ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಸೊರಗಿದ ಬಳ್ಳಿಗಳ ರಕ್ಷಣೆಯತ್ತ ಬೆಳೆಗಾರರ ಚಿತ್ತ

ಮಳೆ ಇಳಿಮುಖ, ತೋಟದತ್ತ ಕಾಳು ಮೆಣಸು ಬೆಳೆಗಾರರು
Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಇಳಿಮುಖವಾಗುತ್ತಿದ್ದಂತೆಯೇ ಕಾಳುಮೆಣಸಿನ ಬಳ್ಳಿಗಳ ರಕ್ಷಣೆಗೆ ಬೆಳೆಗಾರರು ಮುಂದಾಗಿದ್ದಾರೆ.

ಅಲ್ಲಲ್ಲಿ ಔಷಧಿ ಸಿಂಪಡಣೆಯ ಕೆಲಸ ಬಿರುಸಿನಿಂದ ಸಾಗುತ್ತಿದೆ. ವಿವಿಧೆಡೆ ಕಾರ್ಮಿಕರು ಬೋರ್ಡೋ ದ್ರಾವಣವನ್ನು ಬಳ್ಳಿಗಳಿಗೆ ಸಿಂಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ಕಾಳುಮೆಣಸಿನ ಇಳುವರಿಯಲ್ಲಿ ಕುಸಿತ ಕಂಡಿದೆ.

ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಕಾಳುಮೆಣಸಿನ ಬಳ್ಳಿಗಳು ಅಪಾರ ಪ್ರಮಾಣದಲ್ಲಿ ಕೊಳೆರೋಗಕ್ಕೆ ತುತ್ತಾಗಿ ಇಳುವರಿ ಕುಸಿತ ಉಂಟಾಗಿತ್ತು. ಈ ವರ್ಷವೂ ಹೋಬಳಿ ವ್ಯಾಪ್ತಿಯ ಹೊದ್ದೂರು, ನೆಲಜಿ, ಕಕ್ಕಬ್ಬೆ ಗ್ರಾಮವ್ಯಾಪ್ತಿಯ ಹಲವು ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿಗಳಿಗೆ ಕೊಳೆ ರೋಗ ತಗುಲಿದೆ.
ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳಲ್ಲಿನ ಎಲೆಗಳು ಹಾಗೂ ಮೆಣಸು ಉದುರಿ ಧರಶಾಯಿಯಾಗುತ್ತಿದೆ. ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆಯಾಗಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಕೊಳೆರೋಗದಿಂದ ಫಸಲು ನಷ್ಟವಾಗುವ ಆತಂಕ ಎದುರಾಗಿದೆ.

ಕಾಳುಮೆಣಸಿಗೆ ತಗಲಿರುವ ರೋಗದಿಂದ ಇಳುವರಿ ಇಳಿಮುಖವಾಗುತ್ತಿದೆ. ಕಾಳುಮೆಣಸಿನ ಬೆಳೆಗಾರರನ್ನು ಕಂಗೆಡಿಸುತ್ತಿರುವುದು ಬಳ್ಳಿಗಳಿಗೆ ತಗಲುವ ಶೀಘ್ರ ಸೊರಗುರೋಗ. ಗಿಡದ ಬುಡಕ್ಕೆ ಈ ರೋಗ ಆಕ್ರಮಣ ಮಾಡುವುದರಿಂದ ಬೆಳೆಗಾರರ ಮೆಣಸಿನ ಉತ್ಪಾದನೆ ಲೆಕ್ಕಾಚಾರವು ಬುಡಮೇಲಾಗುತ್ತಿದೆ. ಮಳೆಗಾಲದ ಆರಂಭದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಮೆಣಸಿನ ಬಳ್ಳಿ ನಿರೀಕ್ಷೆಗೂ ಮೀರಿ ಫಸಲು ನೀಡುವಂತೆ ಗೋಚರವಾದರೂ ಮಳೆಗಾಲದಲ್ಲಿ ದಿಢೀರನೆ ಕಾಣಿಸಿಕೊಳ್ಳುವ ರೋಗದಿಂದ ಎಲೆಗಳೆಲ್ಲಾ ಕೊಳೆತು ಉದುರಿಹೋಗುತ್ತವೆ. ಇಳುವರಿಯೂ ನೆಲಕಚ್ಚುತ್ತದೆ.

ಹೋಬಳಿ ವ್ಯಾಪ್ತಿಯ ಹಲವು ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳು ಸೊರಗುತ್ತಿವೆ.. ಶೀಘ್ರ ಸೊರಗು ರೋಗ ಅಥವಾ ಬುಡಕೊಳೆಯುವ ರೋಗದಲ್ಲಿ ಮೆಣಸಿನ ಬಳ್ಳಿಯ ಬೇರಿಗೆ ಶಿಲೀಂಧ್ರವು ಆಕ್ರಮಣ ಮಾಡಿ ನೀರಾಹಾರಗಳ ಚಲನೆಯನ್ನು ಅಡ್ಡಿಗೊಳಿಸುತ್ತದೆ. ಬೇರನ್ನು ಕೊಲ್ಲುತ್ತದೆ.

ಮಳೆಗಾಲದಲ್ಲಿ ಉಲ್ಬಣಿಸುವ ಈ ರೋಗ ಬೇರನ್ನಲ್ಲದೆ ಗಿಡದ ಬಳ್ಳಿ, ಎಲೆಗಳನ್ನು ಆಕ್ರಮಿಸುತ್ತದೆ. ಜಂತು ಹುಳುವಿನಿಂದಲೂ ಸೊರಗು ರೋಗ ಬರುವುದಾದರೂ ಅಲ್ಲಿ ಗಿಡಗಳು ನಿಧಾನವಾಗಿ ಸೊರಗುತ್ತವೆ. ಇದು ನಿಧಾನ ಸೊರಗು ರೋಗ. ಈ ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಒಣಗಿ ಹೋಗುತ್ತವೆ. ಮಳೆ ಕಡಿಮೆಯಾಗುತ್ತಿದ್ದಂತೆ ಸೊರಗು ರೋಗ ತೋಟಗಳ ಉದ್ದಕ್ಕೂ ವ್ಯಾಪಿಸುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಕಾಳುಮೆಣಸಿನ ಎಲೆ ಕೊಳೆರೋಗವನ್ನು ಹತೋಟಿಗೆ ತರಲು ಶೇ 1ರ ಬೋರ್ಡೋ ದ್ರಾವಣವನ್ನು ಕಾಳುಮೆಣಸಿನ ಬಳ್ಳಿಗಳಿಗೆ ಸಿಂಪಡಿಸಬೇಕು. 2 ಕೆ.ಜಿ ಮೈಲುತುತ್ತು, 2 ಕೆ.ಜಿ ಸುಣ್ಣವನ್ನು 200 ಲೀಟರ್‌ ನೀರಿಗೆ ಮಿಶ್ರಣಮಾಡಿ ಸುರಿಯಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನಿಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT