ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಗ್ನಿವೀರ್‘ ಸೇನಾ ನೇಮಕಾತಿ ರ‍್ಯಾಲಿ: ಲೋಪವಾಗದಂತೆ ಎಚ್ಚರ ವಹಿಸಲು ಡಿಸಿ ಸೂಚನೆ

Published 22 ಜೂನ್ 2024, 4:33 IST
Last Updated 22 ಜೂನ್ 2024, 4:33 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 27ರಿಂದ ಜುಲೈ 2ರವರೆಗೆ ನಡೆಯಲಿರುವ ‘ಅಗ್ನಿವೀರ್’ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಮ್ಮ ಕಚೇರಿಯಲ್ಲಿ ಅವರು ಶುಕ್ರವಾರ ಅಗ್ನಿವೀರ್‌ ಸೇನಾ ನೇಮಕಾತಿ ರ‍್ಯಾಲಿ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇದೊಂದು ಅತಿ ವಿಶಿಷ್ಟ ಹಾಗೂ ಅಪರೂಪದ ರ‍್ಯಾಲಿ. ಇಂತಹದ್ದೊಂದು ರ‍್ಯಾಲಿ ಯಶಸ್ವಿಯಾಗಲು ಎಲ್ಲ ಇಲಾಖೆಗಳ ಸಹಕಾರ ಬೇಕೆ ಬೇಕು. ಹಾಗಾಗಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಹೆಚ್ಚು ಸಮನ್ವಯದಿಂದ ಕಾರ್ಯನಿರ್ವಹಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಮುಖ್ಯವಾಗಿ, ಸೈನಿಕ ಕಲ್ಯಾಣ ಇಲಾಖೆಯು ಈ ಕುರಿತು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಯಾರಿಗೂ ತೊಂದರೆಯಾಗದಂತೆ ಗಮನಹರಿಸಬೇಕು. ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಸೈನಿಕ ಭರ್ತಿ ಕಾರ್ಯಾಲಯದ ನಿರ್ದೇಶಕ ಕರ್ನಲ್ ಗೌರವ್ ತಾಪ ಮಾತನಾಡಿ, ‘ರ‍್ಯಾಲಿಯಲ್ಲಿ ಹೆಚ್ಚು ಮಂದಿ ಭಾಗವಹಿಸುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕಿದೆ’ ಎಂದು ಹೇಳಿದರು.

ಲೋಕೋಪಯೋಗಿ, ಸೆಸ್ಕ್, ಪದವಿಪೂರ್ವ ಶಿಕ್ಷಣ, ಅಗ್ನಿಶಾಮಕ ದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೈದ್ಯಕೀಯ ಶಿಕ್ಷಣ, ಸೆಸ್ಕ್, ಬಿಎಸ್‍ಎನ್‍ಎಲ್ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಹಕಾರ ನೀಡಬೇಕು ಎಂದರು.

ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಮೇಜರ್ ಬಾಲಸುಬ್ರಹ್ಮಣ್ಯಂ ಮಾತನಾಡಿ, ‘ಸುಮಾರು 1,700ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ದೈಹಿಕ ಪರೀಕ್ಷೆ ನಡೆಸಲಾಗುವುದು. ಯಾರು ಯಾರು ಅರ್ಹತೆ ಪಡೆದಿದ್ದಾರೋ ಅವರಿಗೆಲ್ಲ ಈಗಾಗಲೇ ವಿಷಯ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ನಗರಸಭೆ ಪೌರಾಯುಕ್ತ ವಿಜಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾ ಆಚಾರ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಭಾರತೀಯ ದೂರ ಸಂಚಾರ ನಿಗಮದ ವ್ಯವಸ್ಥಾಪಕ ಪ್ರದೀಪ್ ಸಭೆಯಲ್ಲಿ ಭಾಗವಹಿಸಿದ್ದರು.

ಈಗಾಗಲೇ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಪ್ರವೇಶ ಪ‍ರೀಕ್ಷೆ ನಡೆದಿದೆ. ಇದರಲ್ಲಿ ಅರ್ಹತೆ ಪಡೆದುಕೊಂಡವರಿಗೆ ಮಾತ್ರವೇ ಇಲ್ಲಿ ದೈಹಿಕ ಪರೀಕ್ಷೆ, ದಾಖಲಾತಿಗಳ ಪರಿಶೀಲನೆಗಳು ನಡೆಯಲಿವೆ. ಅರ್ಹತೆ ಹೊಂದಿರುವ ಎಲ್ಲರಿಗೂ ಈಗಾಗಲೇ ಭಾರತೀಯ ಸೇನೆ ಮಾಹಿತಿ ನೀಡಿದೆ. ಅಂತಹವರು ಮಾತ್ರವೇ ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕಿದೆ.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಮಡಿಕೇರಿಯಲ್ಲಿ ನಡೆಯಲಿದೆ ಸೇನಾ ನೇಮಕಾತಿ ರ‍‍್ಯಾಲಿ ‍ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಅವಕಾಶ ಸುಮಾರು 1,700ಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT