ಗುರುವಾರ , ಏಪ್ರಿಲ್ 22, 2021
26 °C

ಪೊನ್ನಂಪೇಟೆ: ನರಭಕ್ಷಕ ಹುಲಿ ಕೊಲ್ಲಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ: ಮಂಗಳವಾರ ಬೆಳಿಗ್ಗೆ 11 ಗಂಟೆ ಒಳಗಾಗಿ ನರಭಕ್ಷಕ ಹುಲಿಯನ್ನು ಕೊಲ್ಲುವುದಾಗಿ ಭರವಸೆ ನೀಡಿದ್ದ ಅರಣ್ಯ ಇಲಾಖೆ ವಿಫಲವಾಗಿರುವ ಹಿನ್ನೆಲೆ ಪ್ರತಿಭಟನೆಯನ್ನು ಮುಂದುವರಿಸಲು ರೈತ ಸಂಘದ ಪ್ರಮುಖರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನಿಸಿದರು.

ಮಾನವ ವನ್ಯ ಪ್ರಾಣಿ ಸಂಘರ್ಷಕ್ಕೆ ಪರಿಹಾರ ಸಿಗದಿರುವುದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಆರೋಪಿಸಿದರು.

ಜನರ ಹಾಗೂ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಹುಲಿಯನ್ನು ಕೊಲ್ಲುವಂತೆ ಒತ್ತಾಯಿಸಿ, ಬೆಳ್ಳೂರು ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹುಲಿಯನ್ನು ಕೊಂದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮಾನವ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಹೇಳಿದರು.

ಮಂಗಳವಾರ ಬೆಳಿಗ್ಗೆ 11 ಗಂಟೆಯೊಳಗಾಗಿ ಹುಲಿಯನ್ನು ಕೊಂದು ರೈತರ ಮುಂದಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಗಳು ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳು ವಿಫಲವಾಗಿದ್ದಾರೆ. ಹುಲಿ ಸೆರೆಯಾಗಿದೆ, ಹುಲಿಗೆ ಗುಂಡುಹೊಡೆಯಲಾಗಿದೆ ಮುಂತಾದ ಗೊಂದಲಮಯ ಹೇಳಿಕೆಗಳನ್ನು ನೀಡುವ ಮೂಲಕ ಹುಲಿ ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬದಲು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಂತಿಯುತವಾಗಿ ರೈತರು ಪ್ರತಿಭಟನೆಗೆ ಮುಂದಾದ ಸಂದರ್ಭ ತಹಶೀಲ್ದಾರರು 144 ಸೆಕ್ಷನ್ ಜಾರಿಗಿಳಿಸುವ ಮೂಲಕ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ರೈತರು ಅಧಿಕಾರಿಗಳ ಬೆದರಿಕೆಗಳಿಗೆ ಆತ್ಮಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ನಿಷೇಧಾಜ್ಞೆಯನ್ನು ಅಧಿಕಾರಿಗಳು ಮನೆಯಲ್ಲಿಟ್ಟುಕೊಳ್ಳಲಿ. ರೈತರು ಹೋರಾಟವನ್ನು ಶಾಂತಿಯುತವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.

ರೈತರ ಹೋರಾಟದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ, ಯಾವುದೇ ರಾಜಕಾರಣಿಗಳ ಅವಶ್ಯಕತೆ ರೈತರಿಗಿಲ್ಲ. ರೈತರು ಒಗ್ಗಟ್ಟು ಪ್ರದರ್ಶನ ಮಾಡಿದರೆ ಸಾಕು. ಹೋರಾಟವನ್ನು ಕಾನೂನಾತ್ಮಕವಾಗಿ ರೂಪಿಸಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಹುಲಿ ನರಭಕ್ಷಕ ಎಂದು ತಿಳಿದ ಮೇಲೂ ಅಧಿಕಾರಿಗಳು ಹುಲಿಯನ್ನು ಕೊಲ್ಲಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಹೋರಾಟದಲ್ಲಿ ಪ್ರತಿಯೊಬ್ಬ ಗ್ರಾಮಸ್ಥನ ಕೊಡುಗೆ ಇರಬೇಕು. ಈಗ ನಡೆಯುತ್ತಿರುವ ಹೋರಾಟ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳು ಬಂದ್ ಮಾಡಿದರೆ ಮಾತ್ರ ಹೋರಾಟ ತೀವ್ರತೆ ಪಡೆದುಕೊಳ್ಳಲಿದೆ. ಆಡಳಿತ ವ್ಯವಸ್ಥೆ ರೈತರಲ್ಲಿ ಗೊಂದಲ ಸೃಷ್ಟಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಬದುಕುವ ಹಕ್ಕೆ ಎಲ್ಲರಿಗೂ ಇದೆ ಎಂದರು.

ಹೋರಾಟಗಾರರು ಎಲ್ಲಿ?: ಜಿಲ್ಲಾ ಪಂಚಾಯಿತಿ ಸದಸ್ಯ ಶಿವು ಮಾದಪ್ಪ ಮಾತನಾಡಿ, ಹಲವು ವರ್ಷಗಳ ಹಿಂದೆ ಅರಣ್ಯ ಅಂಚಿನಲ್ಲಿ ವಾಸ ಮಾಡುತ್ತಿದ್ದ ಬುಡಕಟ್ಟು ಜನಾಂಗದವರನ್ನು ಸರ್ಕಾರವೇ ಮೈಸೂರು ಹಾಗೂ ಹುಣಸೂರು ಭಾಗಗಳಿಗೆ ಸ್ಥಳಾಂತರ ಮಾಡುವ ಸಂದರ್ಭ ಜನರು ಎಚ್ಚೆತ್ತುಕೊಳ್ಳಬೇಕಿತ್ತು. ಅವರ ಬೆಂಬಲಕ್ಕೆ ಯಾರೂ ಇರಲಿಲ್ಲ. ಕಾರ್ಮಿಕರ ಪರ ಎಂದು ಸಣ್ಣಪುಟ್ಟ ವಿಷಯಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುವ ಸಂಘಗಳು ಎಲ್ಲಿ ಹೋಗಿದೆ. ಹುಲಿಯಿಂದ ಸಮಾಜದಲ್ಲಿರುವ ಎಲ್ಲಾ ಹಂತದ ಜನರಿಗೂ ತೊಂದರೆಯಾಗಿದೆ. ಪೊನ್ನಂಪೇಟೆ ತಾಲ್ಲೂಕು ರಚನೆ ಸಂದರ್ಭ 100ಕ್ಕೂ ಅಧಿಕ ಬ್ಯಾನರ್‌ಗಳು ಎಲ್ಲೆಡೆ ಕಂಡುಬರುತ್ತಿತ್ತು ಹೋರಾಟಗಾರರು ಎಲ್ಲಿ ಹೋದರು ಎಂದು ಪ್ರಶ್ನಿಸಿದರು.

ಸ್ಥಳೀಯ ಪುಚ್ಚಿಮಾಡ ಅಶೋಕ್ ಮಾತನಾಡಿ, ರೈತರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ರೈತರನ್ನು ದಡ್ಡರೆಂದು ತಿಳಿದುಕೊಂಡಿದ್ದಾರೆ. ರೈತರಿಗೆ ಎಲ್ಲವೂ ಗೊತ್ತಿದೆ. ಶಾಂತಿಯಿಂದ ಹೋರಾಟ ಮಾಡುತ್ತಿರುವವರನ್ನು ಕಡೆಗಣನೆ ಮಾಡಬಾರದು. ಹೋರಾಟದಲ್ಲಿ ರಾಜಕಾರಣ ಬೇಡ, ಮೊದಲು ರೈತ ನಂತರ ರಾಜಕೀಯ. ಶಾಶ್ವತ ಪರಿಹಾರಕ್ಕೆ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಸ್ಥಳೀಯರಾದ ಕದ್ದಣಿಯಂಡ ಹರೀಶ್ ಮಾತನಾಡಿ, ಸರ್ಕಾರ ಹಾಗೂ ಅಧಿಕಾರಿಗಳು ಜನರುನ್ನು ಕಡೆಗಣಿಸಿದ್ದಾರೆ. ಸೋಮವಾರ ಕೆಲವು ಅಧಿಕಾರಿಗಳು ಹುಲಿಗೆ ಗುಂಡು ಹೊಡೆಯಲಾಗಿದೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಪ್ರತಿಭಟನೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಜನಪ್ರತಿನಿಧಿಗಳು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಕಚೇರಿಗೆ ಜನರೇ ಬೀಗ ಹಾಕಬೇಕು. ಮತ ಹಾಕಿದ ನಂತರ ಜನತೆಯ ಜವಾಬ್ದಾರಿ ಮುಗಿದಿಲ್ಲ. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದರು.

ವಾಹನ ಜಾಥಾ, ಹೆದ್ದಾರಿ ತಡೆ ತಡೆ ಪ್ರತಿಭಟನೆ: ಅರಣ್ಯ ಇಲಾಖೆ ಮಂಗಳವಾರ ಹುಲಿ ಹಿಡಿಯಲು ವಿಫಲವಾದಲ್ಲಿ ಬುಧವಾರ(10 ಮಾರ್ಚ್)ರಂದು ಬೆಳಗ್ಗೆ 10 ಗಂಟೆಗೆ ಕಾನೂರು ಜಂಕ್ಷನ್‍ನಿಂದ ವಾಹನ ಜಾಥಾ ಮೂಲಕ ಮತ್ತಿಗೋಡು ವನ್ಯಜೀವಿ ವಲಯ ಅರಣ್ಯ ಕಚೇರಿ ಎದುರು ಹೆದ್ದಾರೆ ತಡೆ ನಡೆಸಲಾಗುವುದು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ ತಿಳಿಸಿದ್ದಾರೆ.

ಗೊಂದಲ ಸೃಷ್ಟಿಸಿದ ಹೇಳಿಕೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿ ಮಂದಯ್ಯ ಮಾತನಾಡುತ್ತಿದ್ದ ಸಂದರ್ಭ ಹುಲಿಯನ್ನು ಸೆರೆಹಿಡಿಯಲು ಕ್ಷೇತ್ರದ ಶಾಸಕರ ಪ್ರಯತ್ನದಿಂದ ರಾತ್ರೋರಾತ್ರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಆದೇಶ ಹೊರಡಿಸಲಾಯಿತು ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳಿಗೆ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ, ಜನರ ಪ್ರತಿಭಟನೆಗೆ ಮಣಿದು ಸರ್ಕಾರ ಅನುಮತಿ ನೀಡಿದೆ. ಅನುಮತಿ ನೀಡಿರುವ ವಿಚಾರದಲ್ಲಿ ಜನ ಪ್ರತಿನಿಧಿಗಳ ಪಾತ್ರವಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗುತ್ತಿದ್ದಂತೆ ಕಟ್ಟಿ ಮಂದಯ್ಯ ಮಾತು ಬದಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು