ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಕೊಲೆಯಾದ ಬಾಲಕಿಯ ರುಂಡ‌‌ ಪತ್ತೆ

Published 11 ಮೇ 2024, 8:08 IST
Last Updated 11 ಮೇ 2024, 8:08 IST
ಅಕ್ಷರ ಗಾತ್ರ

ಮಡಿಕೇರಿ: ಸವಾಲಿನ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿರುವ ಕೊಡಗು ಜಿಲ್ಲಾ ಪೊಲೀಸರು ಕೋವಿ ಹಿಡಿದು ಮತ್ತೊಂದು ಕೊಲೆಗೆ ಹೊಂಚು ಹಾಕುತ್ತಿದ್ದ ಬಾಲಕಿಯ ರುಂಡ ಕಡಿದಿದ್ದ ಆರೋಪಿ ಪ್ರಕಾಶ್ (34) ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ.

ಬಾಲಕಿಯ ರುಂಡ ಮಾತ್ರವಲ್ಲ ಕೋವಿಯನ್ನೂ ತೆಗದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹುಡುಕುವುದು ಅಷ್ಟು ಸುಲಭದ್ದಾಗಿರಲಿಲ್ಲ ಎಂದು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರೇ ಹೇಳುತ್ತಾರೆ.

ಅತ್ಯಂತ ಎತ್ತರದ, ದುರ್ಗಮ ಪ್ರದೇಶ ಮಾತ್ರವಲ್ಲ ಸುತ್ತಲೂ ಕಾಡಿರುವ ಪ್ರದೇಶವದು. ಕಾಡಿನೊಳಗೆ ಆರೋಪಿಯನ್ನು ಹುಡುಕುವುದು ಹಾಗೂ ಅಲ್ಲಿನ ಭೌಗೋಳಿಕ ಸನ್ನಿವೇಶ ಎರಡೂ ಪೊಲೀಸರಿಗೆ ಹೊಸತಾಗಿತ್ತು. ಜೊತೆಗೆ, ಜೀವಭಯ. ಇವುಗಳ ಮಧ್ಯೆ 25ಕ್ಕೂ ಅಧಿಕ ಪೊಲೀಸರು ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಸಿರುವುದು ವಿಶೇಷ.

ಸೋಮವಾರಪೇಟೆ ಠಾಣೆಯ ಎಲ್ಲ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಎಲ್ಲ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯನ್ನು ಈ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಈ ಎಲ್ಲ ಸಿಬ್ಬಂದಿಗಳನ್ನೂ ವಿವಿಧ ತಂಡಗಳನ್ನಾಗಿ ರಚಿಸಿಕೊಂಡು ಪ್ರತ್ಯೇಕವಾಗಿ ಹುಡುಕಾಟ ನಡೆಸಲಾಗಿತ್ತು ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಾಡಿನೊಳಗೆ ಇರುವ ಪೊದೆಗಳು ಅತಿ ವಿಸ್ತಾರವಾಗಿವೆ. ಈ ಪೊದೆಯೊಳಗೆ ನುಸುಳುವುದು ಅಷ್ಟು ಸುಲಭವಲ್ಲ. ಮುಳ್ಳುಗಂಟಿ ಗಿಡಗಳ ಮಧ್ಯೆ ಆರೋಪಿಯನ್ನು, ರುಂಡವನ್ನೂ ಪತ್ತೆ ಹೆಚ್ಚುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಕೆ.ಎಂ.ವಸಂತ್, ಪಿಎಸ್‌ಐಗಳಾದ ರಮೇಶ್, ಶ್ರೀಧರ್, ಕಾಶಿನಾಥ್, ಪ್ರಹ್ಲಾದ್, ಮನ್ ಶೆಟ್ಟಿ ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

ಎಲ್ಲರೂ ಶಸ್ತ್ರಧಾರಿಗಳಾಗಿದ್ದರು!: ಆರೋಪಿಯ ಕೈಯಲ್ಲಿ ಬಂದೂಕು ಇದೆ ಎಂಬ ಕಾರಣಕ್ಕೆ ಎಲ್ಲ ಪೊಲೀಸರೂ ಸಶಸ್ತ್ರಧಾರಿಗಳಾಗಿದ್ದರು.

ಬಾಲಕಿಯ ಮನೆ, ಆಕೆಯ ಅಕ್ಕನ ಮನೆ, ಆಕೆಯ ತಂದೆ ದಾಖಲಾ ಗಿದ್ದ ಮಡಿಕೇರಿಯ ಜಿಲ್ಲಾಸ್ಪತ್ರೆ, ತಾಯಿ ದಾಖಲಾಗಿದ್ದ ಮೈಸೂರಿನ ಆಸ್ಪತ್ರೆ ಹೀಗೆ ಎಲ್ಲೆಡೆ ಸಶಸ್ತ್ರ ಪೊಲೀಸರನ್ನೇ ನಿಯೋ ಜಿಸುವ ಮೂಲಕ ಮುನ್ನಚ್ಚರಿಕೆ ವಹಿಸಲಾಗಿತ್ತು.

ಊಹಾಪೋಹಾಗಳನ್ನು ನಿಭಾಯಿಸುವುದೇ ದೊಡ್ಡ ಸವಾಲು!:

ಪ್ರಕರಣದಲ್ಲಿ ಆರೋಪಿ ಪತ್ತೆಯ ಜೊತೆಗೆ ಗಂಟೆ, ಗಂಟೆಗೂ ಹಬ್ಬುತ್ತಿದ್ದ ಊಹಾಪೋಹಾಗಳನ್ನು ನಿಭಾ ಯಿಸುವುದೇ ದೊಡ್ಡ ಸವಾಲಾಗಿತ್ತು. ಶುಕ್ರವಾರ ಸಂಜೆ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಆರೋಪಿಯ ಮನೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜಮಾ ಯಿಸಿದ್ದರು. ಅವರನ್ನೆಲ್ಲ ನಿಯಂತ್ರಿಸಿ, ಹುಡುಕಾಟ ನಡೆಸುವುದು ಕಷ್ಟದಾಯಕ ವಾಗಿತ್ತು ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ದಾರಿ ತೋರಿದ್ದ ಶ್ವಾನ!

ಪ್ರಕರಣದಲ್ಲಿ ಶ್ವಾನದಳವು ಪ್ರಮುಖ ಪಾತ್ರ ವಹಿಸಿತ್ತು  ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು ಹೇಳುತ್ತಾರೆ. ಶ್ವಾನವು ಯಾವ ದಾರಿಯತ್ತ ನಮ್ಮನ್ನು ಒಂದಷ್ಟು ದೂರ ಕರೆದುಕೊಂಡು ಹೋಗಿತ್ತೋ, ಅದೇ ದಾರಿಯಲ್ಲಿ ಆದರೆ ಸಾಕಷ್ಟು ದೂರದಲ್ಲಿ  ಆರೋಪಿ ನಮಗೆ ಸಿಕ್ಕಿದ. ಶ್ವಾನದಳ ಅದರ ಕೆಲಸವನ್ನು ಸಮರ್ಥವಾಗಿಯೇ ಮಾಡಿದೆ ಎಂದರು.

ಬಾಲಕಿ ತಾಯಿಗೆ ಶಾಸಕ ಸಾಂತ್ವನ

ಮಡಿಕೇರಿ: ಕೊಲೆಯಾದ ಬಾಲಕಿಯ ತಾಯಿಯನ್ನು ಶಾಸಕ ಡಾ.ಮಂತರ್‌ಗೌಡ ಮೈಸೂರಿನ ಆಸ್ಪತ್ರೆಯಲ್ಲಿ ಶನಿವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಆಗುವುದು ನಿಶ್ಚಿತ. ಇಂತಹ ಪ್ರಕರಣಗಳು ಸಮಾಜದಲ್ಲಿ ಮರಕಳಿಸಬಾರದು ಎಂದು ಅವರು ತಿಳಿಸಿದರು.

ಬಾಲಕಿ ತಾಯಿಗೆ ಅಗತ್ಯ ಇರುವ ಚಿಕಿತ್ಸೆಯನ್ನು ಹೆಚ್ಚು ಕಾಳಜಿಯಿಂದ ನೀಡುವಂತೆ ಅವರು ವೈದ್ಯರಿಗೆ ಇದೇ ವೇಳೆ ಅವರು ಸೂಚಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಬಾಲಕಿಯ ಅಕ್ಕನನ್ನೂ ಕೊಲ್ಲುವ ಉದ್ದೇಶ ಹೊಂದಿದ್ದ ಆರೋಪಿ!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ 16 ವರ್ಷದ ಬಾಲಕಿಯ ರುಂಡ ಕತ್ತರಿಸಿ ಕೊಂಡೊಯ್ದಿದ್ದ ಆರೋಪಿ ಮೊನ್ನಂಡ ಪ್ರಕಾಶ್ (33) ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೊಲೆ ನಡೆದ ಸ್ಥಳದಿಂದ ಕೆಲವೇ ಮೀಟರ್‌ ದೂರದಲ್ಲಿ ರುಂಡವನ್ನೂ ಪತ್ತೆ ಹಚ್ಚಿದ್ದಾರೆ.

‘ಆರೋಪಿಯು ಸಮೀಪದ ಕಾಡಿನಲ್ಲಿ ಅವಿತುಕೊಂಡಿರುವುದನ್ನು ಗಮನಿಸಿ ಸುತ್ತುವರೆದು ಬಂಧಿಸಲಾಯಿತು. ಬಳಿಕ ವಿಚಾರಣೆ ನಡೆಸಿ ಬಾಲಕಿಯ ರುಂಡ, ಕೊಲೆಗೆ ಬಳಸಿದ್ದ ಮಚ್ಚು ಹಾಗೂ ಕೋವಿಯನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮದುವೆಯಾಗಬೇಕೆಂಬ ಉದ್ದೇಶದಿಂದ ಆರೋಪಿಯು ಬಾಲಕಿಯ ತಂದೆ, ತಾಯಿಯನ್ನು ಒಪ್ಪಿಸಿ ಗುರುವಾರ ನಿಶ್ಚಿತಾರ್ಥ ಏರ್ಪಡಿಸಿದ್ದ. ಅಲ್ಲಿಗೆ ಬಂದ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಈಗಲೇ ಮದುವೆ ಮಾಡಬಾರದೆಂದು ಎರಡೂ ಕಡೆಯ ಪೋಷಕರ ಮನ ಒಲಿಸಿದ್ದರು. ಅದಕ್ಕೆ ಬಾಲಕಿ ಮತ್ತು ಆರೋಪಿ ಇಬ್ಬರೂ ಒಪ್ಪಿದ್ದರು. ಆದರೆ, ಸಂಜೆ ಮನೆಗೆ ಬಂದ ಆರೋಪಿ 18 ವರ್ಷ ತುಂಬುವವರೆಗೂ ಕಾಯುವುದಕ್ಕೆ ಆಗುವುದಿಲ್ಲ. ಈಗಲೇ ಮದುವೆ ಮಾಡಿಕೊಡಬೇಕು ಎಂದು ಹಠ ಹಿಡಿದು, ಜಗಳ ತೆಗೆದ. ಒಪ್ಪದಿದ್ದಾಗ ಕೋಪಗೊಂಡು ಬಾಲಕಿಯ ಕೊಲೆ ಮಾಡಿದ’ ಎಂದು ವಿವರಿಸಿದರು.

‘ಮದುವೆ ಬದಲಿಗೆ ಶಿಕ್ಷಣ ಕೊಡಿಸಬೇಕೆಂದು ಬಾಲಕಿಯ ಅಕ್ಕ ಒತ್ತಾಯಿಸುತ್ತಿದ್ದರು. ನಿಶ್ಚಿತಾರ್ಥಕ್ಕೂ ಬಂದಿರಲಿಲ್ಲ. ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಮದುವೆ ಮುಂದಕ್ಕೆ ಹೋಗಲು ಆಕೆಯೇ ಕಾರಣ ಎಂದು ಭಾವಿಸಿ, ಅವರನ್ನೂ ಕೊಲ್ಲಲು ಆರೋಪಿ ನಿರ್ಧರಿಸಿ ಕೋವಿಯೊಂದಿಗೆ ಅಲೆಯುತ್ತಿದ್ದ. ಹಾಗಾಗಿ, ಆಕೆಯ ಮನೆಗೂ ಮಫ್ತಿಯಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿತ್ತು’ ಎಂದು ಹೇಳಿದರು.

‘ಬಾಲ್ಯವಿವಾಹದ ನಿಶ್ಚಿತಾರ್ಥ ತಡೆಯಲು ಹೋದ ಅಧಿಕಾರಿಗಳು ಕಾನೂನು ಪಾಲಿಸಿದ್ದಾರೆ. ತಂದೆ, ತಾಯಿಯ ಜೊತೆ ಇರುವುದಾಗಿ ಹೇಳಿದ್ದರಿಂದ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಆಕೆಯ ಇಚ್ಛೆಯ ವಿರುದ್ಧವಾಗಿ ಕರೆದುಕೊಂಡು ಬರಲಾಗದು. ಜೊತೆಗೆ, ಆರೋಪಿಯಿಂದ ಬೆದರಿಕೆ ಇದೆ ಎಂಬ ಮಾಹಿತಿಯನ್ನು ಯಾರೂ ನೀಡಿರಲಿಲ್ಲ. ಮುಂದೆ ಇಂಥ ಪ್ರಕರಣಗಳು ಗಮನಕ್ಕೆ ಬಂದಾಗ ಮತ್ತಷ್ಟು ಎಚ್ಚರಿಕೆ ವಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಆರೋಪಿಯು ರುಂಡ ಕ‌ತ್ತರಿಸಿ, ತನ್ನ ಬಳಿಯೇ ಇಟ್ಟುಕೊಂಡು ಸಾಕಷ್ಟು ಸಮಯ ಪೊದೆಯಲ್ಲೇ ಕುಳಿತಿದ್ದ. ಆತ ಏಕೆ ಕುಳಿತ್ತಿದ್ದ ಎಂಬುದು ಗೊತ್ತಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆರೋಪಿಯ ಜೊತೆಯಲ್ಲಿ ಬಂದಿದ್ದ ಸ್ನೇಹಿತರಿಗೆ ಕೊಲೆ ಬಗ್ಗೆ ಮೊದಲೇ ಗೊತ್ತಿತ್ತು ಎಂಬುದು ತನಿಖೆಯಲ್ಲಿ ಸಾಬೀತಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸದ್ಯ, ಆರೋಪಿಯು ಬೇಗನೇ ಮದುವೆ ಮಾಡಿಕೊಡಿ ಎಂದು ಹೇಳಲು ಬಂದಿದ್ದು, ಅದಕ್ಕೆ ಒಪ್ಪದಿದ್ದಾಗ ಬಾಲಕಿಯ ಮನೆಯಲ್ಲೇ ಇದ್ದ ಮಚ್ಚನ್ನು ತೆಗೆದುಕೊಂಡು ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದರು.

ಬಾಲಕಿ ಕೊಲೆಗೆ ಖಂಡನೆ

ಮೈಸೂರು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಪ್ರಕಾಶ್‌ ಎಂಬಾತ 16 ವರ್ಷದ ಮೀನಾ ಎಂಬಾಕೆಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾದ ಭೀಕರ ಘಟನೆ ಬಗ್ಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ತೀವ್ರವಾಗಿ ಖಂಡಿಸಿದೆ ಹಾಗೂ ಆಘಾತವನ್ನು ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸೀಮಾ ಜಿ.ಎಸ್, ‘ಸಮಾಜದಲ್ಲಿ ಇಂತಹ ದುಷ್ಕೃತ್ಯಗಳು ಹೆಚ್ಚಾಗುವುದಕ್ಕೆ ನೈತಿಕ ಮೌಲ್ಯಗಳ ಕುಸಿತ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಹಿಂಸೆ, ಕ್ರೌರ್ಯ ಮತ್ತು ಅಶ್ಲೀಲತೆಯ ವೈಭವೀಕರಣ ಕಾರಣವಾಗಿದೆ’ ಎಂದು ದೂರಿದ್ದಾರೆ.

‘ಪೋಷಕರು ಊಳಿಗಮಾನ್ಯ ಮೌಲ್ಯಗಳ ಪ್ರಭಾವ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ, ತಮ್ಮ ಹೆಣ್ಣು ಮಕ್ಕಳ ವಿವಾಹವನ್ನು ಬಾಲ್ಯದಲ್ಲೇ ಮಾಡುವ ಮನಸ್ಥಿತಿಯು ಇನ್ನೂ ಬದಲಾಗಿಲ್ಲ. ಈ ಸಂದರ್ಭದಲ್ಲಿ ಸರ್ಕಾರವು ಪೋಷಕರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಅಗತ್ಯವಾಗಿದೆ. ಹೆಣ್ಣು ಮಕ್ಕಳು ಇಂತಹ ಸಮಸ್ಯೆಗಳನ್ನು ಅರಿತು, ಎದುರಿಸುವಂಥ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕು’ ಎಂದಿದ್ದಾರೆ.

‘ಸಮಾಜದಲ್ಲಿ ಸಾಂಸ್ಕೃತಿಕ ಅಧಃಪತನವಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಪಠ್ಯ ಪುಸ್ತಕಗಳಲ್ಲಿಯೂ ಮೌಲ್ಯಯುತ ಶಿಕ್ಷಣವನ್ನು ಅಳವಡಿಸಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿ– ಯುವಜನರಲ್ಲಿ ಬೆಳೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೊಡಗಿನ ಘಟನೆಯಲ್ಲಿ ಬಂಧಿಸಿರುವ ಆರೋಪಿಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT