ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಪಾಲಿಸಿ, ಸಾಮರಸ್ಯದಿಂದ ಹಬ್ಬ ಆಚರಿಸಿ: ಶಾಸಕ ಎ.ಎಸ್.ಪೊನ್ನಣ್ಣ

Published : 27 ಆಗಸ್ಟ್ 2024, 5:09 IST
Last Updated : 27 ಆಗಸ್ಟ್ 2024, 5:09 IST
ಫಾಲೋ ಮಾಡಿ
Comments

ವಿರಾಜಪೇಟೆ: ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ವಿರಾಜಪೇಟೆಯ ಗೌರಿಗಣೇಶೋತ್ಸವವನ್ನು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕಾನೂನು ಪಾಲನೆ ಮಾಡುವ ಮೂಲಕ ಸಾಮರಸ್ಯದಿಂದ ಆಚರಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಗೌರಿಗಣೇಶೋತ್ಸವ ಆಚರಣೆಯ ಅಂಗವಾಗಿ ಪಟ್ಟಣದ ಪುರಭವನದಲ್ಲಿ ಸೋಮವಾರ ನಡೆದ ವೀರರಾಜೇಂದ್ರಪೇಟೆ ಗೌರಿ-ಗಣೇಶ ಜನೋತ್ಸವ ಸಮಿತಿ, ಪಟ್ಟಣದ ವಿವಿಧ ಗಣೇಶೋತ್ಸವ ಸಮಿತಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಅನೇಕ ವರ್ಷಗಳಿಂದ ವಿವಿಧ ಉತ್ಸವ ಸಮಿತಿಗಳ ಆಶ್ರಯದಲ್ಲಿ 10 ದಿನಗಳ ಕಾಲ ಅದ್ಧೂರಿಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವ ಆಚರಣೆಯ ಸಂದರ್ಭ ದೇಶದ ಕಾನೂನನ್ನು ಪಾಲನೆ ಮಾಡಿಕೊಂಡು ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಯೊಬ್ಬರು ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆಯುಂಟಾಗದಂತೆ ಮತ್ತು ನಾಡಿನ ಘನತೆಗೆ ಚ್ಯುತಿ ಬಾರದ ರೀತಿಯಲ್ಲಿ ಹಬ್ಬ ಆಚರಿಸಬೇಕು. ಆಚರಣಾ ಸಮಿತಿಗಳಿಗೆ ಉತ್ಸವ ಆಚರಣೆಗೆ ಯಾವುದೇ ರೀತಿಯಲ್ಲಿ ಅಡೆತಡೆಗಳು ಉಂಟಾಗದ ರೀತಿಯಲ್ಲಿ ಎಲ್ಲಾ ರೀತಿಯಲ್ಲೂ ಸಮಿತಿಗಳಿಗೆ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು.

ಪಟ್ಟಣದ ಜೈನರ ಬೀದಿಯ ಬಸವೇಶ್ವರ ದೇವಾಲಯದ ಗೌರಿಗಣೇಶೋತ್ಸವ ಸಮಿತಿಯ ಪದಾಧಿಕಾರಿ ನರೇಂದ್ರ ಕಾಮತ್ ಮಾತನಾಡಿ, ‘ಉತ್ಸವದ ದಿನಗಳಲ್ಲಿ ರಾತ್ರಿ 8ರ ಮಹಾಪೂಜೆಯ ಬಳಿಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಆದರೆ, ಕೆಲ ಸಮಯದಲ್ಲೆ ಕಾರ್ಯಕ್ರಮದ ನಡುವಿನಲ್ಲೆ ಅಧಿಕಾರಿಗಳು ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ತಾಕೀತು ಮಾಡುತ್ತಾರೆ. ಆದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಪಟ್ಟಣದ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ನಂಬುಡುಮಾಡ ರಾಜಪ್ಪ ಅವರು ಇದಕ್ಕೆ ಧ್ವನಿಗೂಡಿಸಿದರು.

ತಹಶೀಲ್ದಾರ್ ರಾಮಚಂದ್ರ, ಗೌರಿ-ಗಣೇಶೋತ್ಸವ ಜನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಶಭರೀಶ್ ಶೆಟ್ಟಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜೇಶ್ ಅವರು ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಸೆಸ್ಕ್ ಎಂಜಿನಿಯರ್ ಸುರೇಶ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಲಿಂಗರಾಜ್, ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಂಜೇಗೌಡ, ವಿರಾಜಪೇಟೆ ಸಿ.ಪಿ.ಐ ಶಿವರುದ್ರ, ಕುಟ್ಟ ಸಿ.ಪಿ.ಐ ಮಂಜಪ್ಪ ಸಿ.ಎ, ವಿರಾಜಪೇಟೆ ನಗರ ಠಾಣೆಯ ಎಸ್.ಐ ಪ್ರಮೋದ್‌ಕುಮಾರ್, ಗಾಮಾಂತರ ಠಾಣೆಯ ಎಸ್.ಐ ಮಂಜುನಾಥ್, ಪುರಸಭೆಯ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಪಟ್ಟಣದ 22 ಗಣೇಶೋತ್ಸವ ಸಮಿತಿಯ ಸದಸ್ಯರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ವಿರಾಜಪೇಟೆಯ ಗೌರಿಗಣೇಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು
ವಿರಾಜಪೇಟೆಯ ಗೌರಿಗಣೇಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು
22 ಗಣೇಶೋತ್ಸವ ಸಮಿತಿಯ ಸದಸ್ಯರು ಭಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯಾವಕಾಶಕ್ಕೆ ಬೇಡಿಕೆ 10 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಗಣೇಶೋತ್ಸವ
ರಾತ್ರಿ 10ರ ನಂತರ ಧ್ವನಿವರ್ಧಕದ ಬಳಕೆ ಬೇಡ
‘ನ್ಯಾಯಾಲಯದ ಆದೇಶದಂತೆ ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸುವಂತಿಲ್ಲ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದಾಗಿದೆ. ಕಳೆದ ಬಾರಿ ಉತ್ಸವದ ಸಂದರ್ಭ ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಕಾನೂನು ಉಲ್ಲಂಘನೆಯಾಗದಂತೆ ಉತ್ಸವ ಆಚರಣೆಯಾಗಬೇಕು. ವಿರಾಜಪೇಟೆ ಉಪವಿಭಾಗದಲ್ಲಿ 101 ಸ್ಥಳಗಳಲ್ಲಿ ಸಾರ್ವಜನಿಕವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ’ ಎಂದು ಡಿವೈಎಸ್‌ಪಿ ಮೋಹನ್ ಕುಮಾರ್ ಹೇಳಿದರು.
ಪಿಓಪಿ ಮೂರ್ತಿಗಳ ನಿಷೇಧ
ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ ‘ಜಲಮಾಲಿನ್ಯ ಮಂಡಳಿಯ ಆದೇಶದಂತೆ ಪಿ.ಒ.ಪಿ ಮೂರ್ತಿಗಳನ್ನು ನಿಷೇಧಿಸಲಾಗಿದ್ದು ನೈಜ ಮಣ್ಣಿನಿಂದ ನಿರ್ಮಿಸಲಾದ ಮೂರ್ತಿಗಳನ್ನೆ ಎಲ್ಲಾ ಸಮಿತಿಗಳು ಬಳಸಬೇಕು. ಮೂರ್ತಿಗಳ ವಿಸರ್ಜನೆಯ ಸಂದರ್ಭ ಜಲಮೂಲಗಳಲ್ಲಿ ಮೂರ್ತಿಗಳನ್ನು ಹೊರತುಪಡಿಸಿ ಹೂವು ಹಾಗೂ ಇತರ ವಸ್ತುಗಳನ್ನು ಜಲಮೂಲಗಳಲ್ಲಿ ಹಾಕುವಂತಿಲ್ಲ. ಉತ್ಸವ ಸಮಿತಿಗಳ ಅರ್ಜಿಯನ್ನು ಏಕಗವಾಕ್ಷಿ ಕೇಂದ್ರದ ಮೂಲಕ ವಿಲೇವಾರಿ ಮಾಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT