ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು ಬಳಿ ಕೇರಳ ವ್ಯಕ್ತಿಯ ಕಾರು ಅಡ್ಡಗಟ್ಟಿ ₹50 ಲಕ್ಷ ‌ದರೋಡೆ

10ರಿಂದ 15 ಮಂದಿಯ ತಂಡವು 3 ವಾಹನಗಳಲ್ಲಿ ಬಂದು ಅಡ್ಡಗಟ್ಟಿ ಕಾರಿನ ಸಮೇತ ₹ 50 ಲಕ್ಷ ನಗದನ್ನು ದೋಚಿದೆ.
Published 9 ಡಿಸೆಂಬರ್ 2023, 15:25 IST
Last Updated 9 ಡಿಸೆಂಬರ್ 2023, 15:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಮೀಪದ ದೇವರಪುರ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಕೇರಳದ ಕೆ.ಶಂಜಾದ್ ಅವರ ಕಾರನ್ನು 10ರಿಂದ 15 ಮಂದಿಯ ತಂಡವು 3 ವಾಹನಗಳಲ್ಲಿ ಬಂದು ಅಡ್ಡಗಟ್ಟಿ ಕಾರಿನ ಸಮೇತ ₹ 50 ಲಕ್ಷ ನಗದನ್ನು ದೋಚಿದೆ.

‘ಕೆ.ಶಂಜಾದ್ ಅವರು ತಮ್ಮ ಬಳಿ ಇದ್ದ 750 ಗ್ರಾಂ ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾಡಿ, ಅದನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಸ್ನೇಹಿತ ಅಫ್ನು ಎಂಬುವವರೊಂದಿಗೆ ಕೇರಳದ ಮಣಪುರಂನಿಂದ ಹೊರಟಿದ್ದರು.

ಶುಕ್ರವಾರ ಚಿನ್ನದಗಟ್ಟಿಯನ್ನು ಮೈಸೂರಿನ ಅಶೋಕಪುರಂನಲ್ಲಿ ಮಾರಾಟ ಮಾಡಿ, ₹ 50 ಲಕ್ಷ ನಗದು ಹಣದೊಂದಿಗೆ ಕೇರಳದತ್ತ ವಾಪಸ್ ಹೊರಟಿದ್ದರು. ಶನಿವಾರ ನಸುಕಿನ 2 ಗಂಟೆಯ ಸುಮಾರಿನಲ್ಲಿ ದೇವರಪುರದ ಬಳಿ ರಸ್ತೆಗೆ ಅಡ್ಡಲಾಗಿ ವಾಹನವೊಂದನ್ನು ನಿಲ್ಲಿಸಿ ಅಡ್ಡಗಟ್ಟಲಾಯಿತು.

ಹಿಂದಿನಿಂದ 3 ವಾಹನದಲ್ಲಿ ಬಂದ ಸುಮಾರು 10ರಿಂದ 15 ಮಂದಿಯ ಡಕಾಯಿತಿದಾರರು ಕಾರಿನ ಸಮೇತ ಕೆ.ಶಂಜಾದ್ ಹಾಗೂ ಅಫ್ನು ಅವರನ್ನು ಅಪಹರಿಸಿ, ಸುಮಾರು 30ರಿಂದ 40 ನಿಮಿಷ ಕಾರಿನಲ್ಲೇ ಓಡಾಡಿಸಿ, ಹಲ್ಲೆ ನಡೆಸಿತು. ನಂತರ ಕೆಳಗೆ ಇಳಿಸಿ, ಕಾರು ಹಾಗೂ ಹಣದೊಂದಿಗೆ ಡಕಾಯಿತರ ಗುಂಪು ಪರಾರಿಯಾಯಿತು.

ಶಂಜಾದ್ ಹಾಗೂ ಅಫ್ನು ಬೆಳಿಗ್ಗೆಯವರೆಗೂ ರಸ್ತೆಯಲ್ಲಿ ನಡೆಯುತ್ತ ದಿನಪತ್ರಿಕೆ ಸಾಗಿಸುತ್ತಿದ್ದ ವಾಹನದ ಚಾಲಕನ ನೆರವು ಪಡೆದು, ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ನಂತರ, ಶೋಧಕಾರ್ಯ ನಡೆಸಿದಾಗ ಶಂಜಾದ್ ಅವರ ಕಾರು ವಿರಾಜಪೇಟೆ ಸಮೀಪದ ಕೊಳ್ತೋಡ್ ಬೈಗೋಡು ಗ್ರಾಮದ ಸಮೀಪ ಪತ್ತೆಯಾಯಿತು‌’ ಎಂದು ಪೊಲೀಸರು ತಿಳಿಸಿದ್ದಾರೆ.

ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸ್ಥಳ ಪರಿಶೀಲನೆ ನಡೆಸಿದರು.

‘ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ 3 ಇನ್‌ಸ್ಪೆಕ್ಟರ್ ಹಾಗೂ 7 ಸಬ್‌ಇನ್‌ಸ್ಪೆಕ್ಟರ್‌ಗಳ ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಪ್ರಕರಣ ಗೋಣಿಕೊಪ್ಪಲು ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT