ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಕೆಸರಿನಿಂದ ಹಸು ರಕ್ಷಿಸಿದ ಬಾಲಕನಿಗೆ ಹೊಯ್ಸಳ ಪ್ರಶಸ್ತಿ

Published 23 ನವೆಂಬರ್ 2023, 5:08 IST
Last Updated 23 ನವೆಂಬರ್ 2023, 5:08 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ 2023-24ನೇ ಸಾಲಿನ ‘ಹೊಯ್ಸಳ ಶೌರ್ಯ ಪ್ರಶಸ್ತಿ’ಗೆ ತಿತಿಮತಿ ಬಳಿಯ ಚೇಣಿಹಡ್ಲು ಹಾಡಿಯ ವೈ.ಡಿ.ಅರ್ಜುನ್ ಸಾಗರ್ ಎಂಬ ಬಾಲಕ ಆಯ್ಕೆಯಾಗಿದ್ದಾನೆ. ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಗೌರವಕ್ಕೆ ಭಾಜನವಾದ ಮೊದಲ ಬುಡಕಟ್ಟು ಜನಾಂಗದ ಬಾಲಕನಾಗಿದ್ದಾನೆ.

ಮೇಯಲು ಬಂದ ಹಸು ಒಂದು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿತ್ತು. ಸಮೀಪದಲ್ಲಿ ಆಟವಾಡಿಕೊಂಡಿದ್ದ 12 ವರ್ಷದ ಬಾಲಕ ಅರ್ಜುನ್ ಸಾಗರ್, ಅದನ್ನು ನೋಡಿ ತನ್ನ ಸ್ನೇಹಿತರೊಂದಿಗೆ ಸೇರಿ ರಕ್ಷಣೆ ಮಾಡಿದ್ದ. ಕೆಸರಿನಿಂದ ಮೇಲೆ ಬರಲು ಹೆಣಗಾಡುತ್ತಿದ್ದ ಹಸುವನ್ನು ನೋಡಿ ಮರುಗಿದ ಅರ್ಜುನ್ ಹೇಗಾದರೂ ಮಾಡಿ ಹಸುವಿನ ಪ್ರಾಣ ರಕ್ಷಿಸಬೇಕೆಂಬ ಛಲದಿಂದ ಸ್ನೇಹಿತರೊಂದಿಗೆ ಸುಮಾರು 5 ಗಂಟೆಗಳ ಕಾಲ ಪ್ರಯತ್ನಿಸಿ ಹಸುವನ್ನು ಸಾವಿನಿಂದ ಪಾರು ಮಾಡಿದ್ದ.

ಈ ಸಾಧನೆಯನ್ನು ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸಕ್ತ ಸಾಲಿನ ಈ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಬುಡ ಕಟ್ಟು ಸಮುದಾಯ ಹೆಮ್ಮೆ ವ್ಯಕ್ತಪಡಿಸಿದೆ.

ನ.23ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ್ ಬಾಲಭವನ ಸೊಸೈಟಿ ಸಭಾಂಗಣದಲ್ಲಿ ನಡೆಯಲಿರುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅರ್ಜುನ್ ಸಾಗರ್ ಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರ್ಜುನ್ ಸಾಗರ್ ತಿತಿಮತಿ ನೋಕ್ಯದ ಚೇಣಿಹಡ್ಲು ಗಿರಿಜನ ಹಾಡಿಯ ಪಿ.ಎಂ.ದಿನೇಶ್ ಮತ್ತು ಜೆ.ಆರ್.ಸಿಂಧು ದಂಪತಿಯ ಪುತ್ರನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT