ಗುರುವಾರ , ಜನವರಿ 21, 2021
23 °C
ಕೇರಳದಲ್ಲಿ ಬಾತುಕೋಳಿಗಳಲ್ಲಿ ಕೋಳಿಗೆ ಶೀತಜ್ವರ; ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

ಕೇರಳದಲ್ಲಿ ಹಕ್ಕಿಜ್ವರ: ಕೊಡಗು ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನೆರೆಯ ಕೇರಳ ರಾಜ್ಯದ ಕೊಟ್ಟಾಯಂ ಮತ್ತು ಅಲಪ್ಪುಳ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ಶೀತಜ್ವರ ಕಂಡುಬಂದಿದೆ. ಕೊಡಗು ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೋಳಿ ಶೀತಜ್ವರ (ಹಕ್ಕಿ ಜ್ವರ) ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಇದನ್ನೂ ಓದಿ: ಹಕ್ಕಿ ಜ್ವರ ಭೀತಿ: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ

ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಭಾಗದಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ, ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವ ಕೋಳಿ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯ ವಾಹನಗಳನ್ನು ಪರಿಶೀಲಿಸುವುದರ ಜೊತೆಗೆ, ಸಾಗಾಣಿಕೆ ವಾಹನಗಳನ್ನು ಸ್ಯಾನಿಟೈಸರ್ ಮಾಡಿ ಜಿಲ್ಲೆಯ ಒಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಚೆಕ್‍ಪೋಸ್ಟ್‌ಗಳ ಸ್ಥಾಪನೆ, ಅಗತ್ಯ ಸಹಕಾರಕ್ಕೆ ಅರಣ್ಯ, ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳು ಸಹ
ಕಾರ ನೀಡಲಿದ್ದು, ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್ ಭಟ್ ಅವರು, ಪಶುಪಾಲನಾ ಇಲಾಖೆಯಿಂದ ಹಕ್ಕಿಜ್ವರ ನಿಯಂತ್ರಣ ಮತ್ತು ನಿರ್ವಹಣೆ ಮಾರ್ಗಸೂಚಿಯ ಅನ್ವಯ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರ್‍ಯಾಪಿಡ್‌ ರೆಸ್ಪಾನ್ಸ್ ತಂಡ ರಚಿಸಿದೆ ಎಂದು ಹೇಳಿದರು.

ಇದನ್ನೂ ಓದಿ: PHOTOS: ಕೋವಿಡ್-19 ನಡುವೆ ಹಕ್ಕಿ ಜ್ವರ ಭೀತಿ; ಎಚ್ಚರಿಕೆ ಘೋಷಿಸಿದ ಕೇಂದ್ರ ಸರ್ಕಾರ

ಜಿಲ್ಲೆಯ ಕೇರಳ ರಾಜ್ಯದ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅರಣ್ಯ, ಪೊಲೀಸ್, ಸಾರಿಗೆ, ಆರೋಗ್ಯ, ಪಂಚಾಯತ್‌ರಾಜ್ ಇಲಾಖೆಗಳ ಸಹಕಾರ ಅಗತ್ಯ ಎಂದು ಕೋರಿದರು.

ಅಸ್ವಾಭಾವಿಕವಾಗಿ ಕೋಳಿ ಅಥವಾ ವನ್ಯ ಪಕ್ಷಿಗಳ ಮರಣ ಕಂಡುಬಂದಲ್ಲಿ ಈ ಬಗ್ಗೆ ಗಮನಹರಿಸಿ ವರದಿ ಸಲ್ಲಿಸಲಾಗುವುದು ಎಂದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಚಿದಾನಂದ ಅವರು, ಹಕ್ಕಿಜ್ವರವು ಪಕ್ಷಿಗಳು ಹಾಗೂ ಕೋಳಿ ಮತ್ತಿತರ ಮೂಲಕ ಹರಡುವ ಸಾಧ್ಯತೆ ಇದ್ದು, ಕೇರಳ ರಾಜ್ಯದಲ್ಲಿ ಕಂಡು ಬಂದಿರುವುದರಿಂದ ಕೇರಳ ರಾಜ್ಯದ ಗಡಿಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೋಳಿ ಮತ್ತು ಪಕ್ಷಿಗಳ ರಕ್ತ ಹಾಗೂ ಇಕ್ಕೆ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಜೀಮ ತಬಸೀರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ಡಾ.ಹರೀಶ್, ಡಾ.ಬಾದಾಮಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು