ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ. ಈ ಸರಣಿ ಇಂದು ಆರಂಭ.

ಮಡಿಕೇರಿ: ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಕೋವಿಡ್–19 ಜನರ ಜೀವಹಿಂಡುತ್ತಿದೆ. ನಗರದಲ್ಲಿದ್ದವರು ವಾಪಸ್ಸಾಗಿದ್ದರಿಂದ ಹಳ್ಳಿಹಳ್ಳಿಗೂ ಕೊರೊನಾ ಸೋಂಕು ವ್ಯಾಪಿಸಿದೆ. ಅದರಲ್ಲೂ ಬೆಟ್ಟಗುಡ್ಡಗಳ ನಿವಾಸಿಗಳು ಹಾಗೂ ಕುಗ್ರಾಮಗಳ ಜನರು ಹದಗೆಟ್ಟ ಆರೋಗ್ಯ ವ್ಯವಸ್ಥೆಯಿಂದಾಗಿ ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿಯಿದೆ.

104 ಗ್ರಾಮ ಪಂಚಾಯಿತಿ ಒಳಗೊಂಡಿರುವ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಸೋಂಕು ತಗುಲಿದವರೂ ಅಕ್ಕಪಕ್ಕದ ಗ್ರಾಮದ ಆರೋಗ್ಯ ಕೇಂದ್ರ, ಇಲ್ಲವೇ ತಾಲ್ಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಕ್ಕೇ ಚಿಕಿತ್ಸೆಗೆ ಧಾವಿಸಬೇಕು. ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಅವರಿಗೆ ಸೋಂಕು ತಗುಲಿದರೂ ಅರಿವಿಗೇ ಬರುತ್ತಿಲ್ಲ.

ಜಿಲ್ಲೆಯಲ್ಲಿ 32 ಆಂಬುಲೆನ್ಸ್ಗಳು ಸೇವೆ ನೀಡುತ್ತಿದ್ದು ದುರ್ಗಮ ಪ್ರದೇಶಕ್ಕೆ ಅವುಗಳು ತಲುಪುತ್ತಿಲ್ಲ. ಇದೇ ರೋಗಿಗಳ ಜೀವಕ್ಕೆ ಆಪತ್ತು ತರುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿಯಲ್ಲಿ ಆಂಬುಲೆನ್ಸ್ಗಾಗಿ ಕಾದಿದ್ದ ಕೋವಿಡ್ ಪೀಡಿತ ಯುವಕನೊಬ್ಬ ರಸ್ತೆಯಲ್ಲೇ ಕುಸಿದು ಮೃತಪಟ್ಟಿದ್ದ ಘಟನೆಯೂ ಇಲ್ಲಿನ ಜನರ ಕಣ್ಣೆದುರಿಗಿದೆ.

ಇದನ್ನೂ ಓದಿ:ಕಲಬುರ್ಗಿ | ಸೌಲಭ್ಯಗಳ ಕೊರತೆ ಅನಾವರಣ: ಹಳ್ಳಿಗಳನ್ನು ಕಾಡುತ್ತಿರುವ ಕೊರೊನಾ ಸೋಂಕು

ಇನ್ನು ಕಾಡಂಚಿನ ಗ್ರಾಮಗಳಲ್ಲಿ ವನ್ಯವೀಜಿಗಳ ಉಪಟಳವಿದ್ದು, ಹೋಂ ಐಸೋಲೇಷನ್ನಲ್ಲಿರುವ ರೋಗಿಗಳು ರಾತ್ರಿ ವೇಳೆ ಗಂಭೀರ ಸ್ಥಿತಿಗೆ ತಲುಪಿದರೆ ಕಾಡಾನೆಭಯದಿಂದ ದೂರದ ಆಸ್ಪತ್ರೆಗೆ ಬರಲೂ ಸಾಧ್ಯವಾಗುತ್ತಿಲ್ಲ.

‘ಆರಂಭಿಕ ದಿನಗಳಲ್ಲಿ ಪ್ರಕರಣಗಳು ಕಡಿಮೆಯಿದ್ದವು. ಆಂಬುಲೆನ್ಸ್ಗಳೂ ಓಡಾಟ ನಡೆಸುತ್ತಿದ್ದವು. ಈಗ ಪ್ರಕರಣಗಳು ಹೆಚ್ಚಿದ್ದು, ನಾವೇ ಆಸ್ಪತ್ರೆಗೆ ತೆರಳಬೇಕು. ವೃದ್ಧರಿಗೆ ಸೋಂಕು ತಗುಲಿದರೆ, ಬಾಡಿಗೆ ವಾಹನ ಪಡೆದು ಆಸ್ಪತ್ರೆಗೆ ಕಳುಹಿಸುತ್ತೇವೆ. ಕೆಲವು ಮನೆಗಳ ಕಡೆಗೆ ಬೈಕ್ ಬಿಟ್ಟರೆ, ಬೇರೆ ಯಾವ ವಾಹನಗಳು ಹೋಗಲೂ ಸಾಧ್ಯವಿಲ್ಲದ ಸ್ಥಿತಿ ಇದೆ. ಅಂತಹ ಕಡೆ, ರೋಗಿಗಳನ್ನು ನಾವೇ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ್ದೇವೆ’ ಎನ್ನುತ್ತಾರೆ ಮಾದಾಪುರದ ಹರೀಶ್.

ಸೋಮವಾರಪೇಟೆ ತಾಲ್ಲೂಕಿನ ಕಾಡ್ಮನೆ ಗ್ರಾಮದ ನೋವಿನ ಕಥೆಯನ್ನು ಕೊರೊನಾ ಸೋಂಕಿತರು ಹೇಳುವಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

‘ಕೂಲಿ, ಕೃಷಿ ಮಾಡುತ್ತಲೇ ಬದುಕು ಸಾಗಿಸುತ್ತಿದ್ದೆವು. ಮಾರ್ಚ್ ತನಕ ನಿತ್ಯದ ಜೀವನ ಹೇಗೋ ನಡೆಯುತ್ತಿತ್ತು. ಅದಾದ ಮೇಲೆ ದಿಕ್ಕೇ ಬದಲಾಗಿ ಹೋಗಿದೆ. ಊರಿನ ಬಹುತೇಕರು ಈಗ ಕೊರೊನಾ ಪೀಡಿತರು. ಕೋವಿಡ್ನಿಂದ ಗ್ರಾಮದಲ್ಲಿ ಸಾವು ಸಂಭವಿಸಿ, ಕಣ್ಣೀರು ಉಳಿಸಿ ಹೋಗಿದೆ’ ಎಂದು ಸೋಂಕಿತರು ನೋವಿನಿಂದ ನುಡಿಯುತ್ತಾರೆ. ಕಳೆದ ವರ್ಷ ಒಂದೇ ಒಂದು ಪ್ರಕರಣ ಪತ್ತೆಯಾಗದ ಈ ಊರಿನಲ್ಲಿ, ಈ ಬಾರಿ ಪ್ರತಿ ಮನೆಯಲ್ಲೂ ಸೋಂಕಿತರಿದ್ದಾರೆ.

‘ಕಾಡ್ಮನೆ ಗ್ರಾಮದ ಜನರು ತಪಾಸಣೆಗೂ ಸೋಮವಾರಪೇಟೆಗೆ ಬರಬೇಕು. ವರದಿಯು ಪಾಸಿಟಿವ್ ಎಂದು ಬಂದಲ್ಲಿ, ಅಂಥವರು ಕೋವಿಡ್ ಆರೈಕೆ ಕೇಂದ್ರಕ್ಕೆ ಸುಮಾರು 40 ಕಿ.ಮೀ. ದೂರದ ಕುಶಾಲನಗರ ಸಮೀಪದ ಕೂಡಿಗೆಗೆ ಬರಬೇಕು. ಬಡವರು, ಕೂಲಿ ಕಾರ್ಮಿಕರು ಲಾಕ್ಡೌನ್ ಅವಧಿಯಲ್ಲಿ ಅಷ್ಟು ದೂರ ಹೇಗೆ ಕ್ರಮಿಸುವುದು? ಆಂಬುಲೆನ್ಸ್ ವ್ಯವಸ್ಥೆಯನ್ನೂ ಸರಿಯಾಗಿ ಮಾಡುತ್ತಿಲ್ಲ. ಸ್ಥಿತಿ ಗಂಭೀರವಿದ್ದರೂ ಹೋಂ ಐಸೋಲೇಷನ್ ನೆಪದಲ್ಲಿ ಮನೆಗೇ ಕಳುಹಿಸುತ್ತಾರೆ’ ಎಂದು ಸೋಂಕಿತರು ಅಳಲು ತೋಡಿಕೊಳ್ಳುತ್ತಾರೆ. ಉತ್ತರ ಕೊಡಗಿನ ಭಾಗದ ಬಹುತೇಕ ಹಳ್ಳಿಗಳು ಕೊರೊನಾ ಬಾಧಿತವಾಗಿವೆ. ಜಿಲ್ಲೆಯ ದಕ್ಷಿಣ ಭಾಗದಲ್ಲೂ ಅದೇ ಸ್ಥಿತಿಯಿದೆ.

ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ಕೊಟ್ಟಾಗ ಜನರ ಓಡಾಟ ವಿರಳವಾಗಿತ್ತು. ಪಂಚಾಯಿತಿ ವ್ಯಾಪ್ತಿಯ, 21 ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗವು ಜನರನ್ನು ಮನೆಯಿಂದ ಹೊರಗೆ ಬರುವುದಕ್ಕೇ ಯೋಚಿಸುವಂತೆ ಮಾಡಿಬಿಟ್ಟಿದೆ.

‘ದೂರದ ಕಾಫಿ ತೋಟಕ್ಕೆ ಕೂಲಿಗೆ ತೆರಳುತ್ತಿಲ್ಲ. ಪರಿಚಯಸ್ಥ ಮಾಲೀಕರ ತೋಟಕ್ಕೆ ಮಾತ್ರ ಹೋಗುತ್ತಿದ್ದೇವೆ. ನಾವು ಸತ್ತರೆ ನಮ್ಮ ಮಕ್ಕಳಿಗೆ ಇನ್ಯಾರು ಗತಿ? ತೋಟದ ಕಾರ್ಮಿಕರಿಗೆ ಲಸಿಕೆಯ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ’ ಎಂದು ಕೊಡ್ಲಿಪೇಟೆಯಲ್ಲಿ ಮಾತಿಗೆ ಸಿಕ್ಕ ಕಾರ್ಮಿಕ ಮಹಿಳೆ ರಂಗಿ ಪರಿಸ್ಥಿತಿಯನ್ನು ವಿವರಿಸಿದರು.

ಇದನ್ನೂ ಓದಿ:ಗ್ರಾಮೀಣ ಭಾಗದಲ್ಲಿ ರೋಗಿಗಳ ಪರದಾಟ; ತುರ್ತು ಚಿಕಿತ್ಸೆಗೆ ದೊಡ್ಡ ಊರುಗಳೇ ಆಸರೆ

ಜಿಲ್ಲೆಯಲ್ಲಿ ಆರು ಕಡೆ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ‘ಬಿಸಿನೀರು ಕೊಡುವುದಿಲ್ಲ. ಊಟ ಕಳಪೆಯಾಗಿರುತ್ತೆ. ಔಷಧಿಯನ್ನೂ ಸರಿಯಾಗಿ ನೀಡುತ್ತಿಲ್ಲ’ ಎಂದು ಗಾಳಿಬೀಡಿನ ಆರೈಕೆ ಕೇಂದ್ರದ ಸೋಂಕಿತರು ಆಪಾದಿಸಿ ಪ್ರತಿಭಟಿಸಿದ್ದರು. ಪ್ರತಿಭಟಿಸಿದ್ದ 10 ಮಂದಿಯನ್ನು ಕೇಂದ್ರದಿಂದ ಮನೆಗೆ ಕಳುಹಿಸಲಾಗಿತ್ತು. ‘ನಿಮಗೆ ಕೊರೊನಾ ಸೋಂಕಿರುವ ಕಾರಣಕ್ಕೆ ಊಟದ ರುಚಿ ಗೊತ್ತಾಗುವುದಿಲ್ಲ. ಅಡುಗೆ ಚೆನ್ನಾಗಿಯೇ ಇದೆ, ತಿನ್ನಿ’ ಎಂದು ಸಿಬ್ಬಂದಿ ಸಬೂಬು ಹೇಳಿದ್ದರು. ಅದಾದ ಮೇಲೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು.

ಈ ಕೇಂದ್ರಕ್ಕೆ ಭೇಟಿ ನೀಡಿದಾಗ, ‘ಈಗ ಆರೈಕೆ ಕೇಂದ್ರದಲ್ಲಿ ವಾತಾವರಣ ಉತ್ತಮವಾಗಿದೆ. ಊಟವೂ ರುಚಿಯಾಗಿದೆ. ಬಿಸಿನೀರು ಕೂಡ ಲಭಿಸುತ್ತಿದೆ’ ಎಂದು ಸೋಂಕಿತರೊಬ್ಬರು ಹೇಳಿದರು. ‘ಆದರೆ, ಸೋಂಕಿತರು ಆರೈಕೆ ಕೇಂದ್ರಕ್ಕೆ ಬಂದಾಗ, ಅವರಿಗೆ ಔಷಧಿ ನೀಡಿ ಧೈರ್ಯ ತುಂಬುವ ಕೆಲಸ ನಡೆಯುತ್ತಿಲ್ಲ. ಇದು ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಪ್ರಶ್ನೆ ಮಾಡಿದರೆ ಕೇಂದ್ರದಿಂದಲೇ ಹೊರಗೆ ಕಳುಹಿಸುತ್ತಾರೆಂಬ ಭಯವಿದೆ’ ಎಂದೂ ಅಳಲು ತೋಡಿಕೊಂಡರು.

ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಬೆಲೆಬಾಳುವ ವಸ್ತುಗಳು ಕಳವಾಗುತ್ತಿರುವ ಪ್ರಕರಣಗಳು ವರದಿಯಾದ ಮೇಲೆ, ಇದೀಗ ಎಲ್ಲ ವಾರ್ಡ್ಗೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಊಟ ಪೂರೈಸುವ ವೇಳೆ ಮೊಬೈಲ್ ಕದ್ದಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಮಡಿಕೇರಿಯ ಕೋವಿಡ್ ಆಸ್ಪತ್ರೆಯ ಕರ್ಮಕಾಂಡಗಳು ಬೆಳಕಿಗೆ ಬಂದ ಮೇಲೆ ಆಸ್ಪತ್ರೆಯ ಅಧೀಕ್ಷಕ ಡಾ.ಲೋಕೇಶ್ ಅವರನ್ನು ಬದಲಾಯಿಸಿ, ಡಾ.ಮಂಜುನಾಥ್ ಅವರ ನೇಮಕ ಮಾಡಲಾಗಿದೆ.ಆಸ್ಪತ್ರೆಯ ಸುಧಾರಣೆಗೆ ‘ಕಾರ್ಯಪಡೆ’ ರಚಿಸಲಾಗಿದೆ. ಆದರೆ ತಜ್ಞ ವೈದ್ಯರು ಹಾಗೂ ನರ್ಸ್ಗಳ ಕೊರತೆ ಇರುವುದರಿಂದ ರೋಗಿಗಳು ಪರದಾಡುವ ಸ್ಥಿತಿಯಿದೆ.

ಕೊಡಗು ಕೃಷಿ ಪ್ರಧಾನ ಜಿಲ್ಲೆ. ಇದನ್ನೇ ನೆಚ್ಚಿಕೊಂಡ ಕಾರ್ಮಿಕರ ಸಂಖ್ಯೆಯೂ ಹೆಚ್ಚು. ಈ ಕಾರ್ಮಿಕರು ಹಾಗೂ ಬಡವರಿಗೆಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯೊಂದೇ ಗತಿ. ಇಲ್ಲಿ ಮಾತ್ರ ಐಸಿಯು ಬೆಡ್ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಸೌಲಭ್ಯವಿಲ್ಲ. ಸ್ಥಿತಿವಂತರು, ಮೈಸೂರುಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಾರ್ಮಿಕರ ಕಷ್ಟ ವ್ಯವಸ್ಥೆಗೆ ಅರ್ಥವಾಗುತ್ತಿಲ್ಲ.

ತತ್ತರಿಸಿದ ಗಿರಿಜನ ಸಮೂಹ
ಕೊಡಗಿನ ಕಾರೆಕಂಡಿ, ಬೊಂಬುಹಾಡಿ, ಚೇಣಿಹಡ್ಲು, ಆಯಿರುಸುಳಿ, ಮಜ್ಜಿಗೆಹಳ್ಳ, ಆನೆ ಕ್ಯಾಂಪ್, ಕಾಡಿನ ಹಾಡಿಗಳಲ್ಲಿ ವಾಸಿಸುತ್ತಿರುವ ಗಿರಿಜನರನ್ನೂ ಕೋವಿಡ್ ಸಂಕಷ್ಟಕ್ಕೆ ತಳ್ಳಿದೆ. ಅವರು ಕೋವಿಡ್ ಸೋಂಕಿಗೆ ಒಳಗಾಗದಿದ್ದರೂ ಪರೋಕ್ಷವಾಗಿ ಅವರ ಬದುಕಿನ ಮೇಲೆ ಪರಿಣಾಮ ಬೀರಿದೆ. ಕೂಲಿಯನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಇವರು, ಈಗ ಕೆಲಸವಿಲ್ಲದೇ ನಲುಗಿ ಹೋಗಿದ್ದಾರೆ.

ಗಂಟಲು ದ್ರವದ ಮಾದರಿ ನೀಡಲು ಆಸ್ಪತ್ರೆಗೆ ಬರಲೂ ಗಿರಿಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಲಸಿಕೆ ಹಾಕಿಸಿಕೊಳ್ಳಿ ಎಂದರೆ, ‘ಕಾಯಿಲೆಗೆ ನಾವೇ ಮದ್ದು ಕಂಡುಕೊಳ್ಳುತ್ತೇವೆ. ನಿಮಗ್ಯಾಕೆ ಚಿಂತೆ. ನೀವ್ಯಾರೂ ಹಾಡಿಗೆ ಬರಬೇಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ಹಾಡಿಗಳಿಗೆ ಸೋಂಕು ವ್ಯಾಪಿಸಿದರೆ ಕಷ್ಟ ಎಂಬುದು ಅಧಿಕಾರಿಗಳ ಆತಂಕ. ಆ ಎಚ್ಚರಿಕೆಯಿಂದ, ಅವರು ಇದೀಗ ಗಿರಿಜನರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಮಳೆ, ಪ್ರವಾಹ ಕಲಿಸಿದ ಪಾಠ
ಕೆಲವು ಗ್ರಾಮಗಳಲ್ಲಿ ಲಾಕ್ಡೌನ್ಗೆ ಜನರು ಹೆದರಿಲ್ಲ. ಮಳೆಗಾಲದ ಮೂರು ತಿಂಗಳು ಕಳೆದಂತೆಯೇ ಈ ಲಾಕ್ಡೌನ್ ಅನ್ನು ಜನರು ಕಳೆಯುತ್ತಿದ್ದಾರೆ. ಅಂಥ ಹಲವು ಹಳ್ಳಿಗಳು ಜಿಲ್ಲೆಯಲ್ಲಿ ಸಿಗುತ್ತಿವೆ. ಭಾಗಮಂಡಲ, ಚೇರಂಗಾಲ, ಅಯ್ಯಂಗೇರಿ, ನಾಪೋಕ್ಲು, ಬಲಮುರಿ, ಕರಡಿಗೋಡು ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಳ್ಳುತ್ತವೆ. ಆ ಗ್ರಾಮಗಳ ಜನರು, ತಿಂಗಳಿಗೆ ಆಗುವಷ್ಟು ಸಾಮಗ್ರಿಯನ್ನು ಮೊದಲೇ ಹೊತ್ತೊಯ್ದು, ತಮ್ಮೂರಿನಲ್ಲಿಯೇ ಕೆಲಸ ಮಾಡಿಕೊಂಡು ಮಳೆಗಾಲ ಕಳೆಯುತ್ತಾರೆ. ಕೋವಿಡ್ ನಿಯಂತ್ರಣಕ್ಕೆ ಹೇರುತ್ತಿರುವ ಈ ಲಾಕ್ಡೌನ್ ವೇಳೆಯೂ ಈ ಗ್ರಾಮಗಳ ಜನರು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದಾರೆ.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಕಾಗುವಷ್ಟು ಲಸಿಕೆ ಪೂರೈಕೆಯಾಗಿಲ್ಲ. ಲಸಿಕೆಯ ಮಹತ್ವದ ಬಗ್ಗೆ ಕಾರ್ಮಿಕರಲ್ಲೂ ಅರಿವು ಮೂಡಿಸಿಲ್ಲ. ಕಾರ್ಮಿಕರು ಹಾಗೆಯೇ ಕೆಲಸಕ್ಕೆ ತೆರಳುತ್ತಿದ್ದಾರೆ.
-ಎಚ್.ಬಿ.ಜಯಮ್ಮ, ಬೆಳ್ಳಾರಳ್ಳಿ ಗ್ರಾಮದ ನಿವಾಸಿ

ಕೊಡಗಿನ ಗಡಿಭಾಗದ ಗ್ರಾಮಗಳಲ್ಲಿ ಏಪ್ರಿಲ್ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿವೆ. ಅಗತ್ಯವಿರುವಷ್ಟು ಔಷಧಿಯೂ ಲಭಿಸುತ್ತಿದೆ.
-ಡಾ.ರಾಜೇಶ್ವರಿ, ವೈದ್ಯೆ, ಶನಿವಾರಸಂತೆ

ಈ ವರ್ಷ ಗ್ರಾಮೀಣರೇ ಕೋವಿಡ್ಗೆ ಹೆದರಿದ್ದಾರೆ. ಹೀಗಾಗಿ ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಲಾಕ್ಡೌನ್ ತೆರವಾದ ಮೇಲೆ ಪರಿಸ್ಥಿತಿ ಅರಿವಿಗೆ ಬರಲಿದೆ.
-ವೀರೇಂದ್ರ ಕುಮಾರ್,ಸದಸ್ಯ, ಹಂಡ್ಲಿ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.