ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಬೆಲೆ ಕುಸಿತದ ಭೀತಿ

ಲಾಕ್‌ಡೌನ್‌: ಸಂಕಷ್ಟದಲ್ಲಿ ಸೋಮವಾರಪೇಟೆ ತಾಲ್ಲೂಕಿನ ರೈತರು
Last Updated 1 ಮೇ 2021, 7:28 IST
ಅಕ್ಷರ ಗಾತ್ರ

ಸೋಮವಾರಪೇಟೆ: ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಹಸಿರು ಮೆಣಸಿನಕಾಯಿ ಬೆಳೆದತಾಲ್ಲೂಕಿನ ಬೆಳೆಗಾರರು ಬೆಲೆ ಇಳಿಕೆಯ ಭೀತಿಯಲ್ಲಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ಹಸಿಮೆಣಸು ಕೆ.ಜಿ.ಗೆ ₹40 ರವರೆಗೆ ಮಾರಾಟವಾಗಿತ್ತು. ಲಾಕ್‌ಡೌನ್‌ ಘೋಷಣೆಯ ನಂತರ ಬೆಲೆ ದಿಢೀರನೆ ಇಳಿದಿದೆ. ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಗಾರರು ₹20ಕ್ಕೆ ಮಾರುತ್ತಿದ್ದಾರೆ. ಆದರೆ, ರೈತರಿಂದ ಖರೀದಿಸುವವರೇ ಇಲ್ಲದೆ
ಪರದಾಡುವಂತಾಗಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಲಾಕ್‌ಡೌನ್‌ ವೇಳೆಯೂ ಹಸಿಮೆಣಸು ಕೊಯ್ಲು ಮಾಡಲಾಗದೆ ಸಾಕಷ್ಟು ರೈತರಿಗೆ ಆರ್ಥಿಕ ನಷ್ಟವಾಗಿತ್ತು. ಅಕಾಲಿಕ ಮಳೆಯಿಂದ ಕಾಫಿ ಮತ್ತು ಕಾಳುಮೆಣಸು ಫಸಲು ಕೂಡ ನಷ್ಟವಾಗಿತ್ತು. ತಾಲ್ಲೂಕಿನ ಹೆಚ್ಚಿನ ಬೆಳೆಗಾರರು ಹಸಿಮೆಣಸು ಕೃಷಿ ಮಾಡಿದ್ದರು. ಮೇ ತಿಂಗಳಲ್ಲಿ ಮೆಣಸಿನ ಕೊಯ್ಲು ಪ್ರಾರಂಭವಾ
ಗಲಿದೆ, ಈ ಸಂದರ್ಭದಲ್ಲೇ ಲಾಕ್‌ಡೌನ್‌ ಘೋಷಣೆಯಾಗಿದ್ದು, ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಗಿಡಗಳು ರೋಗಪೀಡಿತವಾಗುತ್ತಿರುವುದರಿಂದ ಕೃಷಿಕರು ಫಸಲು ನಷ್ಟದ ಭೀತಿಯಲ್ಲಿದ್ದಾರೆ. ಏಪ್ರಿಲ್ ಕೊನೆ ವಾರ ಹಾಗೂ ಮೇ ತಿಂಗಳಲ್ಲಿ ಹಸಿ ಮೆಣಸಿನ ಫಸಲು ಅಧಿಕವಾಗಿ ಸಿಕ್ಕರೆ ಮಾತ್ರ ರೈತರು ಲಾಭ ಕಾಣಬಹುದು. ಈ ತಿಂಗಳಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

‘ತಮಿಳುನಾಡು, ಆಂಧ್ರಪ್ರದೇಶ, ಮುಂಬೈ ಸೇರಿದಂತೆ ಹೊರ ಭಾಗದ ವ್ಯಾಪಾರಸ್ಥರು ಬಂದರೆ ಹಸಿ ಮೆಣಸಿಗೆ ಉತ್ತಮ ಬೆಲೆ ಸಿಗುತ್ತದೆ. ಆದರೆ, ಕೋವಿಡ್‌ ಭಯ ಹಾಗೂ ಸರ್ಕಾರದ ಕಟ್ಟುನಿಟ್ಟಿನ ನಿಯಮದಿಂದ ಬರುತ್ತಿಲ್ಲ. ಸ್ಥಳೀಯ ವ್ಯಾಪಾರಸ್ಥರು ಬೆಲೆ ಹೆಚ್ಚಿಸುತ್ತಿಲ್ಲ’ ಎಂದು ಬೆಳೆಗಾರ ರಾಜು ಆರೋಪಿಸುತ್ತಾರೆ.

ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಸಿಮೆಣಸನ್ನು ಬೇಸಿಗೆ ಬೆಳೆಯಾಗಿ ಬೆಳೆಯುತ್ತಾರೆ. ಮೂದ್ರವಳ್ಳಿ, ದುಂಡಳ್ಳಿ, ಶನಿವಾರಸಂತೆ, ಗೌಡಳ್ಳಿ, ಬೆಂಬಳೂರು, ಬಿಳಹ, ಮಾದ್ರೆ, ಕೂಗೂರು, ಚಿಕ್ಕಾರ, ಹಿರಿಕರ, ಶುಂಠಿ, ದೊಡ್ಡಹಣಕೋಡು, ಚಿಕ್ಕತೋಳೂರು, ದೊಡ್ಡತೋಳೂರು, ದೊಡ್ಡಮಳ್ತೆ ಭಾಗದಲ್ಲಿ ಹಸಿಮೆಣಸು ಕೊಯ್ಲಿಗೆ ಬಂದಿದ್ದು, ಕೊಯ್ಲು ಮಾಡಲೇಬೇಕಾದ ಅನಿವಾರ್ಯ ಒದಗಿದೆ.

ಮೇ ತಿಂಗಳಲ್ಲಿ ಲಾಕ್‌ಡೌನ್ ಮುಂದುವರಿಸಿದರೆ ಹಸಿರು ಮೆಣಸಿನಕಾಯಿ ಬೆಳೆಗಾರರು ದೊಡ್ಡ ಮಟ್ಟದ ನಷ್ಟ ಅನುಭವಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅಕಾಲಿಕ ಮಳೆ ಬೀಳದೆ, ಕೆ.ಜಿ.ಯೊಂದಕ್ಕೆ ₹30ರವರೆಗೆ ಬೆಲೆ ಸಿಕ್ಕಲ್ಲಿ ಮಾತ್ರ, ಅಲ್ಪಮಟ್ಟಿನ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.

‘ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಬಂದರೆ ಮಾತ್ರ ಉತ್ತಮ ಬೆಲೆ ಸಿಗುತ್ತದೆ. ಫಸಲನ್ನು ಗಿಡದಲ್ಲಿ ಬೀಡಲು ಸಾಧ್ಯವಿಲ್ಲ. ಬೆಲೆ ಇಳಿಯುತ್ತಿದೆ. ಲಾಕ್‌ಡೌನ್‌ ಮುಂದುವರಿದರೆ ಕೃಷಿಕರ ಗೋಳನ್ನು ಕೇಳುವವರೆ ಇಲ್ಲದಂತಾಗುತ್ತದೆ. ಪ್ರತಿ ವರ್ಷ ರೈತರು ಒಂದಲ್ಲ ಒಂದು ಕಾರಣದಿಂದ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಗೌಡಳ್ಳಿ ಮಹೇಶ್ ಅಳಲು
ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT