ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ‘ಶಿಕ್ಷಕರ ಸೌಲಭ್ಯ ಕಿತ್ತುಕೊಂಡವರಿಗೆ ಶಿಕ್ಷೆ ಆಗುವಂತಹ ಚುನಾವಣೆಯಾಗಲಿ’

ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥಕುಮಾರ್ ಪ್ರತಿಪಾದನೆ
Published 16 ಏಪ್ರಿಲ್ 2024, 4:31 IST
Last Updated 16 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ಮಡಿಕೇರಿ: ‘ಶಿಕ್ಷಕರ ಸೌಲಭ್ಯ ಕಿತ್ತುಕೊಂಡವರಿಗೆ ಶಿಕ್ಷೆ ಆಗುವಂತಹ ಚುನಾವಣೆ ಇದಾಗಬೇಕು’ ಎಂದು ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ ಕುಮಾರ್ ತಿಳಿಸಿದರು.

‘2006 ಜೂನ್ 1ರ ನಂತರ ನೇಮಕಗೊಂಡ ಶಿಕ್ಷಕರು ಮಾತ್ರವಲ್ಲ ಎಲ್ಲ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ, ನಿವೃತ್ತರ ನೆಮ್ಮದಿ ಕೆಡಿಸುವ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಶಿಕ್ಷಕರು ಮಾತ್ರವಲ್ಲ ಸರ್ಕಾರಿ ನೌಕರರ ನೆಮ್ಮದಿ ಕಸಿಯುವಂತಹ ತೀರ್ಮಾನವನ್ನು ಕೈಗೊಂಡವರಿಗೆ ಈ ಚುನಾವಣೆ ಶಿಕ್ಷೆ ನೀಡುವಂತಹ ಚುನಾವಣೆಯಾಗಬೇಕು ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಜಯ ನೀಡುವಂತಹ ಚುನಾವಣೆಯಾಗಬೇಕು’ ಎಂದು ಅವರು ಹೇಳಿದರು.

‘ನಾನು 13 ವರ್ಷ ಶಿಕ್ಷಕನಾಗಿ ಅನೇಕ ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಶಿಕ್ಷಕರ ಸಲುವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿರುವೆ. ಕೇಂದ್ರ ಸರ್ಕಾರದ ಕೆಲವೊಂದು ತಪ್ಪು ನಿರ್ಧಾರಗಳಿಂದ ಇಂದು ಶಿಕ್ಷಕರ ಸಮಸ್ಯೆಗಳು ಕಗ್ಗಂಟಾಗಿವೆ. ಇವುಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ‘ನೈರುತ್ಯ ಶಿಕ್ಷಕರ ಕ್ಷೇತ್ರವು ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆಯ ಅರ್ಧಭಾಗವನ್ನು ಒಳಗೊಂಡಿದೆ. ಒಟ್ಟು 19,309 ಮತದಾರರು ಇದ್ದಾರೆ. ಕೊಡಗಿನಲ್ಲೇ 1,500 ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಮಂಜುನಾಥ್ 3ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ’ ಎಂದರು.

‘ಮೊದಲ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದಾಗ ಕೇವಲ 170 ಮತಗಳ ಅಂತರದಿಂದ ಮಾತ್ರವೇ ಇವರು ಪರಾಭವಗೊಂಡಿದ್ದರು. 2ನೇ ಬಾರಿ ಸ್ಪರ್ಧಿಸಿ ಸೋತಿದ್ದರು. ಆದರೆ, ಈಗ 3ನೇ ಬಾರಿ ಸ್ಪರ್ಧಿಸಿರುವ ಅವರು ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ’ ಎಂದು ಹೇಳಿದರು.

ಲೋಕಸಭಾ ಚುನಾವಣೆ ಮುಗಿದ ನಂತರ ಆರಂಭವಾಗುವ ಈ ಚುನಾವಣೆಯಲ್ಲಿ ಶಿಕ್ಷಕರ ಸಮಸ್ಯೆ ಪರಿಹಾರ ಮಾಡುವವರು ಆಯ್ಕೆ ಆಗಬೇಕು. ಅವರಿಗೆ ಸಮಸ್ಯೆಯ ಅರಿವು ಇರಬೇಕು. ಮಂಜುನಾಥ್ ಅವರಿಗೆ ಸಮಸ್ಯೆಯ ಅರಿವು ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜೇಶ್‌ ಯಲ್ಲಪ್ಪ, ರೇವತಿ ರಮೇಶ್, ಸದಾ ಮುದ್ದಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT