ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | 7 ತಿಂಗಳುಗಳಲ್ಲಿ ₹194.90 ಕೋಟಿ ಬಿಡುಗಡೆ; ಶಾಸಕ ಎ.ಎಸ್.ಪೊನ್ನಣ್ಣ

ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಎನ್.ಎಸ್.ಭೋಸರಾಜು
Published 24 ಜನವರಿ 2024, 6:58 IST
Last Updated 24 ಜನವರಿ 2024, 6:58 IST
ಅಕ್ಷರ ಗಾತ್ರ

ವಿರಾಜಪೇಟೆ: ಚುನಾವಣೆಯ ಬಳಿಕ ಕಳೆದ 7 ತಿಂಗಳುಗಳಲ್ಲಿ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 194.90 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ವಿರಾಜಪೇಟೆ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ₹ 58.28 ಕೋಟಿ, ದೊಡ್ಡಟ್ಟಿ ಚೌಕಿಯಿಂದ ಕಾವೇರಿ ಕಾಲೇಜಿನವರೆಗೆ ಪಾದಚಾರಿ ರಸ್ತೆ, ಬೀದಿದೀಪಕ್ಕಾಗಿ ₹ 5.74 ಕೋಟಿ, ಗೌರಿಕೆರೆ ಅಭಿವೃದ್ಧಿಗೆ ₹ 1.32 ಕೋಟಿ, ಅರಸುನಗರ ಬೆಟ್ಟಕ್ಕೆ ಹೊಂದಿಕೊಂಡಿರುವ ಮನೆಗಳಿಗೆ ಪಾದಚಾರಿ ಮಾರ್ಗ ಕಾಮಗಾರಿಗೆ ₹ 1.72 ಕೋಟಿ, ಅಂಬೇಡ್ಕರ್ ಭವನದ ಉಳಿಕೆ ಕಾಮಗಾರಿಗಾಗಿ ₹ 25 ಲಕ್ಷ, ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ₹ 2 ಕೋಟಿ, ಪರಿಶಿಷ್ಟ ವರ್ಗದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ₹ 3 ಕೋಟಿ, ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ನೀರಾವರಿ ಇಲಾಖೆಗೆ ₹ 4 ಕೋಟಿ ಅನುದಾನ ಬಿಡುಗಡೆಗೆ ಆದೇಶವಾಗಿದೆ ಎಂದರು.

ಗೋಣಿಕೊಪ್ಪಲು ಬೈಪಾಸ್ ಕಿರುಹೊಳೆಯ ತಡೆಗೋಡೆಗಾಗಿ ₹ 3 ಕೋಟಿ, ವಿರಾಜಪೇಟೆಯ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕಾಗಿ ₹ 22 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 17 ಕೋಟಿ, ದೇವಸ್ಥಾನಗಳ ಅಭಿವೃದ್ಧಿಗೆ ₹ 2 ಕೋಟಿ, ಕ್ರೀಡಾಂಗಣಗಳ ಅಭಿವೃದ್ಧಿಗಾಗಿ ₹ 2 ಕೋಟಿ ಸೇರಿದಂತೆ ಅಂದಾಜು ಒಟ್ಟು ₹ 194.90 ಕೋಟಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಮುಖ್ಯಮಂತ್ರಿಗಳ ಬೇಟಿಯ ಸಂದರ್ಭ ಜಿಲ್ಲೆಯಲ್ಲಿ ಕಾನೂನು ಪದವಿ ಕಾಲೇಜು, ನರ್ಸಿಂಗ್ ಕಾಲೇಜು ಸ್ಥಾಪನೆ ಹಾಗೂ ರಸ್ತೆ ಅಭಿವೃದ್ದಿಗೆ ಪ್ಯಾಕೆಜ್ ಘೋಷಣೆ ಮಾಡಲು ಮನವಿ ಸಲ್ಲಿಸಲಾಗುವುದು ಎಂದರು.

ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯೆ ಎಸ್.ವೀಣಾ ಅಚ್ಚಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರಂಜಿ ಪೂಣಚ್ಚ, ಮುಖಂಡರಾದ ಕೆ.ಬಿ.ಶಾಂತಪ್ಪ ಭಾಗವಹಿಸಿದ್ದರು.

ವಿರಾಜಪೇಟೆ, ಮಡಿಕೇರಿಯಲ್ಲಿ ಸಾರ್ವಜನಿಕ ಸಮಾವೇಶ ಎರಡೂ ಕಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ

‘ಅಭಿವೃದ್ಧಿಯ ದೃಷ್ಟಿಯಿಂದ ಸಿ.ಎಂ ಭೇಟಿಗೆ ಹೆಚ್ಚಿನ ಮಹತ್ವ’ ಜ.25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಪಟ್ಟಣದಲ್ಲಿನ ಶಾಸಕ ಎ.ಎಸ್.ಪೊನ್ನಣ್ಣ ಅವರ ಗೃಹಕಚೇರಿಯಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.25 ರಂದು ಬೆಳಿಗ್ಗೆ 10.30ಕ್ಕೆ ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಡಿಕೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. ‘ರಾಹುಲ್ ಗಾಂಧಿ ಅವರ ಯಾತ್ರೆ ಎಂದರೆ ಹೆದರುತ್ತಾರೆ’ ರಾಹುಲ್ ಗಾಂಧಿ ಅವರ ಯಾತ್ರೆ ಎಂದರೆ ಎಲ್ಲರೂ ಹೆದರುತ್ತಾರೆ. ಹಾಗಾಗಿಯೇ ಅವರು ನಡೆಸುತ್ತಿದ್ದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯನ್ನು ಅಸ್ಸಾಂನಲ್ಲಿ ತಡೆಯಲಾಯಿತು ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು. ‘ಯಾತ್ರೆ ತಡೆದಿದ್ದು ರಾಜಕೀಯ ಪ್ರೇರಿತ ಕ್ರಮ’ ಎಂದು ಟೀಕಿಸಿದ ಅವರು ‘ಯಾತ್ರೆ ಮಾಡಲು ಎಲ್ಲರಿಗೂ ದೇಶದಲ್ಲಿ ಅವಕಾಶ ಇದೆ. ಯಾತ್ರೆ ಮಾಡುವಾಗ ಸರ್ಕಾರಗಳು ಅವಕಾಶ ಕೊಡಬೇಕು’ ಎಂದು ಹೇಳಿದರು. ‘ರಾಮ ಇಡೀ ದೇಶಕ್ಕೆ ಬೇಕಾಗಿರುವ ಆದರ್ಶ ವ್ಯಕ್ತಿ. ರಾಮನ ಬಗ್ಗೆ ಎಲ್ಲರಿಗೂ ಗೌರವ ಇದೆ. ಮಹಾತ್ಮ ಗಾಂಧೀಜಿ ಅವರೂ ಎಲ್ಲ ಧರ್ಮದವರಿಗೂ ರಾಮ ಆದರ್ಶ ವ್ಯಕ್ತಿ ಎಂದಿದ್ದಾರೆ. ಅದರಂತೆ ನಮ್ಮ ಕಡೆಗಳಲ್ಲಿ ನೆನ್ನೆ ಅನೇಕ ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ರಾಮನ ಪೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇಂತಹ ರಾಮ ನಮಗೆ ಬೇಕಾಗಿರುವುದು’ ಎಂದು ಪ್ರತಿಪಾದಿಸಿದರು. ಆದರೆ ಈಗ ದೇಶದಲ್ಲಿ ರಾಜಕೀಯವಾಗಿ ರಾಮನನ್ನು ಒಂದು ಕಡೆ ಸೇರಿಸುವ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನಕ್ಕೆ ಸಿದ್ದರಾಮಯ್ಯ ಅವರ ವಿರೋಧ ಇದೆ. ಸಿದ್ದರಾಮಯ್ಯ ಅವರು ಎಲ್ಲ ಧರ್ಮಕ್ಕೂ ಗೌರವ ಕೊಡುತ್ತಾರೆ. ಎಲ್ಲ ದೇಗುಲಗಳಿಗೂ ಭೇಟಿ ಕೊಡುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT