ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಿಂದ ಮಸಣಕ್ಕೆ ಹೊರಟ ಗೆಳೆಯರು

ಹುಣಸೂರು ಕಲ್‌ಬೆಟ್ಟ ಬಳಿ ಮರಕ್ಕೆ ಗುದ್ದಿದ ಬೊಲೆರೋ ಜೀಪ್; ಮೃತರು ಪಾಲಿಬೆಟ್ಟ ಗ್ರಾಮದವರು
Last Updated 21 ಏಪ್ರಿಲ್ 2022, 7:08 IST
ಅಕ್ಷರ ಗಾತ್ರ

ಮೈಸೂರು/ ಹುಣಸೂರು/ಸಿದ್ದಾಪುರ: ಆ ಆರು ಮಂದಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ತಮ್ಮೂರಿಗೆ ವಾಪಸು ಹೊರಟಿದ್ದ ಗೆಳೆಯರು. ಹುಣಸೂರಿನಿಂದ ವಿರಾಜಪೇಟೆಯ ಕಡೆಗೆ ಸಾಗುತ್ತಿದ್ದ ಬೊಲೆರೋ ಜೀಪ್ ಕಲ್‌ಬೆಟ್ಟದ ಬಳಿ ಬರುತ್ತಿದ್ದಂತೆಯೇ ಮರದ ರೂಪದಲ್ಲಿ ಕಾಯುತ್ತಿದ್ದ ಜವರಾಯ ಅವರೆಲ್ಲರನ್ನೂ ಸೆಳೆದುಕೊಂಡ.

ಭಾನುವಾರವಷ್ಟೇ ಮದುವೆಯಾಗಬೇಕಿದ್ದ ಪಾಲಿಬೆಟ್ಟ ಗ್ರಾಮದ ವಿನೀತ್ (35), ಅವರೊಂದಿಗೇ ಗೆಳೆಯರಾದ ಅದೇ ಗ್ರಾಮದ ಅನಿಲ್ (44), ಸಂತೋಷ್ (41), ರಾಜೇಶ್ (40), ದಯಾನಂದ (42), ಬಾಬು (45) ಮೃತಪಟ್ಟರು. ಇತರ ಮೂವರು ಗಾಯಗೊಂಡರು. ವಾಹನ ಮರಕ್ಕೆ ಗುದ್ದಿ ಭೀಕರ ಅಪಘಾತ ನಡೆಯಿತು. ಇಡೀ ರಸ್ತೆಯಲ್ಲಿ ಸ್ನೇಹಿತರ ಗೋಳಾಟ ಮುಗಿಲು ಮುಟ್ಟಿತ್ತು.

ಗಾಯಗೊಂಡವರ ಪೈಕಿ ಬುಧವಾರ ವಿವಾಹವಾದ ವರನ ತಂದೆ ಫಿಲಿಪ್ ಕೂಡ ಇದ್ದು ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಅಪಘಾತಕ್ಕೀಡಾದ ವಾಹನದ ಹಿಂದೆ ಬರುತ್ತಿದ್ದ ವಾಹನದಲ್ಲಿದ್ದ ಅವಿನಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಣಸೂರಿನಲ್ಲಿ ನಡೆದ ಸ್ನೇಹಿತ ರೊಬ್ಬರ ವಿವಾಹ ಮುಗಿಸಿಕೊಂಡ ಒಟ್ಟು 15 ಮಂದಿ ಸ್ವಂತ ಊರಾದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಕಡೆ ಎರಡು ವಾಹನಗಳಲ್ಲಿ ಪಯಣ ಆರಂಭಿಸಿದ್ದರು. ಮುಂದೆ ಇದ್ದ ಬೊಲೆರೊ ವಾಹನದಲ್ಲಿ 9 ಮಂದಿ, ಅದರ ಹಿಂದೆ ಓಮ್ನಿಯಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು.

ಕಲ್‌ಬೆಟ್ಟದ ಸಮೀಪ ಇದ್ದಕ್ಕಿದ್ದಂತೆ ಬೊಲೆರೊ ವಾಹನ ರಸ್ತೆಯ ಎಡಭಾಗಕ್ಕೆ ಹೊರಳಿತು. ಅತಿಯಾದ ವೇಗವಿದ್ದುದ್ದರಿಂದ ಚಾಲಕ ಬ್ರೇಕ್ ಹಾಕಿದರೂ 10 ಅಡಿ ದೂರದವರೆಗೂ ವಾಹನ ಸಾಗಿ, ರಸ್ತೆಬದಿಯ ಒಳಭಾಗದಲ್ಲಿದ್ದ ಆಲದಮರವೊಂದರ ಕೊಂಬೆಗೆ ಡಿಕ್ಕಿ ಹೊಡೆದಿತ್ತು. ವಾಹನದ ಬಂಪರ್‌ನ ಮೇಲೆ ಕೊಂಬೆಯು ತಗುಲಿ ಮುಂಭಾಗದಲ್ಲಿದ್ದದ್ದ 6 ಮಂದಿ ಕುಳಿತ ಜಾಗದಲ್ಲೇ ಮೃತಪಟ್ಟರು. ಹಿಂಬದಿ ಕುಳಿತಿದ್ದ ಮೂವರಿಗೆ ತೀವ್ರ ಗಾಯಗಳಾವು. ಒಂದೆರಡು ಅಡಿ ಮುಂದೆ ಹೋಗಿದ್ದರೆ ಪೊದೆಗೆ ಡಿಕ್ಕಿ ಹೊಡೆದು ಎಲ್ಲರ ಜೀವಗಳೂ ಉಳಿಯುತ್ತಿದ್ದವು.

ಘಟನೆ ನಡೆದ ಕೂಡಲೇ ಹಿಂದೆ ಕೇವಲ 50 ಮೀಟರ್ ಅಂತರದಲ್ಲಿ ಬರುತ್ತಿದ್ದ ಓಮ್ನಿ ವಾಹನದಲ್ಲಿದ್ದವರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ 6 ಮಂದಿಯ ಪ್ರಾಣಗಳು ಹೋಗಿದ್ದವು. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದರು.

ಅಪಘಾತ ಹೇಗಾಯಿತು?: ‘ವಿಶಾಲ ಹಾಗೂ ನೇರವಾದ ರಸ್ತೆಯಲ್ಲಿ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಆ ಜಾಗದಲ್ಲಿ ತಿರುವು, ರಸ್ತೆ ಉಬ್ಬುಗಳೂ ಇರಲಿಲ್ಲ. ಹಿಂದೆಯೂ ಅಪಘಾತಗಳೂ ನಡೆದಿರಲಿಲ್ಲ. ಇಂತಹ ಕಡೆ ಇಂತಹ ಭೀಕರ ಅಪಘಾತ ಹೇಗಾಯಿತು?’ ಎಂಬುದು ಸ್ಥಳೀಯರಿಗೆ ಮಾತ್ರವಲ್ಲ ಪೊಲೀಸರಿಗೂ ಯಕ್ಷಪ್ರಶ್ನೆ ಎನಿಸಿದೆ.

‘ಮದುವೆ ಊಟ ಮಾಡಿದ್ದ ಚಾಲಕನಿಗೆ ನಿದ್ದೆ ಬಂದಿರಬಹುದು ಇಲ್ಲವೇ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು. ಈ ಎರಡೂ ಕಾರಣ ಬಿಟ್ಟರೆ ಅಪಘಾತ ನಡೆಯಲು ಬೇರೆ ಯಾವುದೇ ಕಾರಣಗಳಿಲ್ಲ’ ಎಂದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಇನ್‌ಸ್ಟೆಕ್ಟರ್ ಚಿಕ್ಕಸ್ವಾಮಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಶೋಕದ ತಾಣವಾದ ಮದುವೆ ಮನೆ

ಅಪಘಾತದಲ್ಲಿ ಮೃತಪಟ್ಟ ವಿನೀತ್ ಅವರ ವಿವಾಹವು ಅಮ್ಮತ್ತಿಯ ಯುವತಿಯೊಂದಿಗೆ ನಿಶ್ವಯವಾಗಿದ್ದು, ಏಪ್ರಿಲ್ 23 ಮತ್ತು 24ರಂದು ವಿವಾಹ ನೆರವೇರಬೇಕಿತ್ತು. ಕೇವಲ 3 ದಿನವಿರುವಂತೆಯೇ ವರ ಮೃತಪಟ್ಟಿರುವುದು ಮದುವೆ ಮನೆಯಲ್ಲಿ ನೀರವ ಮೌನ ನೆಲೆಸಿತ್ತು.

ಅಪಘಾತದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸುತ್ತಿದ್ದಂತೆ ಯಾರೊಬ್ಬರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಎಲ್ಲರೂ ಆಘಾತಕ್ಕೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT