ಭಾನುವಾರ, ಸೆಪ್ಟೆಂಬರ್ 26, 2021
27 °C
ಆರೋಗ್ಯವೂ ಸುಧಾರಣೆ, ಕುಟುಂಬದಲ್ಲೂ ನೆಮ್ಮದಿ, ಗಲಾಟೆಯೂ ಇಲ್ಲ!

ಕೊಡಗು | ಮದ್ಯ ವ್ಯಸನಿಗಳ ಕುಟುಂಬದಲ್ಲಿ ಬದಲಾವಣೆ ತಂಗಾಳಿ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ನನಗೆ ಈಗ 42 ವರ್ಷ. ಆಟೊ ಚಾಲನೆ ವೃತ್ತಿ ಆರಂಭಿಸಿ, 22 ವರ್ಷವೇ ಕಳೆಯಿತು. ನಿತ್ಯವೂ ಮದ್ಯ ಸೇವಿಸಿಯೇ ಮನೆಗೆ ಬರುತ್ತಿದ್ದೆ. ಊಟವನ್ನೂ ಮಾಡದೆ ಮಲಗುತ್ತಿದ್ದೆ. ರಾತ್ರಿ ವೇಳೆ ಮನೆಯಲ್ಲೂ ಗಲಾಟೆ ಬೇರೆ! ನೆಮ್ಮದಿ ಇರಲಿಲ್ಲ. ಹಗಲಿಡೀ ಮೈಕೈನೋವು ಮಾಡಿಕೊಂಡು ದುಡಿದ ದುಡ್ಡು ಕುಡಿತದ ಚಟಕ್ಕೆ ವ್ಯಯವಾಗುತಿತ್ತು. ಮಕ್ಕಳ ಶಾಲಾ ಶುಲ್ಕ ಪಾವತಿಗೂ ಹಣ ಇರುತ್ತಿರಲಿಲ್ಲ. ಆದರೆ, ತಿಂಗಳಿಂದ ಮದ್ಯ ಸಿಗದೇ ಸಂಪೂರ್ಣ ಮದ್ಯ ತ್ಯಜಿಸಿದ್ದೇನೆ. ಇನ್ಮುಂದೆ ಮದ್ಯ ತ್ಯಜಿಸಲು ನಿರ್ಧರಿಸಿರುವವೆ.‘ – ಇದು ಮಡಿಕೇರಿ ಆಟೋ ಚಾಲಕರೊಬ್ಬರ ಮಾತು.

‘ಇಡೀ ದಿನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಮೈಕೈ ನೋವು ಮರೆಯಲೆಂದು ಪೋಷಕರು ಮದ್ಯ ಸೇವಿಸುತ್ತಿದ್ದರು. ಮನೆಗೆ ನಿತ್ಯವೂ ಮದ್ಯ ತಂದು ಸೇವನೆ ಮಾಡುತ್ತಿದ್ದರ ಪರಿಣಾಮ, ಚಿಕ್ಕ ವಯಸ್ಸಿನಲ್ಲೇ ನನಗೂ ಮದ್ಯ ಸೇವನೆಯ ಆಸೆ ಬಂತು. ಆರಂಭದಲ್ಲಿ ಸುಮ್ಮನೆ ಕುಡಿತಕ್ಕೆ ಇಳಿದೆ. ಕೊನೆಯಲ್ಲಿ ಅದು ಅಭ್ಯಾಸವಾಗಿ ಹೋಯಿತು. ಯಾರಲ್ಲೂ ದುಡ್ಡಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಒಂದು ತಿಂಗಳಿಂದ ಮದ್ಯ ಸಿಕ್ಕಿಲ್ಲ. ಕುಟುಂಬದಲ್ಲಿ ಸಂತಸ ಕಾಣುತ್ತಿದೆ’ ಎಂದು ಕಾರ್ಮಿಕ ರಂಜಿತ್‌ ಹೇಳಿದರು. ಹೀಗೆ ಮದ್ಯದ ಚಟಕ್ಕೆ ಬಿದ್ದು ಕುಟುಂಬಗಳಲ್ಲಿ ಮಾಯವಾಗಿದ್ದ ನೆಮ್ಮದಿ ಮತ್ತೆ ಮರಳಿದೆ. ಮದ್ಯ ವ್ಯಸನಿಗಳ ಕುಟುಂಬಗಳಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿದೆ.

ಕೊಡಗು ಲಾಕ್‌ಡೌನ್‌ ಆಗಿ ತಿಂಗಳು ಕಳೆದಿದ್ದು ಹಲವು ಕ್ಷೇತ್ರಗಳು ನಷ್ಟಕ್ಕೀಡಾಗಿವೆ. ಆದರೆ, ಕುಡಿತದಿಂದ ನೆಮ್ಮದಿ ಕಳೆದುಕೊಂಡಿದ್ದ ಕುಟುಂಬಗಳಲ್ಲಿ ಮಾತ್ರ ಏನೋ ಖುಷಿಯ ವಾತಾವರಣ ನೆಲೆಸಿದೆ. ಮದ್ಯ ವ್ಯಸನಿಗಳ ಮುಖದಲ್ಲಿ ಈಗ ಕಾಂತಿ ಮೂಡಿದೆ. ಲವಲವಿಕೆ ಕಾಣಿಸುತ್ತಿದೆ. 

ರಾಜ್ಯದಲ್ಲಿಯೇ ಅತೀ ಹೆಚ್ಚು ಮದ್ಯ ಮಾರಾಟವಾಗುವ ಜಿಲ್ಲೆಗಳಲ್ಲಿ ಕೊಡಗಿಗೂ ಸ್ಥಾನವಿದೆ. ಕಾರ್ಮಿಕರು ಹೆಚ್ಚಾಗಿ ನೆಲೆಸಿದ್ದಾರೆ. ನಿತ್ಯವೂ ತೋಟದಲ್ಲಿ ಕೆಲಸ ಮಾಡುವ ಕಾರಣಕ್ಕೆ ಮದ್ಯದ ದಾಸರಾಗಿದ್ದರು. ಇನ್ನು ಜಿಲ್ಲೆಯಲ್ಲಿ ಶುಭ ಸಮಾರಂಭಕ್ಕೂ ಮದ್ಯಕ್ಕೆ ಮೊದಲ ಆದ್ಯತೆ ಇತ್ತು. ಬಂದ ಅತಿಥಿಗಳಿಗೂ ಮದ್ಯ ಪೂರೈಕೆ ಇಲ್ಲಿನ ಸಂಪ್ರದಾಯ. ಆದರೆ, ಲಾಕ್‌ಡೌನ್‌ ಬಳಿಕ ಅದಕ್ಕೆಲ್ಲಾ ಕಡಿವಾಣ ಬಿದ್ದಿದೆ.

ಆರೋಗ್ಯವೂ ಸುಧಾರಣೆ: ತಿಂಗಳಿಂದ ಮದ್ಯ ಸಿಗದ ಕಾರಣಕ್ಕೆ ಹಲವರು ಇನ್ಮುಂದೆ ಮದ್ಯ ಸೇವನೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮದ್ಯ ಸೇವನೆ ಬಿಡುವುದಾಗಿ ಪ್ರಕಟಿಸಿದ್ದಾರೆ! ಇದು ಯುವಕರ ಕತೆಯಾದರೆ, ಮಧ್ಯ ವಯಸ್ಕರೂ ಈಗ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಮದ್ಯ ಸೇವನೆ ಬಿಟ್ಟ ಮೇಲೆ ಆರೋಗ್ಯವೂ ಸುಧಾರಣೆಯಾಗಿದೆ ಎಂದು ಹಲವರು ‘ಪ್ರಜಾವಾಣಿ’ ಎದುರು ಹರ್ಷ ವ್ಯಕ್ತಪಡಿಸಿದರು.

ದುಡ್ಡು ಉಳಿತಾಯ: ನಿತ್ಯ ಒಬ್ಬ ಕಾರ್ಮಿಕ ಕನಿಷ್ಠ ₹ 100 ತನಕ ಕುಡಿತಕ್ಕೆ ಖರ್ಚು ಮಾಡುತ್ತಿದ್ದ. ಅಂದರೆ ತಿಂಗಳಿಗೆ ₹ 3 ಸಾವಿರ ಮದ್ಯ ಸೇವನೆಗೆ ಖರ್ಚಾಗುತಿತ್ತು. ಅದಕ್ಕೆಲ್ಲಾ ಈಗ ಲಾಕ್‌ಡೌನ್‌ ಕಡಿವಾಣ ಹಾಕಿದೆ. ದುಡಿಮೆ ಇಲ್ಲದಿದ್ದರೂ ಅನಗತ್ಯ ಖರ್ಚು ಮಾತ್ರ ಇಲ್ಲವಾಗಿದೆ ಎಂದು ಹಲವು ಹೇಳಿದರು.

ಶುಚಿ ರುಚಿಯಾದ ಊಟ: ಸಂಜೆಯಾದರೆ ಸಾಕು ಜಿಲ್ಲೆಯ ಬಾರ್‌ಗಳು ತುಂಬಿರುತ್ತಿದ್ದವು. ಯುವಕರೇ ಹೆಚ್ಚಾಗಿ ಎಣ್ಣೆ ಹುಡುಕಿ ಹೋಗುತ್ತಿದ್ದರು. ಅದೆಲ್ಲವೂ ದೂರವಾಗಿದ್ದು, ಮನೆಯಲ್ಲಿ ಎಲ್ಲರೂ ಕಾಲ ಕಳೆಯುವಂತಾಗಿದೆ. ಮನೆಯಲ್ಲಿ ಶುಚಿಯಾದ ಅಡುಗೆ ತಯಾರಿ ಆಗುತ್ತಿವೆ. ಪರಸ್ಪರ ಸಹಾಯ, ಸಹಕಾರ ವಾತಾವರಣ ಸೃಷ್ಟಿಯಾಗಿದೆ.

**
ಸಂಜೆ ಪೇಟೆಗೆ ಹೋಗುತ್ತಿಲ್ಲ...
ವಾರಕ್ಕೊಮ್ಮೆ ಮದ್ಯ ಸೇವನೆ ಅಭ್ಯಾಸವಿತ್ತು. ತಿಂಗಳಿನಿಂದ ಮದ್ಯ ಸಿಗದೆ ಕುಡಿತ ಬಿಟ್ಟಿರುವೆ. ಕೂಲಿ ಕೆಲಸಕ್ಕೆ ಕೊರತೆ ಇಲ್ಲ. ಕುಟುಂಬದವರೊಡನೆ ನೆಮ್ಮದಿಯಿದೆ. ಸಂಜೆ ಪೇಟೆಗೆ ಹೋಗುತ್ತಿಲ್ಲ. ಲೈನ್‌ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ನಿರ್ವಹಣೆ ಮಾಡುತ್ತಿದ್ದೇನೆ. 
– ಎಚ್‌.ಕೆ.ಮಿಟ್ಟು, ಬೇತು ಗ್ರಾಮ, ನಾಪೋಕ್ಲು

**
‘ಹಣ ಉಳಿತಾಯ’
ತಿಂಗಳಿನಿಂದ ಮದ್ಯ ನಿಷೇಧ ಮಾಡಿರುವುದರಿಂದ ಮನೆಯಲ್ಲಿ ಕುಟುಂಬಸ್ಥರು ನೆಮ್ಮದಿ ಕಾಣುವಂತಾಗಿದೆ. ಹೆಚ್ಚಿನ ಪುರುಷರು ತಾವು ಗಳಿಸಿದ ಹೆಚ್ಚಿನ ಹಣವನ್ನು ಮದ್ಯಕ್ಕಾಗಿ ಮೀಸಲಿಡುತ್ತಿದ್ದರು. ಅಲ್ಲದೆ, ಮನೆಯಲ್ಲಿ ಗಲಾಟೆ ಬೇರೆ! ಇವುಗಳಿಂದ ಕುಟುಂಬಗಳಿಗೆ ಮುಕ್ತಿ ಸಿಕ್ಕಿ ಎಲ್ಲರೂ ಸಂತೋಷದಿಂದ ಇರುವಂತಹ ಪರಿಸ್ಥಿತಿ ಕೊರೊನಾ ಲಾಕ್‌ಡೌನಿಂದಾಗಿದೆ. 
– ಮಂಜುಳಾ ಸುಬ್ರಮಣಿ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ

**
ಕುಟುಂಬದಲ್ಲಿ ಸಂತಸದ ಅಲೆ
ಮದ್ಯದಂಗಡಿ ಬಂದ್ ಆದ ಮೇಲೆ ಮನೆಯವರು ಕುಡಿಯುವುದನ್ನು ಕಡಿಮೆ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲಿ ಇದ್ದು, ಕುಟುಂಬದಲ್ಲಿ ಸಂತೋಷ ವೃದ್ಧಿಸಿದೆ
– ಶ್ರೀಜ, ಅಮ್ಮತ್ತಿ ಗ್ರಾಮ

**
‘ಮೊಗದಲ್ಲಿ ಕಾಂತಿ, ಮನದಲ್ಲಿ ಹುಮ್ಮಸ್ಸು’
ಮದ್ಯ ನಿಷೇಧ ಬಳಿಕ ಮನೆಯಲ್ಲಿ ಕುಟುಂಬದೊಂದಿಗೆ ಸಂತೋಷದ ದಿನಗಳನ್ನು ಕಳೆಯುವಂತಾಗಿದೆ. ಮದ್ಯಪಾನದ ವ್ಯಸನಿಗಳು ಒಂದೆರಡು ದಿನ ನೀರಿನಿಂದ ಹೊರ ಬಂದ ಮೀನಿನಂತೆ ವಿಚಲಿತರಾಗಿದಂತೂ ನಿಜ. ತದನಂತರ ವಾಸ್ತವಕ್ಕೆ ಹೊಂದಿಕೊಂಡರು. ವ್ಯಸನದಿಂದ ಬಹುದೂರ ಸಾಗಿ ಮೊಗದಲ್ಲಿ ಕಾಂತಿ, ಮನದಲ್ಲಿ ಹುಮ್ಮಸ್ಸು, ಲವಲವಿಕೆಯಿಂದ ತಮ್ಮನ್ನು ಜಯಿಸಿ ತಮ್ಮ ಕುಟುಂಬದ ಕಣ್ಣಲ್ಲಿ ಸಂತೋಷದ ಆನಂದಬಾಷ್ಪ ತಂದು ಕೊರೊನಕ್ಕೆ ಕೈ ಮುಗಿಯುವಷ್ಟು ಹರ್ಷ ವ್ಯಕ್ತಪಡಿಸುವ ಕುಟುಂಬಗಳು ಸಾಕಷ್ಟಿವೆ. 
– ಕೆ.ಜಿ.ಮನು, ಹೌಸಿಂಗ್ ಬೋರ್ಡ್, ಕುಶಾಲನಗರ

**
ಕಳ್ಳಬಟ್ಟಿ ತಯಾರಿಕೆ: 21 ಪ್ರಕರಣ ದಾಖಲು
ಮಡಿಕೇರಿ:
ಜಿಲ್ಲೆಯಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇದಿಸಿದ್ದು, ಮದ್ಯ ಮಾರಾಟ ನಿಷೇದ ಅವಧಿಯನ್ನು ಮೇ 3 ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತೆ ಪಿ.ಬಿಂದುಶ್ರೀ ತಿಳಿಸಿದ್ದಾರೆ.

ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 9 ಪ್ರಕರಣ ದಾಖಲಿಸಲಾಗಿದ್ದು, 23 ಲೀಟರ್‌ ಕಳ್ಳಬಟ್ಟಿ, 1665 ಲೀಟರ್‌ ಗೇರು ಹಣ್ಣಿನ ಪುಳಗಂಜಿ ಹಾಗೂ 1 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 9 ಪ್ರಕರಣ ದಾಖಲಿಸಿದ್ದು, 2.5 ಲೀಟರ್‌ ಕಳ್ಳಬಟ್ಟಿ, 128 ಲೀಟರ್‌ ಬೆಲ್ಲದ ಕೊಳೆ, 120 ಲೀಟರ್‌ ಬೆಲ್ಲದ ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 3 ಪ್ರಕರಣ ದಾಖಲಿಸಲಾಗಿದೆ. 5 ಲೀಟರ್ ಕಳ್ಳಬಟ್ಟಿ, 20 ಲೀಟರ್‌ ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ ಜಿಲ್ಲೆಯಾದ್ಯಂತ ಒಟ್ಟು 360 ದಾಳಿ ನಡೆಸಿದ್ದು 21 ಪ್ರಕರಣ ದಾಖಲಿಸಲಾಗಿದೆ. ಕಳ್ಳಬಟ್ಟಿ ತಯಾರಿಕೆಯಲ್ಲಿ ಕೊಳೆತ ಹಣ್ಣು, ಕೊಳೆತ ಬೆಲ್ಲ, ಬ್ಯಾಟರಿ ಸೆಲ್, ಯೂರಿಯಾ ಮತ್ತಿತರ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಮಿಶ್ರಣ ಮಾಡುವ ಸಾಧ್ಯತೆಗಳಿದ್ದು, ಇದು ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ ರೋಗ ನಿರೋಧಕ ಶಕ್ತಿ ಕುಂದಿಸಲಿದೆ.

ಆದ್ದರಿಂದ, ಸಾರ್ವಜನಿಕರಿಗೆ ಕಳ್ಳಬಟ್ಟಿ ಸೇವನೆಯಿಂದ ದೂರವಿರುವಂತೆ ಮನವಿ ಮಾಡಲಾಗಿದೆ. ಯಾರಾದರೂ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಕೆ, ಮಾರಾಟ ಮಾಡುವುದು ಕಂಡುಬಂದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಕೋರಿದೆ. ಮಾಹಿತಿ ನೀಡುವವರ ಗೋಪ್ಯತೆ ಕಾಪಾಡಲಾಗುವುದು ಎಂದು ಪಿ.ಬಿಂದುಶ್ರೀ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು