೆ ಸರ್ಕಾರ ₹ 3 ಸಾವಿರ ಸಹಾಯ ಮಾಡಲು ಮುಂದೆ ಬಂದಿದ್ದು ಒಳ್ಳೆಯ ನಡೆ. ಆದರೆ ವಯಸ್ಸಿನ ನಿರ್ಬಂಧ ಇಟ್ಟಿರುವುದು ಏನೋ ಒಂದು ಬಗೆಯ ಸಂಕಟ ಆಗುತ್ತಿದೆ. ಕನ್ನಡ ರಂಗಭೂಮಿಯಲ್ಲಿ, ತಕ್ಕಮಟ್ಟಿನ ಕೆಲಸ ನಡೆದಿದೆ ಎಂದರೆ ಹೆಚ್ಚಿನ ಪಾಲು ಯುವಸಮುದಾಯದಿಂದ, ಸರ್ಕಾರದ ಈ ನಿರ್ಧಾರದಿಂದ ಸಾಕಷ್ಟು ಜನ 35 ವಯೋಮಿತಿಯೊಳಗಿನ ಕಲಾವಿದರು ತಮ್ಮ ಮನಸ್ಸಿನೊಳಗೆ ಬೇಸತ್ತು ಮಂಕಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯುವಮನಸ್ಸುಗಳು ತಮ್ಮ ಬದುಕಿನ ಸೇವೆಯನ್ನು ಹಂಗಿಲ್ಲದೆ ಕರ್ನಾಟಕದಾದ್ಯಂತ ಮಕ್ಕಳ ರಂಗಭೂಮಿ, ತಿರುಗಾಟ, ಹೋರಾಟ, ಸಮುದಾಯದ ಮುಂದಾಳತ್ವದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇದು ಎಲ್ಲ ಹಿರಿಯ ರಂಗಕರ್ಮಿಗಳಿಗೂ ಗೊತ್ತು. ಯಾವ ಸಮಿತಿ ಈ ಅವೈಜ್ಞಾನಿಕ ನೀತಿಗಳನ್ನು ರೂಪಿಸುತ್ತಿದೆಯೋ ಗೊತ್ತಿಲ್ಲ. ಈ ನಿರ್ಧಾರ ಖಂಡನೀಯ ಎಂದು ತಿಳಿಸಿದ್ದಾರೆ.

ಕಡಿಮೆ ವೇತನದಲ್ಲಿ ಸಂಘ, ಸಂಸ್ಥೆಗಳು, ತಂಡಗಳು, ರೇಪರ್ಟರಿಗಳು ಸರ್ಕಾರದ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಯುವಕರು ಬೇಕು. ರಂಗಾಯಣದಂತಹ ಸಂಸ್ಥೆಗೆ 25 ಮನಸ್ಸಿನ ಯುವತಿ, ಯುವಕರು ಕಲಾವಿದರಾಗಿ ಬೇಕು. ಇವತ್ತು ಇದರ ಬಗ್ಗೆ ಸಂಸ್ಥೆ, ರಂಗತಂಡಗಳ ಮುಖ್ಯಸ್ಥರು, ನಿರ್ದೇಶಕರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ
ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT