ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ 100 ಮಾದರಿಗಳಲ್ಲಿ 16 ಪಾಸಿಟಿವ್‌

ಕೋವಿಡ್–19: ಸೋಂಕಿತ ಪ್ರಕರಣ, ಮರಣ ಪ್ರಮಾಣ ತಗ್ಗಿಸಲು ಸಚಿವ ಡಾ.ಕೆ.ಸುಧಾಕರ್‌ ಸೂಚನೆ
Last Updated 6 ಅಕ್ಟೋಬರ್ 2020, 14:20 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲೂ ಕೋವಿಡ್ 19‌ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ತಂದಿದೆ. ಮರಣ ಪ್ರಮಾಣ ಹಾಗೂ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಬೇಕೆಂದು ಸೂಚಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎರಡು ತಿಂಗಳಿಂದ ಸೋಂಕಿತರ ಪ್ರಮಾಣ ಹೆಚ್ಚಳವಾಗಿದೆ. ಸಾವಿನ ಪ್ರಮಾಣದಲ್ಲೂ ರಾಜ್ಯದ ಸರಾಸರಿಗೆ ಹೊಂದುವಂತಿದೆ. ಕಳೆದ ಐದು ದಿನಗಳಿಂದ ಹೆಚ್ಚು ಸಾವು ಸಂಭವಿಸಿದೆ. ಮರಣ ಪ್ರಮಾಣ ತಗ್ಗಿಸಲು ತ್ವರಿತವಾದ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

‘ಕೊಡಗು ಜಿಲ್ಲೆಯಲ್ಲಿ 100 ಮಾದರಿಗಳನ್ನು ಪರೀಕ್ಷೆ ನಡೆಸಿದರೆ 16 ಪಾಸಿಟಿವ್‌ ಬರುತ್ತಿವೆ. ಮುಂದಿನ ದಿನಗಳಲ್ಲಿ 20ಕ್ಕೆ ಏರಿಕೆ ಆಗಬಹುದು. ಅದನ್ನು ತಗ್ಗಿಸಬೇಕು’ ಎಂದು ಹೇಳಿದರು.

‘ಕೊಡಗು ಆರಂಭಿಕ ದಿನಗಳಲ್ಲಿ ಹಸಿರು ವಲಯದಲ್ಲಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಎರಡ್ಮೂರು ಪ್ರಕರಣಗಳಿದ್ದವು. ಅನ್‌ಲಾಕ್‌ ನಂತರ ಇಲ್ಲಿಯೂ ಪರಿಸ್ಥಿತಿ ಬದಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪರೀಕ್ಷೆಯ ಸಂಖ್ಯೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ನಿತ್ಯ 300ರಿಂದ 400 ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ನಿತ್ಯವು 1,000ದಿಂದ 1,300 ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಬೇಕು. ಲ್ಯಾಬ್‌ಗೆ ಹೆಚ್ಚುವರಿ ಸಿಬ್ಬಂದಿಗಳು ಬೇಕಿದ್ದರೆ ನೇಮಕಾತಿ ಮಾಡಿಕೊಳ್ಳಬಹುದೆಂದು ಸೂಚನೆ ನೀಡಿರುವೆ’ ಎಂದು ಹೇಳಿದರು.

‘ಬುದ್ಧಿವಂತರು ನೆಲೆಸಿರುವ ಜಿಲ್ಲೆ ಕೊಡಗು; ಕೋವಿಡ್‌ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ. ತಪ್ಪು ಸಂದೇಶಕ್ಕೆ ಕಿವಿಗೊಡದೆ ಕೊರೊನಾ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಕೋರಿದರು.

‘ಉದ್ದೇಶಪೂರ್ವಕವಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂಬ ತಪ್ಪು ಸಂದೇಶಗಳನ್ನು ಯಾರೂ ನಂಬಬಾರದು. ಗಾಳಿ ಸುದ್ದಿ ನಂಬದೇ ಆಸ್ಪತ್ರೆಗೆ ಬನ್ನಿ. ಒಂದು ವೇಳೆ ಆಪತ್ತು ಎದುರಾದರೆ ನೀವೇ ಜವಾಬ್ದಾರರು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಅಂತಹ ಕಡೆಗಳಲ್ಲಿ ನಿಗಾ ಇಡಲು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ಏನೇನು?:

ಹೋಂ ಕ್ವಾರಂಟೈನ್‍ನಲ್ಲಿ ಇರುವವರನ್ನು ವೈದ್ಯರು ತೆರಳಿ ವಿಚಾರಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಹೆಚ್ಚು ಒತ್ತಡ ಇರಬಾರದು ಎಂಬ ಉದ್ದೇಶದಿಂದ ಹೋಂ ಕ್ವಾರಂಟೈನ್, ಹೋಂ ಐಸೋಲೇಷನ್ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕೋವಿಡ್ ಪರೀಕ್ಷೆಗೆ ನಾಗರಿಕರು ಸಹಕರಿಸಬೇಕು. ಮಾಸ್ಕ್ ಬಳಸದಿರುವುದು ಕಂಡು ಬಂದರೆ ₹ 500 ದಂಡವನ್ನು ಪೊಲೀಸ್ ಇಲಾಖೆ ವಸೂಲಿ ಮಾಡಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕಾರ್ಯಪಡೆ ನಿಯೋಜಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜಿಲ್ಲೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕೋವಿಡ್ ನಿಯಂತ್ರಣ ಸಂಬಂಧ ಮಾಹಿತಿ ನೀಡಬೇಕು ಎಂದು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದ್ದು, ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.

ದಸರಾ, ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕಿದೆ. ಆ ನಿಟ್ಟಿನಲ್ಲಿ 144 ಸೆಕ್ಷನ್ ಜಾರಿ ಮಾಡಬೇಕು ಎಂದು ಕೋರಿದರು.

ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಹಾಗೂ ಗೋಣಿಕೊಪ್ಪಲು ಸಂತೆ ಸ್ಥಳವನ್ನು ಆರ್‍ಎಂಸಿಗೆ ಸ್ಥಳಾಂತರಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.

ಕೆ.ಜಿ.ಬೋಪಯ್ಯ ಮಾತನಾಡಿ ಶನಿವಾರ ಮತ್ತು ಭಾನುವಾರ ರಾಜಾಸೀಟು, ಅಬ್ಬಿ ಮತ್ತು ಇರ್ಪು ಜಲಪಾತ, ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇವರು ಸರಿಯಾಗಿ ಮಾಸ್ಕ್ ಧರಿಸಿದ್ದಾರೆಯೇ ಎಂಬ ಬಗ್ಗೆ ಗಮನಿಸಬೇಕು ಎಂದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋವಿಡ್ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ 3,163 ಪ್ರಕರಣಗಳು ವರದಿಯಾಗಿದ್ದು, ಇದುವರೆಗೆ 2,600 ಮಂದಿ ಬಿಡುಗಡೆಯಾಗಿದ್ದಾರೆ. 514 ಸಕ್ರಿಯ ಪ್ರಕರಗಳು ಇದ್ದು, ಶೇ 1.5ರಷ್ಟು ಮರಣ ಪ್ರಮಾಣ, ಇದುವರೆಗೆ 45,684 ಮಾದರಿ ಪರೀಕ್ಷೆ ಮಾಡಲಾಗಿದೆ. 475 ನಿಯಂತ್ರಿತ ಪ್ರದೇಶಗಳಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಹಾಜರಿದ್ದರು.

ನೀವು ಡಾಕ್ಟರ್‌ ಅಲ್ಲವೇ?: ಅಧೀಕ್ಷಕ ಲೋಕೇಶ್‌ಗೆ ತರಾಟೆ
ಸಭೆಯಲ್ಲಿ ಕೊರೊನಾ ಸೋಂಕಿತರ ಹಾಗೂ ಮರಣದ ಪ್ರಮಾಣದ ಬಗ್ಗೆ ಸಚಿವ ಸುಧಾಕರ್‌ ಅವರು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಲೋಕೇಶ್‌ರನ್ನು ಪ್ರಶ್ನಿಸಿದರು. ಆತ, ಸಮರ್ಪಕ ಮಾಹಿತಿ ನೀಡಿದಿದ್ದಾಗ ‘ನೀವು ಡಾಕ್ಟರ್‌ ಅಲ್ವೇನ್ರಿ’ ಎಂದು ತರಾಟೆಗೆ ತೆಗೆದುಕೊಂಡರು.‌

‘ಡೆತ್‌ ಆಡಿಟಿಂಗ್‌ ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎಂಬುದು ತಿಳಿದಿದೆಯೇ’ ಎಂದೂ ಪ್ರಶ್ನಿಸಿದರು. ಅದಕ್ಕೂ ಸೂಕ್ತ ಉತ್ತರ ಸಿಗಲಿಲ್ಲ.

‘ಅಧೀಕ್ಷಕರ ಬಳಿ ಎಲ್ಲ ಮಾಹಿತಿ ಇರಬೇಕು. ಕೂಡಲೇ ಜಿಲ್ಲಾಧಿಕಾರಿಗೆ ಮಾಹಿತಿ ಒದಗಿಸಿ’ ಎಂದು ಲೋಕೇಶ್‌ಗೆ ಸಚಿವರು ತಾಕೀತು ಮಾಡಿದರು. ಬಳಿಕ, ಡಿಎಚ್‌ಒ ಡಾ.ಕೆ.ಮೋಹನ್ ಅವರು ಸಭೆಗೆ ಮಾಹಿತಿ ನೀಡಿದರು.

ಬೋಪಯ್ಯ ಮಾತನಾಡಿ, ಅಶ್ವಿನಿ ಆಸ್ಪತ್ರೆ ಬರುವ ರೋಗಿಗಳಿಗೆ ಮಂಗಳೂರು ಹಾಗೂ ಮೈಸೂರು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT