ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಗಳನ್ನು ತಬ್ಬಲಿಗಳನ್ನಾಗಿ ಮಾಡುತ್ತಿರುವ ಕೇಂದ್ರ ಸರ್ಕಾರ: ಇಂದೂಧರ ಹೊನ್ನಾಪುರ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಟೀಕೆ
Published 21 ಏಪ್ರಿಲ್ 2024, 6:06 IST
Last Updated 21 ಏಪ್ರಿಲ್ 2024, 6:06 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅನ್ನು ಸೋಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆ ನೀಡಿದೆ.

ಸಮಿತಿಯ ಸಂಚಾಲಕರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜ್, ಜನಾರ್ದನ್, ಶಿವಕುಮಾರ್ ಆಡುಗೋಡಿ, ಪಾಲಾಕ್ಷ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಇಂದೂಧರ ಹೊನ್ನಾಪುರ ಮಾತನಾಡಿ, ‘ಕಾರ್ಪೊರೇಟ್ ವಲಯಕ್ಕೆ ದೇಶದ ಸಂಪತ್ತನ್ನು ಮಾರಾಟ ಮಾಡಲಾಗುತ್ತಿದೆ. ಸಂವಿಧಾನದ ಆಶಯಗಳಿಗೆ ವಿರೋಧವಾಗಿ ನಡೆದುಕೊಳ್ಳಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿ ರಾಜ್ಯಗಳನ್ನು ತಬ್ಬಲಿಗಳನ್ನಾಗಿ ಮಾಡುತ್ತಿದೆ’ ಎಂದು ಕಿಡಿಕಾರಿದರು. 

‘ದೇಶವನ್ನು ಹಿಂದಕ್ಕೆ ಚಲಿಸುವ ಹಾಗೂ ದೇಶವನ್ನು ಅಧೋಗತಿಗೆ ಇಳಿಸುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ಅದು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಯಾವುದೇ ಆಶ್ವಾಸನೆಗಳನ್ನೂ ಈಡೇರಿಸಿಲ್ಲ’ ಎಂದು ಟೀಕಿಸಿದರು.

‘ಜಾತಿ, ಜಾತಿಯ ನಡುವೆ, ಧರ್ಮ, ಧರ್ಮದ ನಡುವೆ ಜಗಳ ಸೃಷ್ಟಿಸಲಾಗುತ್ತಿದೆ. ರಾಮರಾಜ್ಯ ಮಾಡುತ್ತೇವೆ ಎಂದು ಹೇಳಿ ಜನರ ನೆಮ್ಮದಿಯ ಬದುಕಿಗೆ ಬೆಂಕಿ ಇಡುವ ಕೆಲಸ ಆಗುತ್ತಿದೆ’ ಎಂದು ಅಸಮಾಧಾನ ವಕ್ತಪಡಿಸಿದರು.

ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ಈಗ ದೇಶದಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುವ ವಾತಾವರಣ ಇದೆ. ಸಾಮಾಜಿಕ ಹೋರಾಟಗಾರರನ್ನು ದೇಶ ದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. 10 ವರ್ಷದಲ್ಲಿ ನಿರಂಕುಶ ಪ್ರಭುತ್ವದತ್ತ ದೇಶ ಹೆಜ್ಜೆ ಹಾಕುತ್ತಿದೆ’ ಎಂದು ಹೇಳಿದರು. 

ವಿ.ನಾಗರಾಜ್ ಮಾತನಾಡಿ, ‘ಚಳವಳಿಗಾರರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವ ರಕ್ಷಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದರು.

‘ಕಾಂಗ್ರೆಸ್ ಕನಿಷ್ಠ ಕೆಲಸವನ್ನಾದರೂ ಮಾಡುತ್ತಿದೆ. ₹ 2 ಸಾವಿರ ಹಣವನ್ನು ಮಹಿಳೆಯರಿಗೆ ನೀಡುತ್ತಿದೆ. ಅಕ್ಕಿ ಕೊಡುತ್ತಿದೆ. ಸುಳ್ಳು ಭರವಸೆಗಳನ್ನು ನೀಡುತ್ತಿರುವ ಬಿಜೆಪಿಗಿಂತ ಕಾಂಗ್ರೆಸ್‌ಗೆ ಮತ ನೀಡುವುದೇ ಉತ್ತಮ’ ಎಂದು ಪ್ರತಿಪಾದಿಸಿದರು.

ಕಾರ್ಪೊರೇಟ್ ವಲಯಕ್ಕೆ ದೇಶದ ಸಂಪತ್ತನ್ನು ಮಾರಾಟ: ಆರೋಪ ಧರ್ಮ, ಧರ್ಮದ ನಡುವೆ ಜಗಳ ಸೃಷ್ಟಿಸಲಾಗುತ್ತಿದೆ: ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT