ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ತಲೆಮಾರಿನ ನಿರ್ಲಕ್ಷ್ಯದಿಂದ ಸಂಸ್ಕೃತಿ ನಾಶದತ್ತ: ರಾಣಿ ಮಾಚಯ್ಯ

Published 14 ಅಕ್ಟೋಬರ್ 2023, 5:17 IST
Last Updated 14 ಅಕ್ಟೋಬರ್ 2023, 5:17 IST
ಅಕ್ಷರ ಗಾತ್ರ

ಮಡಿಕೇರಿ: ‘ನಮ್ಮ ಪರಂಪರೆ ಮತ್ತು ಪದ್ಧತಿಗಳಿಂದ ಯುವ ತಲೆಮಾರು ದೂರ ಉಳಿಯುತ್ತಿರುವುದರಿಂದ ಸಂಸ್ಕೃತಿ ನಾಶವಾಗುತ್ತಿದೆ’ ಎಂದು ಹಿರಿಯ ಕಲಾವಿದೆ ರಾಣಿ ಮಾಚಯ್ಯ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟ ಶುಕ್ರವಾರ ಏರ್ಪಡಿಸಿದ್ದ ಲೇಖಕ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರ ‘ಆ ಪನ್ನೆರಂಡ್ ತಿಂಗ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತಂದೆ, ತಾಯಿಯರೂ ಸಹ ತಮ್ಮ ಮಕ್ಕಳಿಗೆ ಪದ್ಧತಿ ಹಾಗೂ ಪರಂಪರೆ ಕುರಿತು ತಿಳಿಸುವ ಕೆಲಸ ಮಾಡುತ್ತಿಲ್ಲ. ಒಂದು ವೇಳೆ ಹೇಳಿದರೂ, ಮಕ್ಕಳು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದ ಇಂದು ಹಬ್ಬಗಳ ಆಚರಣೆಗಳಲ್ಲಿ ಪಾಲ್ಗೊಳ್ಳಲೂ ಯುವತಲೆಮಾರು ಹಿಂದೇಟು ಹಾಕುತ್ತಿದೆ ಎಂದು ಹೇಳಿದ ಅವರು, ಈಚೆಗೆ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಕುಪ್ಪೆಚಾಲೆ ತೊಡುವಂತೆ ಕೇಳಿಕೊಂಡಾಗ ತಾನು ತೊಡುವುದಿಲ್ಲವೆಂದು ಆತ ಹೇಳಿದ ಎಂದು ಪ್ರಸಂಗವೊಂದನ್ನು ಉಲ್ಲೇಖಿಸಿ, ‘ಎಚ್ಚೆತ್ತುಕೊಳ್ಳದೇ ಹೋದರೆ ಸಂಸ್ಕೃತಿ ಅವನತಿಯತ್ತ ಸಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಹಿರಿಯ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ‘ಇಂದಿಗೂ ಜನರು ಮೌಲ್ಯಯುತ ಪುಸ್ತಕಗಳನ್ನು ಹುಡುಕಿಕೊಂಡು ಓದುತ್ತಾರೆ. ಉತ್ತಮ ಪುಸ್ತಕಗಳಿಗೆ ಭವಿಷ್ಯ ಇದೆ’ ಎಂದರು.

ಲೇಖಕ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಮಾತನಾಡಿ, ‘ಇದು ನನ್ನ 5ನೇ ಪುಸ್ತಕ. ಕೊಡವ ಪದ್ಧತಿ, ಪರಂಪರೆಗಳನ್ನು ಅಧ್ಯಯನ ಮಾಡಿ ಈ ಪುಸ್ತಕ ರಚಿಸಿರುವೆ. ಬರಹಗಾರರಿಗೆ ಕೊಡವ ಮಕ್ಕಡ ಕೂಟವು ಅತ್ಯುತ್ತಮ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 74 ಪುಸ್ತಕಗಳಲ್ಲಿ 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ‘ಚಿಗುರೆಲೆಗಳು’ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ‘ಅಗ್ನಿಯಾತ್ರೆ’ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ’ ಪ್ರಶಸ್ತಿ ಸಿಕ್ಕಿದೆ. 4 ಪುಸ್ತಕಗಳು ಕೊಡವ ಸಿನಿಮಾವಾಗಿದೆ. ವೀರಯೋಧ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ’ ಎಂದು ಹೇಳಿದರು.

ಇದು ಕಪಾಟಿನಲ್ಲಿಡುವ ಪುಸ್ತಕವಲ್ಲ

ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ‘ಆ ಪನ್ನೆರಂಡ್ ತಿಂಗ್’ ಪುಸ್ತಕ ಮನೆಯ ಮೇಜಿನ ಮೇಲಿಡುವ ಪುಸ್ತಕವೇ ಹೊರತು ಕಪಾಟಿನಲ್ಲಿಡುವ ಪುಸ್ತಕವಲ್ಲ’ಎಂದು ಹೇಳಿದರು. ಕೊಡಗಿನ ಎಲ್ಲಾ ಹಬ್ಬಗಳು ಪದ್ಧತಿ ಹಾಗೂ ಪರಂಪರೆಯನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಆಚಾರ ವಿಚಾರಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಇದೊಂದು ಮಾರ್ಗದರ್ಶಿ ಪುಸ್ತಕ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT