ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಕಾಫಿಗೆ ಮಾತ್ರ ವಿದೇಶದಲ್ಲಿ ಬೇಡಿಕೆ: ಡಾ.ಚಂದ್ರಶೇಖರ್

Published 22 ಫೆಬ್ರುವರಿ 2024, 4:27 IST
Last Updated 22 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಕಾಫಿಗೆ ಮಾತ್ರ ಬೇಡಿಕೆ ಇದ್ದು, ಅವರ ರುಚಿಗೆ ಅನುಗುಣವಾಗಿ ಕಾಫಿಯನ್ನು ಕೊಟ್ಟಾಗ ಮಾತ್ರ ದೇಶದ ಕಾಫಿಗೆ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಲು ಸಾಧ್ಯ’ ಎಂದು ಕಾಫಿ ಮಂಡಳಿ ಉಪನಿರ್ದೇಶಕರಾದ ಡಾ.ಚಂದ್ರಶೇಖರ್ ಹೇಳಿದರು.

ಕಾಫಿ ಮಂಡಳಿ ವತಿಯಿಂದ ನಾಕೂರು- ಶಿರಂಗಾಲ ಮೂಲೆಮನೆ ಎಸ್ಟೇಟ್‌ನಲ್ಲಿ ಮಂಗಳವಾರ ನಡೆದ ಕಾಫಿ ತೋಟದಲ್ಲಿ ಮಣ್ಣಿನ ಪೋಷಕಾಂಶ ನಿರ್ವಹಣೆ ಹಾಗೂ ಕಾಫಿ ತಳಿ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗುಣಮಟ್ಟದ ಕಾಫಿ ಉತ್ಪಾದನೆಯಿಂದ ಮಾತ್ರ ಭಾರತದ ಕಾಫಿಗೆ ಭವಿಷ್ಯವಿದೆ. ಜಾಗತಿಕ ಕಾಫಿ ಸಮ್ಮೇಳನ ನಡೆದ ಮೇಲೆ ಭಾರತದ ಕಾಫಿ ಗುಣಮಟ್ಟದಿಂದ ಕೂಡಿದೆ ಎಂಬ ಅಭಿಪ್ರಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರನೂ ಕಾಫಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನ ಮುಂದುವರಿಸಬೇಕು. ಕಾಫಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಇದ್ದ ಭೂಮಿಯಲ್ಲೇ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಗುಣಮಟ್ಟದ ಕಾಫಿ ಬೆಳೆಯುವ ಪ್ರಯತ್ನ ಮಾಡಬೇಕು. ಕಾಫಿ ಮಂಡಳಿ ಬೆಳೆಗಾರರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಸಹಾಯ ಧನದ ಸೌಲಭ್ಯ ನೀಡುತ್ತದೆ’ ಎಂದು ಭರವಸೆ ನೀಡಿದರು.

ಮೂಲೆಮನೆ ಎಸ್ಟೇಟ್ ಮತ್ತು ಸೌತ್ ಇಂಡಿಯಾ ಕಾಫಿ ಕಂಪೆನಿಯ ಮಾಲೀಕ ಅಕ್ಷಯ್ ದಶರಥ್ ಮಾತನಾಡಿ, ಸ್ಪೆಷಾಲಿಟಿ ಕಾಫಿ ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವುದು, ರುಚಿ ಹಾಗೂ ಮಣ್ಣಿನ ಗುಣಕ್ಕೆ ತಕ್ಕದಾದ ತಳಿ ಆಯ್ಕೆ, ಭವಿಷ್ಯದ ಕಾಫಿ ಗಿಡದ ತಳಿಗಳ ಬಗ್ಗೆ ಮಾಹಿತಿ ನೀಡಿದರು.

ತಮ್ಮ ಜಾಗದಲ್ಲಿ ನೆಟ್ಟಿರುವ ವಿವಿಧ ದೇಶಗಳ 11 ತಳಿಗಳ ಬಗ್ಗೆ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದರು. ವಿದೇಶ ತಳಿಗಳಿಗೆ, ಸ್ಥಳೀಯ ತಳಿಗಳನ್ನು ಕಸಿ ಕಟ್ಟುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು. ವಿದೇಶಕ್ಕೆ ರಪ್ತು ಮಾಡುವ ಕಾಫಿ ಬೀಜ ಸಂಸ್ಕರಣೆಯ ಬಗ್ಗೆ ತಿಳಿಸಿಕೊಟ್ಟರು.

ಮಣ್ಣು ವಿಜ್ಞಾನಿ ಡಾ.ನದಾಫ್ ಮಾತನಾಡಿ, ‘ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಮಾತ್ರ ಉತ್ತಮ ಇಳುವರಿ ಸಾಧ್ಯ. ಮಣ್ಣಿನ ಪರೀಕ್ಷೆಯನ್ನು ಪ್ರತಿಯೊಬ್ಬ ಬೆಳೆಗಾರರು ಮಾಡಿಸಿ, ರಸಗೊಬ್ಬರ ಹಾಕಿದಲ್ಲಿ ಉತ್ಪಾದನಾವೆಚ್ಚ ಕಡಿಮೆಯಾಗುತ್ತದೆ. ಮಣ್ಣು ಪರೀಕ್ಷೆ ಮಾಡದೆ ವಿಪರೀತ ರಸಗೊಬ್ಬರ ಹಾಕಿದರೆ ಮಣ್ಣು ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ 2 ವರ್ಷಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಕಡಿಮೆ ಮಳೆ ಬೀಳುವ ಜಾಗದಲ್ಲಿ ಎರಡು ವರ್ಷಕೊಮ್ಮೆ ಪರೀಕ್ಷೆ ಮಾಡಿಸಬೇಕು. ಸುಣ್ಣ ಬಳಕೆಯ ಒಂದು ತಿಂಗಳ ನಂತರ ರಸಗೊಬ್ಬರ ಹಾಕಿದರೆ ಒಳ್ಳೆಯದು’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಸದಸ್ಯರು ಭಾಗವಹಿಸಿದ್ದರು.

ಪ್ರಗತಿಪರ ಕೃಷಿಕರು ತಮ್ಮ ಕಾಫಿ ಕೃಷಿಯ ಅನುಭವ ಹಂಚಿಕೊಂಡರು. ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳಾದ ರಂಜಿತ್ ಕುಮಾರ್, ಮೇರಿ, ಕೃಷ್ಣಕುಮಾರ್, ಲಕ್ಷ್ಮೀಕಾಂತ್, ಸೌತ್ ಇಂಡಿಯಾ ಕಾಫಿ ಕಂಪನಿಯ ತೇಜ್, ಸನ್ನಿ, ರತನ್ ಭಾಗವಹಿಸಿದ್ದರು.

ಸೋಮವಾರಪೇಟೆ ಸಮೀಪದ ನಾಕೂರು- ಶಿರಂಗಾಲದ ಮೂಲೆಮನೆ ಎಸ್ಟೇಟ್‌ನಲ್ಲಿ ನಡೆದ ಕಾಫಿ ಬೆಳೆಗಾರರ ಕಾರ್ಯಾಗಾರದಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿದರು
ಸೋಮವಾರಪೇಟೆ ಸಮೀಪದ ನಾಕೂರು- ಶಿರಂಗಾಲದ ಮೂಲೆಮನೆ ಎಸ್ಟೇಟ್‌ನಲ್ಲಿ ನಡೆದ ಕಾಫಿ ಬೆಳೆಗಾರರ ಕಾರ್ಯಾಗಾರದಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT