ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ, ಮಾನವ ಸಂಘರ್ಷ: ‘ಸುಪ್ರೀಂ’ಗೆ ಅರ್ಜಿ

ಸಾಮಾಜಿಕ ಹೋರಾಟಗಾರ ಸಂಕೇತ್‌ ಪೂವಯ್ಯ ನಿರ್ಧಾರ
Last Updated 11 ಫೆಬ್ರುವರಿ 2020, 13:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಆನೆ, ಮಾನವ ಸಂಘರ್ಷ ಮಿತಿಮೀರಿದ್ದು ಅದರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಂಕೇತ್‌ ಪೂವಯ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರ್ಚ್‌ 2ನೇ ವಾರದಲ್ಲಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗುವುದು. ಅದಕ್ಕೆ ಎಲ್ಲ ತಯಾರಿಯನ್ನು ನಡೆಸಲಾಗಿದೆ. ಮನುಷ್ಯರ ಜೀವಹಾನಿ, ಬೆಳೆ ಹಾನಿಯ ವಿವರವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹತ್ತು ವರ್ಷಗಳಲ್ಲಿ 39 ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಜೀವಕಳೆದುಕೊಂಡವರು ಬಹುತೇಕ ಕಾರ್ಮಿಕರೆ. ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಕೊಡಗಿನಲ್ಲಿ ಕಾಡಾನೆ– ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದು ಸಂಕೇತ್‌ ದೂರಿದರು.

‘ತಜ್ಞರ ಸಮಿತಿ ರಚಿಸಿ ಶಾಶ್ವತ ಪರಿಹಾರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು. ವೈಜ್ಞಾನಿಕ ಮಾದರಿಯಲ್ಲಿ ರೈಲ್ವೆ ಹಳಿ ಅಳವಡಿಕೆ ಹಾಗೂ ಆನೆ ಕಂದಕ ನಿರ್ಮಾಣಕ್ಕೂ ಕೋರಲಾಗುವುದು’ ಎಂದು ಅವರು ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. 11,200 ಮತಗಳು ಬಿದ್ದಿದ್ದವು. ಅವರ ಋಣ ತೀರಿಸುವುದು ನನ್ನ ಕರ್ತವ್ಯ. ಆಡಳಿತ ನಡೆಸುತ್ತಿರುವ ಸರ್ಕಾರಗಳು ಜನರ ಸಮಸ್ಯೆ ಪರಿಹರಿಸಲು ಸಂಪೂರ್ಣ ವಿಫಲವಾಗಿದೆ. ರಾಜ್ಯ ನಾಲ್ಕೈದು ಜಿಲ್ಲೆಗಳಲ್ಲಿ ಆನೆ ಹಾವಳಿಯಿದ್ದರೂ ಅರಣ್ಯ ಸಚಿವರು ಮಾತ್ರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿಲ್ಲ. ಜಿಲ್ಲೆಯ ರೈತರ ಹಾಗೂ ಕಾರ್ಮಿಕರ ಸಮಸ್ಯೆ ಆಲಿಸುತ್ತಿಲ್ಲ’ ಎಂದು ಹೇಳಿದರು.

‘ಮಾಕುಟ್ಟ, ಭಾಗಮಂಡಲ ವಲಯ, ಸಂಪಾಜೆ, ಕುಶಾಲನಗರ, ಪೊನ್ನಂಪೇಟೆ, ವಿರಾಜಪೇಟೆ, ಶ್ರೀಮಂಗಲ... ಹೀಗೆ ಜಿಲ್ಲೆಯಲ್ಲಿ ಏಳು ಅರಣ್ಯ ವಲಯಗಳಿವೆ. ಈ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಉಪಟಳ ತೀವ್ರವಾಗಿದೆ. ಕಾಡಾನೆಗಳು ತೋಟದ ಆನೆಗಳಾಗಿ ಬದಲಾಗಿವೆ. ತೋಟದಲ್ಲಿ ಬೆಳೆದ ಆನೆಗಳು ಕಾಡಾನ್ನೇ ನೋಡಿಲ್ಲ. ನಾಡಿಗೆ ಬಂದ ಎಲ್ಲ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವಂತೆ ಮನವಿ ಮಾಡಿದರೆ ಎಲ್ಲ ಆನೆಗಳನ್ನೂ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ಕಡಿಮೆ ಮೊತ್ತದ ಪರಿಹಾರ:‘ಆನೆ ದಾಳಿಯಿಂದ ಜೀವ ಕಳೆದುಕೊಂಡರೆ ಕೇವಲ ₹ 5 ಲಕ್ಷ ಪರಿಹಾರ ನೀಡಿ ಅರಣ್ಯಾಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಆನೆ ದಾಳಿಯಿಂದ ಸತ್ತರೆ ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಕಾಡಾನೆ ದಾಳಿಯಿಂದ ಕಂಗೆಟ್ಟ ರೈತರು ಕಾಡಂಚಿನ ಗ್ರಾಮಗಳಲ್ಲಿ ತನ್ನ ಹೊಲ– ಗದ್ದೆಗಳಲ್ಲಿ ಭತ್ತ ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ವಕೀಲರ ಮೂಲಕ ಸುಪ್ರೀಂ ಕೋರ್ಟ್‌ ಗಮನಕ್ಕೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

‘ಪರಿಹಾರ ನೀಡಲು ಕಾನೂನಿನಲ್ಲಿ ಹಲವು ತೊಡಕುಗಳಿವೆ. ಇವುಗಳನ್ನು ನಿವಾರಿಸಲು ಕೋರ್ಟ್‌, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕಿದೆ. ಅಮ್ಮತ್ತಿ, ಶ್ರೀಮಂಗಲ, ಕಟ್ಟೆಪುರ, ನೀರುಗುಂದ, ನಿಲುವಾಗಿಲು, ಚೆಂಬಳೂರು, ಮಾದ್ರೆ, ದುಂಡಳ್ಳಿ, ನಿಡ್ತ, ಎಳನೀರುಗುಂಡಿ, ಹಿತ್ಲುಕೇರಿ, ಮಾಲಂಬಿ, ಕಣಗಾಳು, ದೊಡ್ಡಳ್ಳಿ, ಸಂಗಯ್ಯಪುರ, ಗಣನೂರು, ನೆಲ್ಯಹುದಿಕೇರಿ, ಚೇಲಾವರ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ’ ಎಂದು ಹೇಳಿದರು.

‘ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಸ್ಥರು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದರೆ ವಾಪಸ್‌ ಬರುವ ಖಾತ್ರಿಯೂ ಇರುವುದಿಲ್ಲ. ಹೀಗಿದೆ ಜಿಲ್ಲೆಯ ಕಾರ್ಮಿಕರ ಸ್ಥಿತಿ’ ಎಂದು ಸಂಕೇತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT