ಗುರುವಾರ , ಮೇ 6, 2021
25 °C
ಕಾಳಗಿ ತಾಲ್ಲೂಕಿನಲ್ಲೇ ‘ಮಾದರಿ’ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ

ಮಂಗಲಗಿಯಲ್ಲಿ ‘ಮಂದಿರ’ದಂಥ ಆಸ್ಪತ್ರೆ

ಗುಂಡಪ್ಪ ಕರೆಮನೋರ ಕಾಳಗಿ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ಯಾವಾಗ ನೋಡಿದರೂ ಆಸ್ಪತ್ರೆಯ ಕೀಲಿ ಮುರಿದ ಘಟನೆ ಮತ್ತು ವೈದ್ಯರ ವರ್ಗಾವಣೆಯ ಮಾತೇ ಕೇಳಿ ಬರುತ್ತಿದ್ದ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಈಗ ‘ದೇವಮಂದಿರ’ ದಂತಹ ‘ಮಾದರಿ’ ಆಸ್ಪತ್ರೆಯೊಂದು ಕಾಣಸಿಗುತ್ತಿದೆ.

ಇದು ಸರ್ಕಾರಿ ಆಸ್ಪತ್ರೆಯಾಗಿದ್ದರೂ ಹೈಟೆಕ್ ಖಾಸಗಿ ಆಸ್ಪತ್ರೆಯನ್ನು ಮೀರಿಸುವ ರೀತಿಯಲ್ಲಿ ತಲೆಯೆತ್ತಿ ಡಾ.ದೀಪಕ್ ರಾಠೋಡ ಸಾರಥ್ಯದ 16 ಜನ ಸಿಬ್ಬಂದಿ ಏಳು ಊರು ಮತ್ತು ಆರು ತಾಂಡಾಗಳ ಜನರ ಸೇವೆಗೆ ಸದಾ ಸಿದ್ಧರಾಗಿ ನಿಂತಿದ್ದಾರೆ.

ಈ ಆರೋಗ್ಯ ಕೇಂದ್ರಕ್ಕೆ ಬರುವವರು ಚಪ್ಪಲಿ ಹೊರಗೆ ಬಿಟ್ಟು ಬರುವ ಪದ್ಧತಿ ಇಲ್ಲಿದೆ. ಆಸ್ಪತ್ರೆ ಒಳ ಪ್ರವೇಶಿಸಿದಂತೆ ಯಾವುದೊ ‘ದೇವರ ಗುಡಿ’ಗೆ ಬಂದಂತಹ ಅನುಭವ ಜನರಿಗೆ ಆಗುತ್ತದೆ. ₹2.75 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ, ಸಿಬ್ಬಂದಿಯ ಅವಿರತ ಪರಿಶ್ರಮ, ರಾಷ್ಟ್ರೀಯ ಉಚಿತ ಔಷಧಿಯ ವಿಶೇಷ ಅನುದಾನದ ಪ್ರತಿ ಆರು ತಿಂಗಳ ₹12,500 ಬಳಕೆಯ ಸುಂದರವಾದ ವಾತಾವರಣ ಹಾಗೂ ವೈದ್ಯಕೀಯ ವ್ಯವಸ್ಥೆ ಇದಕ್ಕೆಲ್ಲ ಕಾರಣವಾಗಿದೆ.

ಈ ಆರೋಗ್ಯ ಕೇಂದ್ರವು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಶೇ 83 ರಷ್ಟು ‘ಶುದ್ಧ ಆಸ್ಪತ್ರೆ’ ಎಂಬ ಹೆಗ್ಗಳಿಕೆ ಪಡೆದಿದೆ. ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ 3ನೇ ಸ್ಥಾನ ಹಾಗೂ ತಾಲ್ಲೂಕಿಗೆ ಮೊದಲನೇ ಸ್ಥಾನ ಪಡೆದುಕೊಂಡಿದೆ.

ಊರು ಚಿಕ್ಕದಾಗಿದ್ದರೂ ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳಿಂದ ಪ್ರತಿದಿನ 50 ರಿಂದ 60 ಹೊರ ರೋಗಿಗಳು (ಸೋಮವಾರ ಮತ್ತು ಶುಕ್ರವಾರ 100ಕ್ಕೂ ಹೆಚ್ಚು) ಹಾಗೂ ಪ್ರತಿ ತಿಂಗಳಿಗೆ 50ಕ್ಕೂ ಹೆಚ್ಚು ಒಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಒಂದು ವಾರಕ್ಕೆ 30 ರಿಂದ 40 ಗರ್ಭಿಣಿಯರು ತಪಾಸಣೆಗೆ ಒಳಪಡುತ್ತಾರೆ. ಕಳೆದ ಬಾರಿ 1911 ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ. ಈಚೆಗೆ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ 32 ಜನ ರಕ್ತ ನೀಡಿದ್ದಾರೆ. ಈ ಎಲ್ಲಾ ಸಾಧನೆಗೆ ಮನಸೋತ ಗ್ರಾಮಸ್ಥರು ಈಗ ಬಾಗಿಲು ಕೀಲಿ ಮುರಿಯುವುದನ್ನು ಬಿಟ್ಟು ಆಸ್ಪತ್ರೆಯ ಅಭಿವೃದ್ಧಿಗೆ ವೈದ್ಯರೊಂದಿಗೆ ಕೈಜೋಡಿಸಲು ಮುಂದೆ ಬರುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು